ಟೀಮ್ ಇಂಡಿಯಾದ ಯಶಸ್ವಿ ಬೌಲರ್ನ ಕ್ರಿಕೆಟ್ ಯಾನ ಮುಕ್ತಾಯ
ಹೊಸದಿಲ್ಲಿ : ಭಾರತ ಕ್ರಿಕೆಟ್ ತಂಡದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಅಶ್ವಿನ್ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ 14 ವರ್ಷಗಳ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಅನ್ನು ಅಂತ್ಯಗೊಳಿಸಿದ್ದಾರೆ. ಅವರು ಇನ್ನು ಐಪಿಎಲ್ನಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.
ಅಶ್ವಿನ್ 106 ಟೆಸ್ಟ್ ಪಂದ್ಯಗಳಲ್ಲಿ 200 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ತಮ್ಮ ಕೆರಿಯರ್ನಲ್ಲಿ 27246 ಎಸೆತಗಳನ್ನು ಎಸೆದಿರುವ ಅವರು 537 ವಿಕೆಟ್ ಕಬಳಿಸಿ ಅನಿಲ್ ಕುಂಬ್ಳೆ ಬಳಿಕ ಭಾರತದ ಪರ ಅತ್ಯಧಿಕ ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.
116 ಏಕದಿನ ಪಂದ್ಯಗಳಲ್ಲಿ 114 ಇನ್ನಿಂಗ್ಸ್ ಆಡಿರುವ ಅಶ್ವಿನ್ 6303 ಎಸೆತಗಳಲ್ಲಿ 156 ವಿಕೆಟ್ ಪಡೆದಿದ್ದಾರೆ. 65 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಅಶ್ವಿನ್ 72 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಮೂರು ಸ್ವರೂಪಗಳಲ್ಲೂ 50ಕ್ಕಿಂತ ಹೆಚ್ಚು ವಿಕೆಟ್ ಕಬಳಿಸಿದ ಟೀಮ್ ಇಂಡಿಯಾ ಬೌಲರ್ ಎನಿಸಿಕೊಂಡಿದ್ದಾರೆ.
38 ವರ್ಷದ ಅಶ್ವಿನ್ ಕೊನೆಯ ಬಾರಿ ಏಕದಿನ ಪಂದ್ಯವಾಡಿದ್ದು 2023ರಲ್ಲಿ. ಇದಾದ ಬಳಿಕ ಅವರು ಭಾರತ ಏಕದಿನ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಹಾಗೆಯೇ 2022ರಲ್ಲಿ ಕೊನೆಯ ಟಿ20 ಪಂದ್ಯವಾಡಿದ್ದ ಅಶ್ವಿನ್ ಟೀಮ್ ಇಂಡಿಯಾ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದರು.
ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದಲ್ಲಿ ರವಿಂದ್ರನ್ ಅಶ್ವಿನ್ ಕಣಕ್ಕಿಳಿದಿದ್ದರು. ಆದರೆ ಮೂರನೇ ಪಂದ್ಯದಿಂದ ಅವರನ್ನು ಕೈ ಬಿಡಲಾಗಿದೆ. ಇನ್ನೂ ಎರಡು ಟೆಸ್ಟ್ ಪಂದ್ಯಗಳು ಬಾಕಿಯಿದ್ದು, ಅದಕ್ಕೂ ಮುನ್ನವೇ ದಿಢೀರ್ ನಿವೃತ್ತಿ ಘೋಷಿಸಿ ರವಿಚಂದ್ರನ್ ಅಶ್ವಿನ್ ಅಚ್ಚರಿ ಮೂಡಿಸಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾದಲ್ಲಿ ಯಶಸ್ವಿ ಸ್ಪಿನ್ನರ್ ಒಬ್ಬರ ಯುಗಾಂತ್ಯವಾದಂತಾಗಿದೆ.