ಬೆಂಗಳೂರಿನಲ್ಲಿ ಕಾಣಿಸಿಕೊಂಡ ಸ್ನೇಹಮಯಿ ಕೃಷ್ಣ : ಕೇಸ್‌ ಹಿಂದೆಗೆಯಲು ಆಮಿಷವೊಡ್ಡಿದ ಆರೋಪ

ಮುಡಾ ಹಗರಣದ ಸಿಬಿಐ ತನಿಖೆಗೆ ಆದೇಶವಾಗುವ ತನಕ ಹೋರಾಟ

ಬೆಂಗಳೂರು : ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಮುಡಾ ಹಗರಣದ ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಇಂದು ಬೆಂಗಳೂರಿನಲ್ಲಿ ಕಾಣಿಸಿಕೊಂಡು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ತನ್ನ ವಿರುದ್ಧ ಸುಳ್ಳು ಕೇಸ್‌ಗಳನ್ನು ದಾಖಲಿಸುವ ಮೂಲಕ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮೈಸೂರಿನ ಚಾಮುಂಡಿ ದೇವಿಗೆ ಬರುವ ಹರಕೆ ಸೀರೆಯನ್ನು ಕಳ್ಳತನ ಮಾಡಲಾಗುತ್ತದೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದರು. ಇದರ ಬೆನ್ನಲ್ಲೇ ಅವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎಫ್​ಐಆರ್ ದಾಖಲಿಸಲಾಗಿತ್ತು. ಆ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್​ ಮಂಗಳವಾರ ತಡೆಯೊಡ್ಡಿತ್ತು. ಅದರ ಬೆನ್ನಲ್ಲೇ ಅವರು ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಹೋರಾಟ ಹತ್ತಿಕ್ಕಲು ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಆರೋಪಿಸಿರುವ ಅವರು, ಹೋರಾಟ ನಿಲ್ಲಿಸಲು ಆಮಿಷವೊಡ್ಡಿದ್ದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.































 
 

ಮುಡಾ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ. ಹೋರಾಟ ನಿಲ್ಲಿಸಲು ನನಗೆ ಆಮಿಷವೊಡ್ಡಿದ್ದರು. ಆದರೆ, ನಾನು ಯಾವುದಕ್ಕೂ ಒಪ್ಪಲಿಲ್ಲ. ಆ ಕಾರಣಕ್ಕೆ ನನ್ನ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ. ಲೋಕಾಯುಕ್ತ ತನಿಖೆಯಾಗಲಿ, ಸಿಬಿಐಗೆ ಬೇಡ ಎಂದು ನನಗೆ ಆಮಿಷವೊಡ್ಡಿದ್ದರು ಎಂದು ತಿಳಿಸಿದ್ದಾರೆ.

ಸಿಬಿಐ ತನಿಖೆ ಬೇಡ ಎಂದು ಆಮಿಷವೊಡ್ಡಿದ್ದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡುತ್ತೇನೆ. ಯಾರು, ಯಾವಾಗ ಆಮಿಷವೊಡ್ಡಿದ್ದರು ಎಂಬ ಬಗ್ಗೆ ದೂರಿನಲ್ಲಿ ಉಲ್ಲೇಖಿಸುತ್ತೇನೆ. ಸಿಬಿಐ ತನಿಖೆಯಾದರೆ ಸಿಕ್ಕಿ ಹಾಕಿಕೊಳ್ಳುವ ಭಯ ಶುರುವಾಗಿದೆ. ಹೀಗಾಗಿ ನನ್ನ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವೇ ಇಲ್ಲ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಈ ಹಿಂದೆಯೇ ನನಗೆ ಭದ್ರತೆ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದೆ. ಆದರೆ ಅವರು ಭದ್ರತೆ ನೀಡಿಲ್ಲ, ಕನಿಷ್ಠ ಹಿಂಬರಹ ಸಹ ನೀಡಿಲ್ಲ. ನನಗೆ ಯಾವ ಪೊಲೀಸ್ ಭದ್ರತೆಯೂ ಬೇಡ. ಸಿದ್ದರಾಮಯ್ಯ ಕೃಪಾಕಟಾಕ್ಷದಲ್ಲಿರುವ ಅಧಿಕಾರಿಗಳು ನನಗೆ ಯಾವ ರೀತಿ ರಕ್ಷಣೆ ನೀಡಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನಗೆ ರಾಜ್ಯದ ಜನರ ರಕ್ಷೆ ಇದೆ, ದೇವರ ಕೃಪೆ ಇದೆ, ಅಷ್ಟೇ ಸಾಕು. ನಾಳೆ ಸಿಬಿಐಗೆ ವಹಿಸುವ ಮಹತ್ವದ ವಿಚಾರಣೆ ನಡೆಯಲಿದೆ. ಜಾರಿ ನಿರ್ದೇಶನಾಲಯವನ್ನು ಪ್ರತಿವಾದಿ ಮಾಡುವಂತೆ ಮನವಿ ಮಾಡಲಿದ್ದೇವೆ. ಇದರಿಂದ ಇ.ಡಿ ತನಿಖೆ ಮಾಹಿತಿ ಸಹ ಹೈಕೋರ್ಟ್‌ಗೆ ಸಿಗಲಿದೆ. ಇದು ನಮ್ಮ ಆರೋಪ ಸಾಬೀತುಪಡಿಸಲು ಅನುಕೂಲವಾಗಲಿದೆ. ಹೋರಾಟ ಹತ್ತಿಕ್ಕುವ ಪ್ರಯತ್ನದ ಬಗ್ಗೆಯೂ ಹೈಕೋರ್ಟ್ ಗಮನಕ್ಕೆ ತರುತ್ತೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top