ಮಂಗಳೂರು : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತ್ ಬೆಂಗಳೂರು ವತಿಯಿಂದ ಕೊಡಮಾಡುವ 2024 ನೇ ಸಾಲಿನ ರಾಜ್ಯ ಪ್ರಶಸ್ತಿಗಳು ಘೋಷಣೆಯಾಗಿದ್ದು, ಮೂಡಬಿದಿರೆಯ ವಿದ್ಯಾ ನಗರಿಯ ಹರಿಕಾರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೂವಾರಿ ಡಾ ಮೋಹನ ಆಳ್ವ ಪ್ರತಿಷ್ಠಿತ “ಜೀವಮಾನ ಸಾಧಕ” -2024” ಪ್ರಶಸ್ತಿಗೆ ಆಯ್ಕೆಯಾದರೆ, ಅಬ್ಬಕ್ಕನ ಕಲಾ ಗ್ಯಾಲರಿಯ ಸ್ಥಾಪಕ, ವೃತ್ತಿಯಲ್ಲಿ ಉಪನ್ಯಾಸಕ, ಪ್ರವೃತ್ತಿಯಲ್ಲಿ ಇತಿಹಾಸ, ಜಾನಪದ ತಜ್ಞ ಹಾಗೂ ಹಲವು ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬಂಟ್ವಾಳದ ಡಾ. ತುಕರಾಮ್ ಪೂಜಾರಿಯವರು ಪ್ರತಿಷ್ಠಿತ “ಹೆಚ್ ಎನ್ ಪ್ರಶಸ್ತಿ- 2024 ಕ್ಕೆ ಆಯ್ಕೆಯಾಗಿದ್ದಾರೆ.
ಹಾಗೆಯೇ ಮಹಿಳಾ ಕ್ಷೇತ್ರದ ಸಾಧನೆಗಾಗಿ ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದು ಪ್ರವೃತ್ತಿಯಲ್ಲಿ ತರಬೇತುದಾರಳು, ಸಂಘಟಕರು ಹಾಗೂ ಬರಹಗಾರ್ತಿಯಾಗಿರುವ ಬಹುಮುಖ ಪ್ರತಿಭೆ ಸುಳ್ಯದ ಡಾ. ಅನುರಾಧಾ ಕುರುಂಜಿಯವರು ಪ್ರಪ್ರಥಮ ಬಾರಿಗೆ ಕೊಡಮಾಡುವ ಪ್ರತಿಷ್ಠಿತ “ಚೈತನ್ಯ ಶ್ರೀ- 2024” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಪರಿಷತ್ತ್ ನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಹಾಗೂ ದ. ಕ ಜಿಲ್ಲಾಧ್ಯಕ್ಷ ಕಿದು ಗೋಪಾಲಕೃಷ್ಣ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಯಲಹಂಕದ ವಿ ಜೆ ಇಂಟರ್ ನ್ಯಾಷನಲ್ ಶಾಲಾ ಮೈದಾನದಲ್ಲಿ ಡಿ. 28 ಮತ್ತು 29 ರಂದುನಡೆಯಲಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸರ್ವಾಧ್ಯಕ್ಷೆಯಾಗಿರುವ ರಂಗಕರ್ಮಿ, ಚಲನಾಚಿತ್ರ ನಟಿ ಉಮಾಶ್ರೀ ರಾಜ್ಯ ಮಟ್ಟದ ನಾಲ್ಕನೇ ಬೃಹತ್ ವೈಜ್ಞಾನಿಕ ಸಮ್ಮೇಳನದಲ್ಲಿ, ಗಣ್ಯ ಅತಿಥಿಗಳ ಸಮ್ಮುಖದಲ್ಲಿ ನಡೆಯಲಿದೆ.