ಮೂರು ದಿನಗಳಿಂದ ಕಾಣಿಸದ ಸ್ನೇಹಮಯಿ ಕೃಷ್ಣ; ಮೊಬೈಲ್ ಸ್ವಿಚ್ ಆಫ್
ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದು ರಾಜ್ಯಾದ್ಯಂತ ಸಂಚಲನ ಉಂಟಾಗಿದೆ.
ಸ್ನೇಹಮಯಿ ಕೃಷ್ಣ ಅವರ ದೂರಿನಿಂದಾಗಿ ಮುಡಾದಲ್ಲಾಗಿರುವ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂದಿತ್ತು. ದಿನಕ್ಕೊಂದರಂತೆ ದಾಖಲೆಗಳನ್ನು ಬಿಡುಗಡೆ ಮಾಡಿ ಸ್ನೇಹಮಯಿ ಕೃಷ್ಣ ಬಲಿಷ್ಠ ಕಾಂಗ್ರೆಸ್ ಸರಕಾರದ ವಿರುದ್ಧ ಸಮರವನ್ನೇ ಸಾರಿದ್ದರು. ಆ ಬಳಿಕ ಅವರಿಗೆ ಬೆದರಿಕೆಯೂ ಇತ್ತು ಎನ್ನಲಾಗಿದೆ.
ಕೆಲದಿನಗಳ ಹಿಂದೆ ಅವರು ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ವಿರುದ್ಧ ಸೀರೆ ಕಳ್ಳತನದ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಕೃಷ್ಣ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಅವರು ನಾಪತ್ತೆಯಾಗಿದ್ದಾರೆ. ಚಾಮುಂಡಿ ದೇವಿಗೆ ಕಾಣಿಕೆ ರೂಪದಲ್ಲಿ ಬಂದಿರುವ ಬೆಲೆಬಾಳುವ ಸೀರೆಗಳನ್ನು ಟೆಂಪೊದಲ್ಲಿ ಲೋಡ್ ಮಾಡಿಕೊಂಡು ಹೋಗುತ್ತಿರುವ ವೀಡಿಯೊವನ್ನೂ ಸ್ನೇಹಮಯಿ ಕೃಷ್ಣ ಬಹಿರಂಗಪಡಿಸಿದ್ದರು. ನಾಪತೆಯಾದ ವಿಚಾರ ತಿಳಿಯುತ್ತಲೇ ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ. ಅವರ ಮೊಬೈಲ್ ಫೋನ್ ಕೂಡ ಮೂರು ದಿನಗಳಿಂದ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ.