ರಜೆ, ಅಧಿವೇಶನ ಮೊಟಕು ಹಿನ್ನೆಲೆಯಲ್ಲಿ ದೀರ್ಘಾವಧಿ ಕಲಾಪ
ಬೆಳಗಾವಿ: ಈ ಸಲದ ಚಳಿಗಾಲದ ಅಧಿವೇಶನ ಸೋಮವಾರ ತಡರಾತ್ರಿಯವರೆಗೂ ನಡೆದು ವಿಶೇಷ ದಾಖಲೆಯೊಂದನ್ನು ಮಾಡಿತು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನ ಸೋಮವಾರ ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಸುಮಾರು 15 ಗಂಟೆಗಳ ಕಾಲ, ಅಂದರೆ ಬೆಳಗ್ಗೆ 10 ಗಂಟೆಗೆ ಆರಂಭವಾಗಿ ರಾತ್ರಿ 12.55ರ ವರೆಗೂ ಸೂಚನಾ ಕಲಾಪ ನಡೆದಿದೆ. ಕಳೆದೊಂದು ದಶಕದಲ್ಲೇ ಇದು ವಿಶೇಷ ದಾಖಲೆಯ ಕಲಾಪವಾಗಿದೆ.
ನಮಗೆ ಅವಕಾಶ ಕೊಡಿ, ಸಮಯವಾಯಿತು ಎಂದು ಕೆಲ ಶಾಸಕರು ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ ಖಾದರ್, ವಿಶ್ವಕಪ್ ಕ್ರಿಕೆಟ್ ನೋಡುವಾಗ ರಾತ್ರಿ 3 ಗಂಟೆಯವರೆಗೆ ಕಾಯುವುದಿಲ್ಲವೇ? ಅದೇ ರೀತಿ ಈಗ ವಿಶ್ವಕಪ್ ಅಂದುಕೊಂಡು ಸಹಕಾರ ಕೊಡಿ ಎಂದರು. ಮಧ್ಯರಾತ್ರಿ ಆದರೂ ತಮ್ಮ ಗಮನ ಸೆಳೆಯುವ ಸೂಚನೆಗೆ ಸಚಿವರ ಉತ್ತರ ಪಡೆಯಲು ರಾಯಚೂರು ಜಿಲ್ಲೆಯ ದೇವದುರ್ಗ ಶಾಸಕಿ ಕರೆಮ್ಮ ನಾಯ್ಕ್ ಹಾಜರಿದ್ದರು.
ತಮ್ಮ ಸರದಿ ಬಂದಾಗ ಇಂಡಿ ಶಾಸಕ ಯಶವಂತರಾಯಗೌಡ, ಕರೆಮ್ಮ ಅವ್ರು ಬಹಳ ಹೊತ್ತಿನಿಂದ ಇದ್ದಾರೆ. ಅವರಿಗೆ ಉತ್ತರ ಕೊಟ್ಟು ಕಳುಹಿಸಿ ಎಂದು ಮನವಿ ಮಾಡಿದರು. ಮಧ್ಯರಾತ್ರಿವರೆಗೂ ನಡೆದ ವಿಧಾನಸಭೆ ಕಲಾಪದ ಕುರಿತು ಪ್ರತಿಕ್ರಿಯಿಸಿರುವ ಯು.ಟಿ ಖಾದರ್, ಇದು ಕಳೆದ 10 ವರ್ಷಗಳಲ್ಲೇ ದಾಖಲೆಯ ಕಲಾಪ ಎಂದರು. ಸಚಿವ ಸತೀಶ್ ಜಾರಕಿಹೊಳಿ ಕೂಡ, ಇದೊಂದು ವಿಶೇಷ ಘಳಿಗೆ ಎಂದು ಬಣ್ಣಿಸಿದ್ದಾರೆ.
ಆದರೆ ತಡರಾತ್ರಿ ವರೆಗೆ ಕಲಾಪ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಕೆ.ಜಿ ಬೋಪಯ್ಯ ಸ್ಪೀಕರ್ ಆಗಿದ್ದಾಗ ಮಧ್ಯರಾತ್ರಿ 1.45ರ ವರೆಗೆ ಕಲಾಪ ನಡೆದಿತ್ತು.
ಬೆಳಗಾವಿಯಲ್ಲಿ 10 ದಿನಗಳ ಕಾಲ ಅಧಿವೇಶನ ನಿಗದಿಯಾಗಿತ್ತು. ಆದರೆ, ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ 9 ದಿನಕ್ಕೆ ಮೊಟಕುಗೊಳಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ನಿಧನದಿಂದಾಗಿ ಕಳೆದ ಮಂಗಳವಾರ ಇಡೀ ದಿನ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಗಿತ್ತು. ಅಲ್ಲದೆ ಬುಧವಾರ ಸರ್ಕಾರಿ ರಜೆ ಘೋಷಣೆಯಿಂದಾಗಿ ಕಲಾಪ ನಡೆಯಲಿಲ್ಲ. ಹೀಗಾಗಿ ಅಧಿವೇಶನ 8 ದಿನಕ್ಕೆ ಇಳಿಕೆಯಾಗಿತ್ತು. ವಿಧಾನಸಭೆಯ ಕಾರ್ಯಕಲಾಪವನ್ನು ಪೂರ್ಣಗೊಳಿಸುವ ಉದ್ದೇಶದಿಂದ ನಂತರದ ದಿನಗಳ ಕಲಾಪದ ಅವಧಿಯನ್ನು ಹೆಚ್ಚಿಸಲಾಗಿದೆ.
ವಕ್ಫ್ ವಿವಾದ, ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ವಿಚಾರಗಳು ಸೋಮವಾರ ಸದನದಲ್ಲಿ ಸದ್ದುಗದ್ದಲಕ್ಕೆ ಕಾರಣವಾಗಿತ್ತು. ಮುನಿರತ್ನ ನಾಯ್ಡು ಜಾತಿ ನಿಂದನೆ ಹಾಗೂ ಅತ್ಯಾಚಾರ ಪ್ರಕರಣ ಕೂಡ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಮುನಿರತ್ನ ರಾಜೀನಾಮೆಗೆ ಕಾಂಗ್ರೆಸ್ ಸದಸ್ಯರು ಆಗ್ರಹಿಸಿ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಧಿಕ್ಕಾರ ಮೊಳಗಿಸಿ ಘೋಷಣೆಗಳನ್ನು ಕೂಗಿದರು. ಒಟ್ಟಾರೆ 8 ವಿಧೇಯಕಗಳಿಗೆ ಅಂಗೀಕಾರ ಪಡೆಯಲಾಯಿತು.