ಪುತ್ತೂರು: ಪುತ್ತೂರು ನಗರಸಭೆಯಲ್ಲಿ 2022ನೇ ಸಾಲಿನಲ್ಲಿ ಹಿಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅವಧಿಯಲ್ಲಿ ನಗರೋತ್ಥಾನ ಹಂತ 4 ಯೋಜನೆಯಲ್ಲಿ ಬಡವರಿಗಾಗಿ ವೈಯುಕ್ತಿಕ ಕಾಮಗಾರಿ ನಡೆದಿದೆ. ದುರಾದೃಷ್ಟಕರ ಸರಕಾರ ಬದಲಾಗಿ ಕಾಂಗ್ರೆಸ್ ಸರಕಾರ ಆ ಫಲಾನುವಿಗಳಿಗೆ ಇನ್ನೂ ಹಣ ಪಾವತಿ ಮಾಡಿಲ್ಲ. ಕಾಂಗ್ರೆಸ್ ವಿರೋಧಿ ನೀತಿಯನ್ನು ಮುಂದಿಟ್ಟು ಬಿಜೆಪಿ ಸರಕಾರ ತಂದ ಯೋಜನೆಗಳಿಗೆ ತಡೆಹಿಡಿದಿದೆ. ಫಲಾನುಭವಿಗಳಿಗೆ ಇನ್ನೂ ಹಣ ಪಾವತಿ ಮಾಡದಿದ್ದರೆ ಫಲಾನುಭವಿಗಳನ್ನು ಸೇರಿಸಿಕೊಂಡು ದೊಡ್ಡಮಟ್ಟದ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಅವರು ಹೇಳಿದರು.
ಅಮೃತನಗರೋತ್ಥಾನ ಹಂತ 4 ಯೋಜನೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಫಲಾನುಭವಿಗಳ ವೈಯಕ್ತಿಕ ಕಾಮಗಾರಿ ನಡೆದರೂ ಸರಕಾರದಿಂದ ಹಣ ಪಾವತಿಯಾಗದ 198ಮಂದಿ ಫಲಾನುಭವಿಗಳಿಗೆ ಶೀಘ್ರದಲ್ಲಿ ಹಣ ಪಾವತಿ ಮಾಡುವಂತೆ ಆಗ್ರಹಿಸಿ ಪುತ್ತೂರು ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಇವತ್ತು ಅವೈಜ್ಞಾನಿಕ ಬಿಟ್ಟಿ ಭಾಗ್ಯಗಳಿಂದ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಈ ಹಿಂದೆ ಸರಕಾರದ ಮಾರ್ಗಸೂಚಿಯಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಶೇ.24.10 ಹಾಗೆ ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟ ಶೇ.7.20 ಹಾಗು ವಿಕಲ ಚೇತನರಿಗೆ ಮೀಸಲಿಟ್ಟ ಶೇ.5 ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿಯವರಿಂದ ಅನುಮೋದನೆ ಪಡೆಯಲಾಗಿತ್ತು. ಅದರಲ್ಲಿ ವೈಯಕ್ತಿಕ ಕಾಮಗಾರಿಗಳಿಗೆ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲ. ಫಲಾನುಭವಿಗಳನ್ನು ಆಯ್ಕೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ತಾಂತ್ರಿಕ ಶಾಖೆಯಿಂದ ದೃಢೀಕರಣವೂ ಆಗಿತ್ತು. ಈ ನಿಟ್ಟಿನಲ್ಲಿ ಫಲಾನುಭವಿಗಳು ಕಾಮಗಾರಿ ಮಾಡಿಕೊಂಡಿದ್ದಾರೆ. ಆದರೆ ಬಡವರ ಪರ ಎಂದು ಹೇಳುತ್ತಿರುವ ಸರಕಾರ ಬಡ ಫಲಾನುಭವಿಗಳಿಗೆ ಹಣ ಬಿಡಗಡೆ ಮಾಡದೆ ದುರಾಡಳಿತ ನಡೆಸುತ್ತಿದೆ ಎಂದರು.
ಇವತ್ತು ರಾಜ್ಯ ಸರಕಾರದ ಸಚಿವ ಸಂಪುಟ ನೋಡಿದರೆ ಎಲ್ಲರೂ ಉದ್ದಟತನದಿಂದ ವರ್ತಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರಸ್‌ನಿಂದ ಒಳ್ಳೆಯ ಆಡಳಿತ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಜವಾಬ್ದಾರಿಯುತ ರಾಜಕೀಯ ಪಾರ್ಟಿಯಾಗಿ ಹೋರಾಟ ಮಾಡುತ್ತಿದೆ. ಎಲ್ಲಿಯ ತನಕ ರಾಜ್ಯದಲ್ಲಿರುವ ದುರಾಡಳಿತ ಕಾಂಗ್ರೆಸ್ ಸರಕಾರ ತೊಲಗುತ್ತದೆಯೋ ಅಲ್ಲಿನ ತನಕ ಹೋರಾಟ ಮುಂದುವರಿಯಲಿದೆ. ಪ್ರಸ್ತುತ ನಮ್ಮ ಆಗ್ರಹ ಪುತ್ತೂರು ನಗರಸಭೆಯಲ್ಲಿ ಯೋಜನೆಯ ಮೂಲಕ ವೈಯುಕ್ತಿಕವಾಗಿ ಫಲಾನುಭವಿಗಳು ಮಾಡಿದ ಕಾಮಗಾರಿಗಳಿಗೆ ಸರಕಾರ ಹಣ ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಫಲಾನುಭವಿಗಳನ್ನು ಸೇರಿಸಿಕೊಂಡು ದೊಡ್ಡ ಮಟ್ಟದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಮಾಜಿ ಸದಸ್ಯ ಬಂಗಾರಡ್ಕ ವಿಶ್ವೇಶ್ವರ ಭಟ್ ಅವರು ಮಾತನಾಡಿ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲುವ ಯೋಜನೆಯನ್ನು ಮಾತ್ರ ಮಾಡುತ್ತಿದೆ. ಕರ್ನಾಟಕ ರಾಜ್ಯ ಸರಕಾರದ ಅಂಕಿಅಂಶ ನೋಡಿದರೆ ಈ ವರ್ಷ ಆರ್ಥಿಕ ಪರಿಸ್ಥಿತಿ ಡೋಲಾಯಮಾನವಾಗಿದೆ. ಆದರೆ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಬೇರೆಲ್ಲ ರಾಜ್ಯದಿಂದ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಹೇಳಿದ್ದಾರೆ. ಆದರೆ ಆ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಅವರು ಕೇಂದ್ರದ ಹಲವು ಯೋಜನೆಗಳು ಜಾರಿಗೆ ಬಂದರೂ ಅದಕ್ಕೆ ರಾಜ್ಯ ಸರಕಾರ ಪಾಲು ಕೊಡದ ಕಾರಣ ಯೋಜನೆ ನಡೆಯುತ್ತಿಲ್ಲ ಎಂದರು. ಇವತ್ತು ನಗರಸಭೆಗೆ ಬಿಡಿ ಗ್ರಾ.ಪಂನಲ್ಲಿ ಒಂದು ಮಾಮೂಲು ಕಾಮಗಾರಿಗೂ ಕೂಡಾ ರಾಜ್ಯದ ಹಣ ಬಿಡುಗಡೆಯಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಜನರಿಗೆ ಅಗತ್ಯವಾದ ಸರಕಾರಿ ಬಸ್‌ಗಳು ಸ್ಥಗಿತವಾಗಿದೆ. ಗ್ಯಾರಂಟಿ ಭಾಗ್ಯದಿಂದ ಕೆಎಸ್‌ಆರ್‌ಟಿಸಿ ಸಂಸ್ಥೆ ಲಾಭಗಳಿಸಿದೆ ಎಂದು ಹೇಳುವ ರಾಜ್ಯ ಸರಕಾರ ಅದನ್ನು ಸದನಲ್ಲಿ ಸ್ಪಷ್ಟಪಡಿಸಬೇಕು. ರಾಜ್ಯ ಸರಕಾರ ಗ್ಯಾರಂಟಿ ಬಿಟ್ಟು ಬೇರೆ ತನ್ನದೇ ಯೋಜನೆಯನ್ನು ಮಾಡಿದ್ದೇವೆ ಎಂದು ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್ ಮೂಲಕ ಪ್ರದರ್ಶಿನ ಮಾಡಲು ಇಷ್ಟರ ತನಕ ಆಗಿಲ್ಲ ಹೊರತು ಹಿಂದಿನ ಅವಧಿಯಲ್ಲಿ ಆದ ಅನುದಾನಕ್ಕೆ ಬ್ಯಾನರ್ ಖರ್ಚು ಮಾಡಿ ಹಾಕುವುದು ಅಗತ್ಯವಿಲ್ಲ. ಹಲವು ಕಡೆ ಅನುದಾನ ಬಿಡುಗಡೆ ಎಂದು ಹೇಳುವ ಶಾಸಕರು ಪರ್ಲಡ್ಕದಿಂದ ತಾಲೂಕು ಆಡಳಿತ ಕಚೇರಿಗೆ ಬರುವ ರಸ್ತೆ ಸಂಪೂರ್ಣ ಹದೆಗೆಟ್ಟಿರುವುದು ಅವರಿಗೆ ಕಾಣುವುದಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿ ಸರಕಾರಕ್ಕೆ ಚುನಾವಣೆಯಲ್ಲಿ ಮೇನೇಜ್ ಮಾಡಲು ಆಗುವುದಿಲ್ಲ ಎಂಬ ಏಕೈಕ ಕಾರಣಕ್ಕೆ ನಿಮಗೆ ಜನ ಮತ ನೀಡಿದ್ದಾರೆ ಹೊರತು ನಿಮ್ಮ ಮೇಲಿನ ಪ್ರೀತಿಯಂದ ಕೊಟ್ಟಿರುವುದಲ್ಲ. ಅದನ್ನು ಕಳಕೊಳ್ಳುವ ದಿನ ದೂರ ಇಲ್ಲ ಎಂದು ಹೇಳಿದರು.
ನಗರಸಭೆ ನಿಕಟಪೂರ್ವ ಅಧ್ಯಕ್ಷ, ಹಾಲಿ ಸದಸ್ಯ ಕೆ.ಜೀವಂಧರ್ ಜೈನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅಮೃತ ನಗರೋತ್ಥಾನದಲ್ಲಿ ಸ್ಥಳೀಯಾಡಳಿತಗಳಿಗೆ ಬಹಳಷ್ಟು ಅನುದಾನ ಬಿಡುಗಡೆಗೊಳಿಸಿದರು. ಪುತ್ತೂರು ನಗರಸಭೆಗೆ ಕೂಡಾ ರೂ. 25.5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಆಗಿನ ಶಾಸಕರಾಗಿದ್ದ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ರೂ. 3 ಕೋಟಿ ವಿಶೇಷ ಅನುದಾನ ಬಿಡುಗಡೆಯಾಗಿತ್ತು ಆದರೆ ರೂ. 5.5 ಕೋಟಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗಗಳಿಗೆ ವೈಯುಕ್ತಿಕ ಅನುದಾನವನ್ನು ನಗರಸಭೆಯಲ್ಲಿ ಕಾದಿರಿಸಲಾಗಿತ್ತು. ರೂ.6 ಕೋಟಿಯಷ್ಟು ವಿವಿಧ ಸವಲತ್ತುಗಳಿಗೆ ಕಾದರಿಸಲಾಗಿತ್ತು. ಬಿಪಿಎಲ್ ಪಟ್ಟಿಯಲ್ಲಿ ರೂ 40 ಸಾವಿರದಂತೆ 185 ಮಂದಿಗೆ ಮನೆ ನಿರ್ಮಾಣ, 417 ಫಲಾನುಭವಿಗಳಿಗೆ ಹೊಸ ಮನೆ ನಿರ್ಮಾಣ ಮತ್ತು ಮನೆ ದುರಸ್ಥಿಗೆ ಅನುದಾನ ಈ ಪೈಕಿ 66 ಮಂದಿಗೆ ಮಾತ್ರ ಹಣ ಪಾವತಿಯಾಗಿದೆ. ಒಟ್ಟು 351 ಮಂದಿಗೆ ಹಣ ಬಿಡುಗಡೆಯಾಗಿಲ್ಲ. ಬಡವರ ಪರ ನಮ್ಮ ಸರಕಾರ ಎಂದು ಹೇಳುವ ಕಾಂಗ್ರೆಸ್ ಬಡವರಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಇನ್ನು ಹಣ ಬಿಡುಗಡೆ ಮಾಡದೇ ಇದ್ದರೆ ನಾವು ಉಪವಾಸ ಸತ್ಯಾಗ್ರಹ ಮಾಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು. ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ಕೃಷ್ಣನಗರ, ಉಪಾಧ್ಯಕ್ಷ ಬಾಲಚಂದ್ರ, ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು, ನಗರ ಮಂಡಲದ ಅಧ್ಯಕ್ಷ ಶಿವ ಕುಮಾರ್ ಕಲ್ಲಿಮಾರು, ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಜೇಶ್ ಬನ್ನೂರು, ಅಪ್ಪಯ್ಯ ಮಣಿಯನಿ, ಸುರೇಶ್ ಆಳ್ವ, ಯುವರಾಜ್ ಪೆರ್ವತೋಡಿ, ನಿತೇಶ್ ಶಾಂತಿವನ, ನಾಗೇಂದ್ರ ಬಾಳಿಗ, ಅನಿಲ್ ತೆoಕಿಲ, ಉಮೇಶ್ ಕೊಡಿಬೈಲ್,ನಿರಂಜನ್,ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು