ಪಾನಿಪುರಿ, ಗೋಬಿಮಂಚೂರಿ ಅಂಗಡಿಯವರೇ ಸುಖಿಗಳು : ತಹಸೀಲ್ದಾರ್‌ ಹೇಳಿಕೆ ಭಾರಿ ವೈರಲ್‌

ಒತ್ತಡದಿಂದ ಬಿಪಿ, ಶುಗರ್‌ ಬಂದಿದೆ, ಕಿಡ್ನಿ, ಲಿವರ್‌ ಎಲ್ಲ ಹೋಗಿದೆ ಎಂದು ನೋವು ತೋಡಿಕೊಂಡ ಅಧಿಕಾರಿ

ಹಾಸನ: ಪಾನಿಪುರಿ, ಗೋಬಿಮಂಚೂರಿ ಅಂಗಡಿ ಇಟ್ಟುಕೊಂಡವರು ನಮಗಿಂತ ಸುಖವಾಗಿ ಬದುಕುತ್ತಿದ್ದಾರೆ ಎಂದು ಹೇಳಿರುವ ತಹಸೀಲ್ದಾರ್‌ ಒಬ್ಬರ ಭಾಷಣದ ವೀಡಿಯೊ ತುಣುಕೊಂದು ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರದ ತಹಸೀಲ್ದಾರ್‌ ಕೆ.ಕೆ.ಕೃಷ್ಣಮೂರ್ತಿ ಸರಕಾರಿ ನೌಕರರ ಸಂಘಟನೆಯ ಪ್ರದಗ್ರಹಣ ಸಮಾರಂಭದಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದು, ಇದು ಪ್ರಾಮಾಣಿಕ ಸರಕಾರಿ ನೌಕರರ ಬದುಕಿನ ಇನ್ನೊಂದು ಮುಖವನ್ನು ತೆರೆದಿಟ್ಟಿದೆ ಎಂದು ಅನೇಕ ಮಂದಿ ಪ್ರತಿಕ್ರಿಯಿಸಿದ್ದಾರೆ.
ಸರಕಾರಿ ಕಚೇರಿಗಳ ಕಾರ್ಯವೈಖರಿ ಹಾಗೂ ಅಧಿಕಾರಿಗಳ ಮೇಲಿನ ಒತ್ತಡದ ಕುರಿತು ಆಕ್ರೋಶ ವ್ಯಕ್ತಪಡಿಸಿ ಕೃಷ್ಣಮೂರ್ತಿ ಈ ಮಾತುಗಳನ್ನು ಹೇಳಿದ್ದಾರೆ. ನಾನು ಒಬ್ಬ ತಹಶೀಲ್ದಾರ್, ಒಂದು ತಾಲೂಕಿನ ಆಡಳಿತದ ಮುಖ್ಯಸ್ಥನಾಗಿದ್ದೇನೆ. ಈಗ ನನಗೆ ಸರ್ಕಾರಿ ನೌಕರಿ ಬೇಡವೇ ಬೇಡ ಎನ್ನವಂತಾಗಿದೆ. ಪಾನಿಪುರಿ, ಗೋಬಿಮಂಚೂರಿ ಅಂಗಡಿ ಇಟ್ಟುಕೊಂಡಿರುವವರು ಸುಖವಾಗಿ ಜೀವನ ಮಾಡುತ್ತಾರೆ. ಅವರಿಗೆ ಸಮಾಧಾನ, ನೆಮ್ಮದಿ ಇದೆ. ಹೆಂಡತಿ, ಮಕ್ಕಳ ಜೊತೆ ಕಾಲ ಕಳೆಯುತ್ತಾನೆ. ಹೆಂಡತಿ, ಮಕ್ಕಳನ್ನು ಎಲ್ಲಿ ಬೇಕಾದರೂ ಕರೆದುಕೊಂಡು ಹೋಗುತ್ತಾನೆ. ದುರದೃಷ್ಟವಶಾತ್ ನಮ್ಮ ಕುಟುಂಬವನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಲು ಆಗುತ್ತಿಲ್ಲ. ನಮಗೆ ಬರೀ ಒತ್ತಡ, ಒತ್ತಡ, ಒತ್ತಡ ಎಂದು ನೋವು ತೋಡಿಕೊಂಡಿದ್ದಾರೆ,

ಶಾಸಕರು ಶಾಸನಗಳನ್ನು ಮಾಡಿಕೊಳ್ಳುತ್ತಾರೆ. ಅವುಗಳನ್ನು ಕಾರ್ಯರೂಪಕ್ಕೆ ತರುವುದು ನಮ್ಮ ಕೆಲಸ. ಎಲ್ಲ ಇಲಾಖೆಗಳ ಸವಲತ್ತುಗಳನ್ನು ಎಲ್ಲರಿಗೂ ತಲುಪಿಸಬೇಕು. ಇತ್ತೀಚೆಗೆ ಮೊಬೈಲ್ ಬಂದಿದೆ, ಅದರಲ್ಲಿ ನಮ್ಮ ಪ್ರೊಗ್ರೆಸ್‌ ವೀಕ್ಷಣೆ ಮಾಡುತ್ತಾರೆ. ಶೋಕಾಸ್ ನೋಟಿಸ್ ಕೊಡುತ್ತಾರೆ, ಒತ್ತಡ ಹೇರುತ್ತಾರೆ, ವರ್ಕ್ ಆಫ್ ಲೋಡ್ ಜಾರಿ ಮಾಡುತ್ತಾರೆ, ವಾಟ್ಸಪ್ ಗ್ರೂಪ್ ಮಾಡುತ್ತಾರೆ, ಸಂಜೆಯೊಳಗೆ ನಾವು ವರದಿ ಕೊಡಬೇಕು. ಅಷ್ಟು ಚಿತ್ರಹಿಂಸೆ ಆಗುತ್ತಿದೆ ಎಂದಿದ್ದಾರೆ.































 
 

ಅವೈಜ್ಞಾನಿಕವಾಗಿ ನಮಗೆ ಟಾರ್ಗೆಟ್ ಕೊಡುತ್ತಿದ್ದಾರೆ. ಕಾಲಾವಕಾಶ ಕೊಟ್ಟರೆ ಕೆಲಸ ಮಾಡುತ್ತೇವೆ. ಇಪ್ಪತ್ತೈದು ಕೆಲಸ ಕೊಟ್ಟು ಕಡಿಮೆ ಅವಧಿ ನೀಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದನ್ನು ಸಮರ್ಥವಾಗಿ ಹೇಳುವ ಧೈರ್ಯವಿಲ್ಲ. ಸಮರ್ಪಕವಾಗಿ ಕೆಲಸ ಕೊಡಿ ನಾವು ಮಾಡುತ್ತೇವೆ ಎಂದು ಹೇಳುವ ಧೈರ್ಯವಿಲ್ಲದಂತಾಗಿದೆ. ಎಷ್ಟು ನೌಕರರು ತಪ್ಪು ಮಾಡದೆ ಬಲಿಪಶು ಆಗುತ್ತಿದ್ದಾರೆ. ಉಗುರಷ್ಟು ಮಾಡಿದ ತಪ್ಪಿಗೆ ಕೊಡಲಿಯಷ್ಟು ಶಿಕ್ಷೆ ನೀಡುತ್ತಿದ್ದಾರೆ. ಏಕಾಏಕಿ ಎಫ್‌ಐಆರ್ ಮಾಡಿ ಅವರ ಮನೆ ಹಾಳು ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮೊದಲು ಶಿಕ್ಷಕ ವೃತ್ತಿಗೆ ಬಾರಿ ಗೌರವ ಇತ್ತು. ಈಗ ಶಿಕ್ಷಕ ವೃತ್ತಿ ಮಾಡಲು ಕಷ್ಟ. ಐದು ರೂಪಾಯಿಯ ಮೊಟ್ಟೆಗೆ ಏಳು ರೂಪಾಯಿ ಆದರೂ ಟೀಚರ್ ಕೊಡಬೇಕು. ಮೊಟ್ಟೆ ಸೈಜ್ ನೋಡಬೇಕು, ಚಿಕ್ಕಿ ಬೇರೆ. ಇಷ್ಟು ಒತ್ತಡದಲ್ಲಿ ಬೇಯುತ್ತಿದ್ದೇವೆ. ಆಧುನಿಕತೆ ಜಾಸ್ತಿ ಆದಂತೆ ತಲೆನೋವು ಕೂಡ ಜಾಸ್ತಿ ಆಗುತ್ತಿದೆ. ಸರ್ಕಾರಿ ‌ನೌಕರರು ಹೈರಾಣಾಗಿ ಹೋಗಿದ್ದಾರೆ. ಬಿಪಿ, ಶುಗರ್, ಕಿಡ್ನಿ, ಲಿವರ್ ಎಲ್ಲ ಹೋಗಿದೆ. ಸಮರ್ಥವಾದ ರೀತಿಯಲ್ಲಿ ಹೇಳೋಣ, ಎದೆಯುಬ್ಬಿಸಿ ಮಾತನಾಡಬೇಕು. ಎಷ್ಟೇ ಮೇಲ್ಪಟ್ಟ ಅಧಿಕಾರಿಯಾದರೂ ಗೌರವಕೊಟ್ಟು ಎದೆಕೊಟ್ಟು ಮಾಡಬೇಕು. ಇಂತಹ ಪರಿಸ್ಥಿತಿಯಿಂದ ನೌಕರರನ್ನು ಹೊರತರಲು ಸಂಘಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಸಂಘಗಳು ಇಲ್ಲದಿದ್ದರೆ ಸರ್ಕಾರಿ ನೌಕರರು ಶೋಷಣೆಗೆ ಒಳಗಾಗುತ್ತಿದ್ದರು. ಶೋಷಣೆಯನ್ನು ತಪ್ಪಿಸಲು ಸಂಘವು ನಿರಂತರ ಹೋರಾಡಬೇಕು. ನಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top