ಗಂಡು ಕಲೆಯಲ್ಲಿ ಮೆರೆದ ಹೆಣ್ಣು ಕಂಠ ಲೀಲಾವತಿ ಬೈಪಾಡಿತ್ತಾಯ

ಯಕ್ಷಗಾನದ ಹಿರಿಯಕ್ಕ ಖ್ಯಾತಿಯ ಪ್ರಥಮ ಮಹಿಳಾ ಭಾಗವತೆ ಕಲಾಲೀನ

ಕಾರ್ಕಳ : ಹೆಣ್ಣುಮಕ್ಕಳು ಯಕ್ಷಗಾನ ನೋಡುವುದಕ್ಕೂ ಸಂಪ್ರದಾಯದ ಕಟ್ಟುಪಾಡುಗಳ ಬೇಲಿ ಇದ್ದ ಕಾಲದಲ್ಲಿ ಮಹಿಳೆಯೊಬ್ಬರು ಯಕ್ಷಗಾನ ಮೇಳದ ಪ್ರಧಾನ ಭಾಗವತರಾಗಿ ಮೇಳದೊಂದಿಗೆ ಊರೂರು ತಿರುಗಾಡಿ ಇಡೀ ರಾತ್ರಿ ವೇದಿಕೆಯಲ್ಲಿ ಹಾಡುತ್ತಾ ಪ್ರಸಂಗವನ್ನು ಮುನ್ನಡೆಸುತ್ತಿದ್ದರು ಎಂಬುದು ಆ ಕಾಲಕ್ಕೊಂದು ಅಚ್ಚರಿಯೇ ಆಗಿತ್ತು. ಗಂಡುಕಲೆಯೆಂದೇ ಅರಿಯಲ್ಪಡುವ ಯಕ್ಷಗಾನದಲ್ಲಿ ಹೆಣ್ಣು ಧ್ವನಿಯೊಂದು ಮೊಳಗಿ ಉಚ್ಛ್ರಾಯ ಸ್ಥಿತಿಗೆ ತಲುಪಿ ಯಕ್ಷಗಾನದ ಅಗಾಧ ಸಾಧ್ಯತೆಗಳಿಗೊಂದು ಮುನ್ನುಡಿ ಬರೆದಿತ್ತು. ಹೀಗೆ ವೃತ್ತಿಪರ ಮೇಳಗಳ ಮೊದಲ ಮಹಿಳಾ ಭಾಗವತೆ ಎಂದು ಖ್ಯಾತರಾಗಿದ್ದ ಯಕ್ಷಗಾನದ ಹಿರಿಯಕ್ಕ ಲೀಲಾವತಿ ಬೈಪಾಡಿತ್ತಾಯ ಡಿ.14ರಂದು ಕಲಾಲೀನರಾಗಿ ಕಲಾಲೋಕವನ್ನು ಶೋಕಸಾಗರದಲ್ಲಿ ಮುಳುಗಿಸಿದ್ದಾರೆ.

ಗಂಡು ಮೆಟ್ಟಿನ ಕಲೆಯಲ್ಲಿ ಅದರಲ್ಲೂ ವೀರರಸ ಪ್ರಧಾನ ಸನ್ನಿವೇಶಗಳಲ್ಲಿ ಹೆಣ್ಣು ಕಂಠವನ್ನು ಮೆರೆಸಿ, ಯಕ್ಷಗಾನ ಕಲೆಯತ್ತ ಮಹಿಳೆಯರೂ ಆಕರ್ಷಿತರಾಗುವಂತೆ ಮೇಲ್ಪಂಕ್ತಿ ಹಾಕಿಕೊಟ್ಟವರು ಅವರು. ರಾತ್ರಿಯಿಡೀ ನಿದ್ದೆಗೆಟ್ಟು ಊರಿಂದೂರಿಗೆ ಮೇಳವು ಹೋದಲ್ಲೆಲ್ಲಾ ತಿರುಗಾಟ ಮಾಡಿದ್ದಷ್ಟೇ ಅಲ್ಲದೆ, ರಾತ್ರಿಯಿಡೀ ನಿದ್ದೆ ಬಿಟ್ಟು ಬೆಳಗ್ಗಿನವರೆಗಿನ ಇಡೀ ಪ್ರಸಂಗವನ್ನು ಆಡಿಸಿದ ಕೀರ್ತಿಯೂ ಇದೆ. ಶಾಲೆಗೆ ಹೋಗದೆಯೂ ಭಾಗವತಿಕೆಯಲ್ಲಿ ವ್ಯಕ್ತವಾಗುವ ಸಾಹಿತ್ಯ ಶುದ್ಧಿ, ಭಾಷಾ ಶುದ್ಧಿ ಅವರ ಹೆಗ್ಗಳಿಕೆಯಾಗಿತ್ತು. ಕಾಳಿಂಗ ನಾವಡರಂಥ ಶ್ರೇಷ್ಠರ ಜೊತೆಗೂ ಹಾಡಿ ಅವರ ಮೆಚ್ಚುಗೆಗೂ ಪಾತ್ರರಾದವರು ಎಂಬುದು ಲೀಲಾವತಿ ಬೈಪಾಡಿತ್ತಾಯರ ಅಗ್ಗಳಿಕೆ. ಸಾಮಾಜಿಕ ಪ್ರೋತ್ಸಾಹವಾಗಲಿ, ಮಾಧ್ಯಮಗಳ ಪ್ರಚಾರವಾಗಲಿ ಇಲ್ಲದ ಕಾಲದಲ್ಲೇ ಅವರು ಪುರುಷ ಪ್ರಧಾನ ಕಲೆಯಲ್ಲಿ ಬೆಳೆದ ಬಗೆ ಅದ್ಭುತ.































 
 

ಲೀಲಾವತಿ ಬೈಪಡಿತ್ತಾಯ ಅವರು ಯಕ್ಷಗಾನ ರಂಗದ ಮೊದಲ ಮಹಿಳಾ ವೃತ್ತಿಪರ ಭಾಗವತರು. ಕೇರಳದ ಕಾಸರಗೋಡಿನ ಮಧೂರಿನಲ್ಲಿ 1947 ಮೇ 23ರಂದು ಜನಿಸಿದರು. ಅವರು ಹಿರಿಯ ಹಿಮ್ಮೇಳ ಮದ್ದಳೆ ವಾದಕ ಹರಿನಾರಾಯಣ ಬೈಪಡಿತ್ತಾಯರ ಪತ್ನಿ. ಗಂಡ ಹೆಂಡತಿ ಇಬ್ಬರೂ ವೃತ್ತಿಪರ ಯಕ್ಷಗಾನ ಕಲಾವಿದರಾಗಿದ್ದದ್ದು ಕೂಡ ಇದೇ ಮೊದಲು.

ಲೀಲಾವತಿ ಅವರು ಕುಂಬಳೆ, ಬಪ್ಪನಾಡು, ಸುಬ್ರಹ್ಮಣ್ಯ, ಧರ್ಮಸ್ಥಳ, ತಲಕಳ ಮತ್ತಿತರ ಮೇಳಗಳಲ್ಲಿ ಭಾಗವತಿಕೆ ನಡೆಸಿದರು. ಪರಕೆದ ಪಿಂಗಾರ, ದೇವಿಮಹಾತ್ಮೆ, ದಕ್ಷಯಜ್ಞ, ಕರ್ಣಪರ್ವ, ಸುಧನ್ವ ಮೋಕ್ಷ, ವಜ್ರಕೋಗಿಲೆ ಮುಂತಾದ ಪ್ರಸಂಗಗಳಲ್ಲಿ ಇವರು ಹಾಡಿದ ಪದ್ಯಗಳು ಪ್ರಸಿದ್ಧವಾಗಿವೆ. ಆಳದಂಗಡಿ ಮೇಳದಲ್ಲಿ ಲೀಲಾವತಿ ಅವರು ಪ್ರಧಾನ ಭಾಗವತರು. ತೆಂಕು, ಬಡಗು ಶೈಲಿಗೆ ಮತ್ತು ಕನ್ನಡ, ತುಳು ಪ್ರಸಂಗಗಳಿಗೆ ಅವರು ಹಾಡುಗಾರಿಕೆ ಮಾಡಿದ್ದಾರೆ.

ಅವರಿಗೆ 75 ತುಂಬಿದ ಸಂದರ್ಭದಲ್ಲಿ, ಪತಿಯೊಂದಿಗೆ ಅವರನ್ನು ಶಿಷ್ಯರೆಲ್ಲ ಸೇರಿಕೊಂಡು ಶ್ರೀ ಹರಿಲೀಲಾ-75 ಯಕ್ಷಾಭಿನಂದನಂ, ಶಿಷ್ಯಾಭಿವಂದನಂ, ಯಕ್ಷನಾದೋತ್ಸವಂ ಹೆಸರಿನಲ್ಲಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸಿ ಗೌರವಿಸಿರುವುದು ಇತಿಹಾಸ.

ಬಡತನದಿಂದಾಗಿ ಓದು ಬರಹ ಇರಲಿಲ್ಲ. ಶಾಲೆಗೆ ಹೋಗದೆಯೇ, ಅಣ್ಣನಿಂದ, ಅಕ್ಕಪಕ್ಕದವರಿಂದ ಅಕ್ಷರಾಭ್ಯಾಸ ಮಾಡಿಸಿಕೊಂಡವರು ಅವರು. ಹಿಂದಿ ವಿಶಾರದ ಕೂಡ ಮಾಡಿದ್ದರೆಂಬುದು ಉಲ್ಲೇಖಾರ್ಹ. ಸಂಗೀತ ಕಲಿತಿದ್ದ ಅವರನ್ನು ತೆಂಕುತಿಟ್ಟಿನ ಅಗ್ರಮಾನ್ಯ ಹಿಮ್ಮೇಳ ಗುರುಗಳಾಗಿದ್ದ ಹರಿನಾರಾಯಣ ಬೈಪಾಡಿತ್ತಾಯರು ಕೈಹಿಡಿದ ಬಳಿಕ ಯಕ್ಷಗಾನ ಕಲಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಈಗಿನ ತಾಲೂಕು ಕೇಂದ್ರ ಕಡಬ ಪರಿಸರ ಅವರ ಯಕ್ಷಗಾನ ಕಲಿಕೆಗೆ ಪೂರಕವಾಗಿತ್ತು.

ಮನೆಗಳಲ್ಲಿ ವಿಶೇಷ ಶುಭ ಕಾರ್ಯಕ್ರಮವಿದ್ದರೆ ಅಲ್ಲೊಂದು ತಾಳಮದ್ದಳೆ ಕೂಟ ಇದ್ದೇ ಇರುತ್ತಿತ್ತು. ಹೀಗೆ ಕಲಿಯುತ್ತಲೇ, ಹೆಣ್ಣು ಮಕ್ಕಳಿಗೆ ಯಕ್ಷಗಾನ ನೋಡುವುದಕ್ಕೂ ಅವಕಾಶವಿಲ್ಲದ ಸಂಪ್ರದಾಯವಿದ್ದ ಆ ಕಾಲದಲ್ಲಿ ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರಲ್ಲೊಬ್ಬರಾಗಿ ಅವರು ಬೆಳೆದದ್ದು ಇತಿಹಾಸ. ಪರಿಣಾಮ ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಪಟ್ಟ. ಪತಿಯೊಂದಿಗೆ ಅಂದಿನ ಸುಬ್ರಹ್ಮಣ್ಯ, ಪುತ್ತೂರು, ಕದ್ರಿ, ಕರ್ನಾಟಕ, ಅರುವ (ಅಳದಂಗಡಿ), ಕುಂಬಳೆ ಬಪ್ಪನಾಡು ಮೇಳ, ಕುಂಬಳೆ, ತಲಕಳ ಮುಂತಾದ ಡೇರೆ-ಬಯಲಾಟ ಮೇಳಗಳಲ್ಲಿ ನಿರಂತರ ಇಪ್ಪತ್ತು ವರ್ಷಗಳ ಕಾಲ ವೃತ್ತಿ ಕಲಾವಿದರಾಗಿ 25ಕ್ಕೂ ಹೆಚ್ಚು ವರ್ಷಗಳಿಂದ ಅತಿಥಿ ಕಲಾವಿದರಾಗಿಯೂ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ್ದಾರೆ.

ದಿಗ್ಗಜರಾದ ಶೇಣಿ ಗೋಪಾಲಕೃಷ್ಣ ಭಟ್, ಬಣ್ಣದ ಮಾಲಿಂಗ, ಹೊಸಹಿತ್ಲು ಮಹಾಲಿಂಗ ಭಟ್, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗ್ಡೆ, ಅಳಿಕೆ ರಾಮಯ್ಯ ರೈ, ಕೆ.ಗೋವಿಂದ ಭಟ್, ಪುತ್ತೂರು ಕೃಷ್ಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಶಂಕರನಾರಾಯಣ ಸಾಮಗರು, ರಾಮದಾಸ ಸಾಮಗರು, ಎಂ.ಎಲ್.ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್, ಪ್ರಭಾಕರ ಜೋಷಿ ಮುಂತಾದ ಯಕ್ಷಲೋಕದ ಘಟಾನುಘಟಿ ದಿಗ್ಗಜರನ್ನು ತಾಳಮದ್ದಳೆಯಲ್ಲಿ, ಯಕ್ಷಗಾನ ಪ್ರದರ್ಶನಗಳಲ್ಲಿ ಕುಣಿಸಿದ, ಮಾತನಾಡಿಸಿದ ಅನುಭವ ಪಡೆದುಕೊಂಡ ಲೀಲಾವತಿ ಅವರಿಗೆ, ಪ್ರತಿಯೊಂದು ಹೆಜ್ಜೆಯಲ್ಲಿಯೂ ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸುತ್ತಲೇ ಬಂದವರು ಪತಿ ಹರಿನಾರಾಯಣರು. ಬಲಿಪ ಭಾಗವತರು, ದಾಮೋದರ ಮಂಡೆಚ್ಚರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಬಲ್ಲಾಳರು, ದಿವಾಣ ಭೀಮ ಭಟ್, ಅಡೂರು ಮದ್ಲೆಗಾರರು ಮುಂತಾದ ಅಗ್ರಗಣ್ಯ ಹಿಮ್ಮೇಳ ಕಲಾವಿದರ ಸಲಹೆ, ಮಾರ್ಗದರ್ಶನಗಳು ಅವರನ್ನು ಪ್ರಬುದ್ಧ ಕಲಾವಿದೆಯಾಗಿ ರೂಪಿಸಿದ್ದವು.

ಲೀಲಾವತಿ ಬೈಪಾಡಿತ್ತಾಯರ ಕಲಾ ತಪಸ್ಸನ್ನು ರಾಜ್ಯ ಸರಕಾರ ಗುರುತಿಸಿ 2010ನೇ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಅಷ್ಟೇ ಅಲ್ಲದೆ, 2012ರಲ್ಲಿ ಕರ್ನಾಟಕ ಸರಕಾರ ಕೊಡಮಾಡಿದ ಸಾಧಕ ಹಿರಿಯ ನಾಗರಿಕರು ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ. ರಾಣಿ ಅಬ್ಬಕ್ಕ ಪುರಸ್ಕಾರ, ವಿಶ್ವ ತುಳು ಸಮ್ಮೇಳನ ಗೌರವ, ಅಗರಿ ಪ್ರಶಸ್ತಿ, ಸುಳ್ಯದ ರಂಗಮನೆ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಮಂಗಳೂರು ವಿವಿಯ ಯಕ್ಷ ಮಂಗಳಾ ಪ್ರಶಸ್ತಿ, ಉಡುಪಿ ಕಲಾರಂಗ ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ. ಜತೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯೆಯಾಗಿಯೂ ಅವರು ಕೆಲ ಕಾಲ ಕೆಲಸ ಮಾಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top