ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಾರಥ್ಯದಲ್ಲಿ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಡಿ.28 ,29 ರಂದು ಜರಗುವ ದ್ವಿತೀಯ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಧರ್ಮಸಂಗಮ ಕಾರ್ಯಕ್ರಮದ ಕಾರ್ಯಲಯ ಭಾನುವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಉದ್ಘಾಟನೆಗೊಂಡಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಕಾರ್ಯಾಲಯ ಉದ್ಘಾಟಿಸಿ, ಪ್ರಥಮ ವರ್ಷ ಅದ್ದೂರಿಯಾಗಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಈ ವರ್ಷವೂ ಅದಕ್ಕಿಂತ ಅದ್ದೂರಿಯಾಗಿ ನಡೆಯುವುದರಲ್ಲಿ ಯಾವೂದೇ ಸಂಶಯವಿಲ್ಲ ಹಿಂದೂಗಳ ಒಳಿತಿಗಾಗಿ ನಡೆಯುವ ಕಲ್ಯಾಣೋತ್ಸವದಲ್ಲಿ ಯಾವೂದೇ ವೈಮನಸ್ಸಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಬೇಕು. ಧರ್ಮ ಸಂರಕ್ಷಣೆಗಾಗಿ ಈ ಅದ್ದೂರಿ ಕಾರ್ಯಕ್ರಮದ ರೂವಾರಿ ಅರುಣ್ ಪುತ್ತಿಲರಿಗೆ ಧನ್ಯವಾದ ಸಲ್ಲಿಸಿದರು.
ಸಮಿತಿ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಈ ಬಾರಿ ನಾವೆಲ್ಲ ಒಂದಾಗಿದ್ದೇವೆ. ಹಿಂದೂ ಧರ್ಮಕ್ಕೆ ಆಗುತ್ತಿರುವ ಅನ್ಯಾಯಕ್ಕೆ ನಮ್ಮ ಒಗ್ಗಟ್ಟೊಂದೇ ಪರಿಹಾರ. ಇಂತಹ ಧಾರ್ಮಿಕ ಕಾರ್ಯಕ್ರಮದಿಂದ ನಾವೆಲ್ಲ ಒಂದು ಎನ್ನುವುದನ್ನು ಸಾರಬಹುದು ಎಂದರು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪ್ರತಿ ಹಿಂದೂಗಳ ಮನೆಗೆ ತಲುಪಲಿದೆ. ಎರಡು ದಿನದ ಕಾರ್ಯಕ್ರಮವನ್ನು ನಮ್ಮ ಕಾರ್ಯಕ್ರಮವೆಂಬಂತೆ ಎಲ್ಲಾ ಹಿಂದೂ ಬಂಧುಗಳು ಪಾಲ್ಗೊಳ್ಳಬೇಕು ಮತ್ತು ಪ್ರತಿ ಮನೆಗಳಿಂದ ಹೊರಕಾಣಿಕೆ ಸಮರ್ಪಣೆಯಾಗಬೇಕು ಎಂದರು.
ದೇವಳದ ಅರ್ಚಕರಾದ ವಿ.ಎಸ್ ಭಟ್ ದೀಪಪ್ರಜ್ವಲನೆಗೊಳಿಸಿ ಶುಭಹಾರೈಸಿದರು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಗೌರವಾಧ್ಯಕ್ಷ ಉದ್ಯಮಿ ಶಶಾಂಕ್ ಕೊಟೇಚಾ, ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು ವಂದಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿಮಠ ಕಾರ್ಯಕ್ರಮ ನಿರೂಪಿಸಿದರು.