ಸಾವರ್ಕರ್ ಅಖಂಡ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಹಾನ್ ಹೋರಾಟಗಾರ : ಡಾ.ಕಲ್ಲಡ್ಕ ಪ್ರಭಾಕರ ಭಟ್‍ | ವಿವೇಕಾನಂದ ಇಂಜಿನಿಯರಿಂಗ್‍ ಕಾಲೇಜಿನಲ್ಲಿ ನೂತನ ‘ಸಾವರ್ಕರ್’ ಸಭಾಭವನ ಉದ್ಘಾಟನೆ

ಪುತ್ತೂರು: ವಿನಾಯಕ ದಾಮೋದರ ಸಾವರ್ಕರ್ ಅಖಂಡ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಹಾನ್ ಹೋರಾಟಗಾರ. ಅವರ ಜೀವನ ಚರಿತ್ರೆಯನ್ನು ಸರಿಯಾಗಿ ಓದದವರು ಮಾತ್ರ ಸಾವರ್ಕರ್ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಲು ಸಾಧ್ಯ. ಅವರನ್ನು ಸರಿಯಾಗಿ ತಿಳಿದವರಿಗೆ ಈ ಪ್ರಶ್ನೆ ಬರಲು ಸಾಧ್ಯವೇ ಇಲ್ಲ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಲಾದ ಸಾವರ್ಕರ್ ಸಭಾಭವನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಶನಿವಾರ ಅವರು ಮಾತನಾಡಿದರು.

ಸಾವರ್ಕರ್ ದೇಶದ ಪರ ಹೋರಾಟಕ್ಕಾಗಿ 14 ವರ್ಷ ಕಠಿಣ ಜೈಲು ಶಿಕ್ಷೆ ಅನುಭವಿಸಿದರು. ಇಷ್ಟೊಂದು ದೀರ್ಘ ಕಾಲ ಯಾವ ಸ್ವಾತಂತ್ರ್ಯ ಹೋರಾಟಗಾರನೂ ಜೈಲು ಶಿಕ್ಷೆ ಅನುಭವಿಸಿಲ್ಲ. ಅವರಿಗೆ ನ್ಯಾಯಾಲಯ ೨ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇಂಥ ಶಿಕ್ಷೆಯೂ ಯಾವ ಸ್ವಾತಂತ್ರ್ಯ ಹೋರಾಟಗಾರನಿಗೆ ಸಿಕ್ಕಿಲ್ಲ. ಐಶಾರಾಮಿ ಜೈಲಿನಲ್ಲಿ ಆರು ತಿಂಗಳು ಕಳೆದವರನ್ನು ಕೂಡ  ತ್ಯಾಗಿಗಳೆಂದು ಕರೆಯಲಾಗುತ್ತದೆ. ನಿಜವಾದ ತ್ಯಾಗಿಯಾದ ಸಾವರ್ಕರ್ ಅವರನ್ನು ಏನು ಮಾಡಿದ್ದಾನೆ ಎಂದು ಪ್ರಶ್ನಿಸುತ್ತಾರೆ. ಇದು ನಿಜಕ್ಕೂ ವಿಪರ್ಯಾಸ. ಹಿಂದುತ್ವ ಮತ್ತು ಭಾರತೀಯ ಸ್ವಾತಂತ್ರ್ಯಕ್ಕಾಗಿ ವರ್ಷಗಳ ಕಾಲ ಹೋರಾಡಿದ ಸಾವರ್ಕರ್ ಅವರ ಹೆಸರನ್ನು ಈ ಸಭಾಭವನಕ್ಕೆ ಇಟ್ಟಿರುವುದು ಅರ್ಥಪೂರ್ಣ ಎಂದವರು ಹೇಳಿದರು.































 
 

ವಿವೇಕಾನಂದ ವಿದ್ಯಾಸಂಸ್ಥೆಗಳು ದೇಶಕ್ಕಾಗಿ ಬದುಕುವ ವಿಶನ್ ಮತ್ತು ಮಿಶನ್ ಇಟ್ಟುಕೊಂಡು ಕೆಲಸ ಮಾಡುತ್ತಿವೆ. ಆಧುನಿಕ ಶಿಕ್ಷಣದೊಂದಿಗೆ ಈ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಕೆಲಸ ಮಾಡುತ್ತಿವೆ ಎಂದವರು ಹೇಳಿದರು.

ಸಾಮಾನ್ಯರ ಜಮೀನನ್ನು ವಕ್ಫ್‌ಗೆ ಬರೆದುಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಶಾಲೆ, ಮಂದಿರ, ವಿಧಾನಸೌಧ, ಸಂಸತ್ತಿನ ಭೂಮಿಯೂ ನಾಳೆ ವಕ್ಫ್ ಗೆ ಹೋಗಬಹುದು. ಇವತ್ತು ರಾಜಕಾರಣಿಗಳಿಂದ ದೇಶ ಉದ್ಧಾರ ನಿರೀಕ್ಷಿಸಲು ಸಾಧ್ಯವಿಲ್ಲ. ಹಿಂದೂಗಳು ಉಳಿಯಬೇಕಾದರೆ ಭಾರತ ಉಳಿಯಬೇಕು. ಕ್ರೈಸ್ತ, ಮುಸ್ಲಿಂ ಮುಂತಾದವರಿಗೆ  ಅವರದ್ದೇ ಆದ ಹತ್ತಾರು ದೇಶಗಳಿಗೆ. ಆದರೆ ಹಿಂದೂಗಳಿಗೆಂದು ಇಡೀ ಜಗತ್ತಿನಲ್ಲಿರುವುದು ಭಾರತ ಮಾತ್ರ. ಹಿಂದೂಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದವರು ಎಚ್ಚರಿಸಿದರು.

ಸ್ವಿಸ್ ಸಿಂಗಾಪುರ ಓವರ್‌ಸೀಸ್ ಎಂಟರ್‌ಪ್ರೈಸಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಚಂದ್ರಕಾಂತ ರಾವ್ ಇನ್ನಾ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯಕ್ಕೆ ಪ್ರವೇಶ ಮಾಡುವುದಲ್ಲ, ಭವಿಷ್ಯ ನಿರ್ಮಾಣ ಮಾಡಬೇಕು. ಭವಿಷ್ಯದ ಶಿಲ್ಪಿಗಳಾದ ವಿದ್ಯಾರ್ಥಿಗಳು, ಸುಸ್ಥಿರ ಮೂಲಸೌಕರ್ಯ, ಡಿಜಿಟಲ್ ಬೆಳವಣಿಗೆ, ಬಯೋ ಟೆಕ್ನಾಲಜಿ ಅಭಿವೃದ್ಧಿ, ಪರಿಸರ ಸುಸ್ಥಿರತೆಯತ್ತ ಕಾಳಜಿ ವಹಿಸಬೇಕು. ಪರಿಸರ ಸ್ನೇಹಿ ಅಭಿವೃದ್ಧಿಯೊಂದಿಗೆ ಸವಾಲುಗಳನ್ನೇ ಅವಕಾಶವಾಗಿ ಪರಿವರ್ತಿಸಿಕೊಳ್ಳಬೇಕು. ಸಮಸ್ಯೆಗಳ ಬಗ್ಗೆ ಚರ್ಚಿಸಬಾರದು, ಪರಿಹಾರದ ಬಗ್ಗೆ ಚರ್ಚಿಸಬೇಕು ಎಂದು ಹೇಳಿದರು.

ತೂಗು ಸೇತುವೆಗಳ ಸರದಾರ ಎಂದೇ ಖ್ಯಾತರಾದ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರಧ್ವಾಜ್ ಕಾರ್ಯಕ್ರಮ ಉದ್ಘಾಟಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ. ಕೃಷ್ಣ ಭಟ್ ಉಪಸ್ಥಿತರಿದ್ದರು. ವಿವೇಕಾನಂ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕರಾದ ಸುಬ್ರಹ್ಮಣ್ಯ ಭಟ್ ಟಿ.ಎಸ್. ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹೇಶ್ ಪ್ರಸನ್ನ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿ ಕೋಶಾಧಿಕಾರಿ ಮುರಳೀಧರ ಭಟ್ ವಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕರಾದ ಹರಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top