ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟ ‘ಕ್ರೀಡಾರಶ್ಮಿ’ ಶನಿವಾರ ನಡೆಯಿತು.
ಪುತ್ತೂರು ನಗರ ಠಾಣಾ ಪೋಲೀಸ್ ಉಪ ನಿರೀಕ್ಷಕ ಅಂಜನೇಯ ರೆಡ್ಡಿ ಪಾರಿವಾಳ ಹಾರಿಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಇಂದು ಶಿಸ್ತು ಮತ್ತು ಸಮಯ ಪಾಲನೆಗಳೇ ಬದುಕಿನ ಪ್ರಮುಖ ಅಸ್ತ್ರಗಳಾಗಿದ್ದು ಅವುಗಳನ್ನು ರೂಢಿಸಿಕೊಳ್ಳಲು ಕ್ರೀಡಾ ಚಟುವಟಿಕೆಗಳು ಸಹಕಾರಿ. ಸಹಕಾರ ರತ್ನ ಸವಣೂರು ಸೀತಾರಾಮ ರೈಯವರ ಸಂಚಾಲಕತ್ವದಲ್ಲಿ ನಡೆಯುತ್ತಿರುವ ವಿದ್ಯಾರಶ್ಮಿ ಸಂಸ್ಥೆಗಳು ಅವರ ವ್ಯಕ್ತಿತ್ವದಂತೆಯೇ ಶಿಸ್ತುಬದ್ಧವಾಗಿದೆ ಮತ್ತು ಇಲ್ಲಿನ ವಿದ್ಯಾರ್ಥಿಗಳು ಬೌದ್ಧಿಕವಾಗಿ ಬಹು ಎತ್ತರದಲ್ಲಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ ನಿರ್ದೇಶಕ, ಅಮೇರಿಕಾದ ಅರಿಝೋನಾ ಪಬ್ಲಿಕ್ ಸರ್ವಿಸಸ್‌ನಲ್ಲಿ ಪ್ರಿನ್ಸಿಪಾಲ್ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಮಹೇಶ್ ರೈ ಧ್ವಜಾರೋಹಣಗೈದರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಯೇ ಇರಲಿ, ಶೈಕ್ಷಣಿಕ ವಿಚಾರಗಳೇ ಇರಲಿ ಶಿಸ್ತು ಎಂಬುದರಲ್ಲಿ ರಾಜಿ ಇಲ್ಲ. ಪಟ್ಟಣದ ಸಂಸ್ಥೆಗಳಲ್ಲಿ ನೀಡಲಾಗುವ ಎಲ್ಲಾ ವ್ಯವಸ್ಥೆಗಳೂ ಸಹ ನಮ್ಮ ಈ ಹಳ್ಳಿಯ ಸಂಸ್ಥೆಯಲ್ಲಿ ಇವೆ ಎಂದು ಹೇಳಿ ಸರ್ವರಲ್ಲಿ ಸಹಕಾರ ಕೋರಿದರು.
ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್’ ನಿರ್ದೇಶಕ, ಸವಣೂರಿನ ಹಿರಿಯ ಉದ್ಯಮಿ ಸವಣೂರು ಎನ್. ಸುಂದರ ರೈ, ಸಂಸ್ಥೆಯ ಆಡಳಿತಾಧಿಕಾರಿ, ನ್ಯಾಯವಾದಿ ಅಶ್ವಿನ್ ಎಲ್. ಶೆಟ್ಟಿ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ್ ಪ್ರಸಾದ್ ರೈ ಕಲಾಯಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ., ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಸ್ವಾಗತಿಸಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸನಾ ಫಾತಿಮಾ ನಿರೂಪಿಸಿದರು.
ಕಾರ್ಯಕ್ರಮದಲ್ಲಿ 10ನೇ ತರಗತಿಯ ಗೌತಮಿ ಡಿ.ಟಿ. ಪ್ರಮಾಣ ವಚನ ಬೋಧನೆ ಮತ್ತು ವಿಘ್ನೇಶ್ ಬಿ. ಶೆಟ್ಟಿ ಕ್ರೀಡಾ ಜ್ಯೋತಿಯ ನಿರ್ವಹಣೆ ಮಾಡಿದರು. 8ನೆ ತರಗತಿಯ ಸಜಾ ಎ. ವಂದಿಸಿದರು. ವಿದ್ಯಾರಶ್ಮಿ ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ್ ಆಳ್ವ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಭರತ್ ಕ್ರೀಡಾಕೂಟದ ಒಟ್ಟು ನಿರ್ವಹಣೆಗಳನ್ನು ನಿಭಾಯಿಸಿದರು.