ಕಬಡ್ಡಿ ಆಡುತ್ತಿರುವಾಗಲೇ ಹೃದಯಾಘಾತ
ಬೆಂಗಳೂರು : ರಾಜ್ಯಮಟ್ಟದ ಕಬಡ್ಡಿ ಆಟಗಾರ ಕಾರ್ಕಳದ ನಡುಮನೆ ಪ್ರೀತಮ್ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶುಕ್ರವಾರ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರೀತಮ್ ಭಾಗವಹಿಸಿದ್ದರು. ಈ ಪಂದ್ಯಾಟದ ನಡುವೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಅಂಗಳದಲ್ಲೇ ಕುಸಿದು ಬಿದ್ದ ಅವರನ್ನು ಸಹ ಆಟಗಾರರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲಾಗಲೇ ಪ್ರೀತಮ್ ಶೆಟ್ಟಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಟ್ಲುಪಾಡಿ ನಡುಮನೆ ನಿವಾಸಿಯಾಗಿರುವ ಪ್ರೀತಮ್ ಶೆಟ್ಟಿ ಅತ್ಯುತ್ತಮ ಕಬಡ್ಡಿ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ಕೆಲವೇ ದಿನಗಳಲ್ಲಿ ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳಲು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ ವಿಧಿಯಾಟ ಕಬಡ್ಡಿ ಅಂಗಳದಲ್ಲೇ ಯುವ ಆಟಗಾರ ತನ್ನ ಪ್ರಾಣಬಿಟ್ಟಿದ್ದಾರೆ. ಪ್ರೀತಮ್ ಶೆಟ್ಟಿ ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.
ಕೆಲ ತಿಂಗಳ ಹಿಂದೆಯಷ್ಟೇ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದ ಕಬಡ್ಡಿ ಆಟಗಾರ ನಿರ್ಭಯ್ ಸಿಂಗ್ ಹಾತೂರ್ ಹೃದಯಾಘಾತದಿಂದ ನಿಧನರಾಗಿದ್ದರು.