ಹೊಸದಿಲ್ಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದು, ದಿಲ್ಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ತಿಂಗಳು 97ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಅಡ್ವಾಣಿ, ಕಳೆದ ಕೆಲವು ತಿಂಗಳುಗಳಿಂದ ಪದೇಪದೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಜುಲೈ ನಂತರ ಅವರ ನಾಲ್ಕನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದೆ. ಅವರು ಈ ಹಿಂದೆ ಅಪೋಲೋ ಆಸ್ಪತ್ರೆ ಮತ್ತು ದಿಲ್ಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (ಏಮ್ಸ್) ಚಿಕಿತ್ಸೆ ಪಡೆದಿದ್ದರು.
ಹಿರಿಯ ನಾಯಕ ಶೀಘ್ರ ಗುಣಮುಖರಾಗಲಿ ಎಂದು ಬಿಜೆಪಿ ವಕ್ತಾರ ಕೆ ಕೃಷ್ಣ ಸಾಗರ್ ರಾವ್ ಹಾರೈಸಿದ್ದಾರೆ. ನವೆಂಬರ್ 8, 1927ರಂದು ಈಗ ಪಾಕಿಸ್ಥಾನದಲ್ಲಿರುವ ಕರಾಚಿಯಲ್ಲಿ ಜನಿಸಿದ ಅಡ್ವಾಣಿ ಅವರು 1942ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದರು. ಬಿಜೆಪಿಯಲ್ಲಿ ಅನೇಕ ಪ್ರಮುಖ ಹುದ್ದೆಗಳನ್ನು ನಿಭಾಯಿಸಿರುವ ಅವರು ಪಕ್ಷದ ಬೆಳವಣಿಗೆಯ ರೂವಾರಿ ಆಗಿದ್ದಾರೆ.
ಪಕ್ಷ ಮತ್ತು ದೇಶಕ್ಕೆ ಸುದೀರ್ಘ ಸೇವೆ ಸಲ್ಲಿಸಿದ್ದ ಅವರು 2014ರಿಂದಿಔಚೆಗೆ ಸಕ್ರಿಯ ರಾಜಕೀಯದಿಂದ ದೂರ ಸರಿದಿದ್ದಾರೆ. ದೇಶದ ಗೃಹ ಸಚಿವರಾಗಿ ಮತ್ತು ನಂತರ 1999 ಮತ್ತು 2004ರಲ್ಲಿ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನಿಸಿದ್ದಾರೆ.