ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಒಂದು ದೇಶ ಒಂದು ಚುನಾವಣೆ ಮಸೂದೆ ಡಿ.16ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘೆವಾಲ್ ಡಿ.16 ರಂದು ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡಿಸಲಿದ್ದಾರೆಂದು ಮೂಲಗಳು ತಿಳಿಸಿವೆ.
ಮಸೂದೆ ಮಂಡನೆ ನಂತರ ಚರ್ಚೆಗಾಗಿ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕಳುಹಿಸಲಾಗುವುದು. ಪ್ರಧಾನಿ ಮೋದಿ ನೇತೃತ್ವದ ಸಂಪುಟ ಇತ್ತೀಚೆಗೆ ಮಸೂದೆಗೆ ಒಪ್ಪಿಗೆ ನೀಡಿತ್ತು. ಒಪ್ಪಿಗೆ ಬೆನ್ನಲ್ಲೇ ಈಗ ಬಿಲ್ ಮಂಡಿಸಲು ತಯಾರಿ ನಡೆಸಲಾಗುತ್ತಿದೆ.
ಲೋಕಸಭೆಗೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಆಶಯ ಹೊಂದಿರುವ ಈ ಮಸೂದೆ ದೇಶದ ಇತಿಹಾಸದಲ್ಲೇ ಮೈಲುಗಲ್ಲು ಎಂದು ವ್ಯಾಖ್ಯಾನಿಸಲಾಗಿದೆ. ಈಗಾಗಲೇ ಮಸೂದೆ ಕುರಿತಂತೆ ವ್ಯಾಪಕವಾಗಿ ಚರ್ಚೆಗಳು ನಡೆದಿವೆ. ಪ್ರತ್ಯೇಕ ಸಮಿತಿಯೊಂದು ಒಂದೇ ಸಲಕ್ಕೆ ಚುನಾವಣೆ ನಡೆಸುವ ಸಾಧಕ ಬಾಧಕಗಳನ್ನು ಅಧ್ಯಯನ ನಡೆಸಿದೆ.
ಈಗ ದೇಶದಲ್ಲಿ ಪ್ರತಿವರ್ಷ ಒಂದಲ್ಲ ಒಂದು ಚುನಾವಣೆ ನಡೆಯುತ್ತಲೇ ಇರುತ್ತದೆ. ಇದರಿಂದ ಸಂಪನ್ಮೂಲ ಮತ್ತು ಸಮಯ ಅನಗತ್ಯವಾಗಿ ಖರ್ಚಾಗುತ್ತದೆ. ಅಭಿವೃದ್ಧಿ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಕೇಂದ್ರ ಸರಾಕರ ಚಿಂತನೆ ನಡೆಸಿದೆ.
ಆದರೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳೆಲ್ಲ ಇದನ್ನು ಬಲವಾಗಿ ವಿರೋಧಿಸುತ್ತಿವೆ. ಮಸೂದೆ ಜಾರಿಗೆ ಬಂದರೂ ವಿಪಕ್ಷ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಅನುಷ್ಠಾನಗೊಳಿಸದಿರಲು ಹಲವು ರಾಜ್ಯಗಳು ತೀರ್ಮಾನಿಸಿವೆ.