ತೆಲಂಗಾಣ ಸರಕಾರದ ಮೇಲೆ ತಿರುಗಿದ ಅಭಿಮಾನಿಗಳ ಆಕ್ರೋಶ
ಹೈದರಾಬಾದ್ : ಪುಷ್ಪ-2 ಸೂಪರ್ ಹಿಟ್ ಚಿತ್ರದ ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಮಧ್ಯಾಹ್ನ ಬಂಧನಕ್ಕೊಳಗಾಗಿದ್ದ ಜನಪ್ರಿಯ ಹೀರೊ ಅಲ್ಲು ಅರ್ಜುನ್ ಒಂದು ರಾತ್ರಿಯನ್ನಿಡೀ ಜೈಲಿನಲ್ಲಿ ಕಳೆದು ಇಂದು ಮುಂಜಾನೆ ಬಿಡುಗಡೆಯಾಗಿದ್ದಾರೆ.
ಕೆಳಹಂತದ ಕೋರ್ಟ್ ಅವರಿಗೆ 14 ದಿನ ನ್ಯಾಯಂಗ ಬಂಧನ ವಿಧಿಸಿದರೂ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಆದರೆ ಕೋರ್ಟ್ ತೀರ್ಪಿನ ಪ್ರತಿ ಜೈಲು ಸೇರದ ಹಿನ್ನೆಲೆಯಲ್ಲಿ ಅವರ ಬಿಡುಗಡೆ ತಡವಾಗಿದೆ. ಹೀಗಾಗಿ ರಾತ್ರಿಯಿಡೀ ಜೈಲಿನಲ್ಲೇ ಕಳೆದು ಮುಂಜಾನೆ ಅವರು ಬಿಡುಗಡೆ ಹೊಂದಿದ್ದಾರೆ.
ಪುಷ್ಪ-2 ಪ್ರೀಮಿಯರ್ ಶೋ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದಿದ್ದು, ಈ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿ ಓರ್ವ ಮಹಿಳೆ ಸಾವಿಗೀಡಾಗಿ, ಆಕೆಯ ಮಗಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಆರೋಪಿ ಎಂದು ಹೆಸರಿಸಿದ್ದಾರೆ. ‘ಪುಷ್ಪ 2’ ಚಿತ್ರದ ಪ್ರೀಮೀಯರ್ ಪ್ರದರ್ಶನದ ವೇಳೆ ಅಲ್ಲು ಅರ್ಜುನ್ ಸಂಧ್ಯಾ ಥಿಯೇಟರ್‌ಗೆ ಹೋಗಿದ್ದರು. ಅಲ್ಲು ಅರ್ಜುನ್ ಆಗಮನದಿಂದ ಅಭಿಮಾನಿಗಳು ಒಮ್ಮೆಲೇ ಮುಗಿಬಿದ್ದರು. ಈ ಕಾರಣಕ್ಕೆ ಕಾಲ್ತುಳಿತ ಉಂಟಾಯಿತು. ಈ ಕಾಲ್ತುಳಿತದಲ್ಲಿ ರೇವತಿ ಹೆಸರಿನ ಮಹಿಳೆ ಸಾವನ್ನಪ್ಪಿದ್ದರು. ಅವರ ಮಗನಿಗೆ ಗಾಯಗಳಾಗಿವೆ. ಈ ಘಟನೆಗೆ ಸಂಬಂಧಿಸಿ ರೇವತಿ ಪತಿ ದೂರು ಮಾಡಿದ್ದರು. ಈ ಬೆನ್ನಲ್ಲೇ ಎಫ್ಐಆರ್ ದಾಖಲಿಸಿರುವ ಪೊಲೀಸರು, ಅಲ್ಲು ಅರ್ಜುನ್ ಅವರನ್ನು ಎ11 ಆರೋಪಿ ಆಗಿ ಮಾಡಿ ಅವರನ್ನು ಬಂಧಿಸಿದ್ದಾರೆ.
ಬಂಧನ ಅವರ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ಈ ಘಟನೆಯಲ್ಲಿ ಅಲ್ಲು ಅರ್ಜುನ್ 11ನೇ ಆರೋಪಿ. ಉಳಿದವರ ವಿರುದ್ಧ ಕ್ರಮ ಕೈಗೊಳ್ಳುವುದರ ಬದಲು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದೇಕೆ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.
ಅಲ್ಲು ಅರ್ಜುನ್ ಬಂಧನ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. ಅಲ್ಲು ಅರ್ಜುನ್ ಬಂಧನಕ್ಕೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಟೀಕಿಸಲಾಗುತ್ತಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಚಿತ್ರರಂಗದವರ ಬಗ್ಗೆ ಕಾಂಗ್ರೆಸ್‌ಗೆ ಗೌರವವಿಲ್ಲ ಮತ್ತು ಅಲ್ಲು ಅರ್ಜುನ್ ಬಂಧನ ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ದುರ್ಘಟನೆ ರಾಜ್ಯ ಮತ್ತು ಸ್ಥಳೀಯ ಆಡಳಿತದ ಕಳಪೆ ವ್ಯವಸ್ಥೆಗಳಿಗೆ ಸ್ಪಷ್ಟ ನಿದರ್ಶನವಾಗಿದೆ. ಈಗ ಆ ಆಪಾದನೆಯನ್ನು ತಿರುಗಿಸಲು ಇಂತಹ ಪ್ರಚಾರದ ಸ್ಟಂಟ್‌ಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.