ಪುತ್ತೂರು: ಕೌಕ್ರಾಡಿ ಗ್ರಾಮದ ವೃದ್ಧೆ ದಲಿತೆ ರಾಧಮ್ಮ ಅವರ ಮನೆಯನ್ನು ಕಾನೂನು ಬಾಹಿರವಾಗಿ, ಆದೇಶರಹಿತವಾಗಿ ದ್ವಂಸ ಮಾಡಿದ ಕಡಬ ತಹಸೀಲ್ದಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಮಾನತು ಮಾಡಬೇಕು ಹಾಗೂ ಸುಳ್ಳು ಕೇಸು ದಾಖಲಿಸಿದ ವಿಎ ಅವರನ್ನು ಉಚ್ಛಾಟಿಸುವಂತೆ ಒತ್ತಾಯಿಸಿ ದಲಿತ, ರೈತ ಕಾರ್ಮಿಕ ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಕಿಲ್ಲೇ ಮೈದಾನದ ಬಳಿ ಇರುವ ಅಮರ್ ಜವಾನ್ ಸ್ಮಾರಕದ ಬಳಿ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಸಿಪಿಎಂ ಮುಖಂಡ ಬಿ.ಎಂ.ಭಟ್ ಮಾತನಾಡಿ, ರಾಜ್ಯ ರೈತ ಸಂಘದ ಸುರೇಶ್ ಭಟ್ ಮಾತನಾಡಿ, ಬುದ್ದಿವಂತರ ಜಿಲ್ಲೆಯಾದ ದ.ಕ. ಜಿಲ್ಲೆಯಲ್ಲಿ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಮಾತ್ರ ಸ್ವಾತಂತ್ರ್ಯ ಎಂದು ಬಿಂಬಿಸಲಾಗಿದೆ. ದಲಿತೆ ರಾಧಮ್ಮಅವರ ಕುಟುಂಬವನ್ನು ಬೀದಿಗೆ ತಳ್ಳಬೇಕು ಎಂಬುವುದು ಅವರ ತಲೆಯಲ್ಲಿದ್ದರೆ ಉತ್ತರ ಕರ್ನಾಟಕದ ರೀತಿಯಲ್ಲಿ ನಾವು ತಾಲೂಕು ಕಚೇರಿ ಮುಂದೆ ಟೆಂಟ್ ಹಾಕಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಮಾಡಬೇಕಾಗಬಹುದು. ಅದಕ್ಕೆ ಅಧಿಕಾರಿಗಳು ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದ ಅವರು, ಕೌಕ್ರಾಡಿಯಲ್ಲಿ ರಾಧಮ್ಮರ ಮನೆಯನ್ನು ಯಾವುದೇ ಆದೇಶವಿಲ್ಲದೆ ತಹಸೀಲ್ದಾರ್ ಕೆಡವಿರುವುದು ಖಂಡನೀಯ. ತಕ್ಷಣ ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಬಂಧಿಸಬೇಕು. ಕೆಡವಿದ ಮನೆಯನ್ನು ಮರು ನಿರ್ಮಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಮುಖಂಡ, ನ್ಯಾಯವಾದಿ ಬಿ.ಎಂ.ಭಟ್ ಮಾತನಾಡಿ, ತಾಯಿಯ ಎದೆ ಹಾಲು ಕುಡಿದು ತಾಯಿಯ ಎದೆಗೆ ತುಳಿಯುವ ಕೆಲಸ ಅಧಿಕಾರಿಗಳು ಮಾಡಿದ್ದಾರೆ. ನೀವು ನಿಜವಾದ ಸಂವಿಧಾನ ಪ್ರೇಮಿಗಳಾದರೆ ತಕ್ಷಣ ಮನೆ ಪುನರ್ ನಿರ್ಮಿಸಿಕೊಡಬೇಕು. ರೇಣುಕಾ ಅವರ ಪ್ರಕರಣ ಹೈಕೋರ್ಟ್ ನಲ್ಲಿದೆ. ನಿಮಗೆ ಬೇಕಾದರೆ ಅಪೀಲ್ ಮಾಡಿ ಎಂದ ಅವರು, ಜಿಲ್ಲಾಧಿಕಾರಿಗಳು ವಸ್ತುಸ್ಥಿತಿ ವರದಿ ಮಾಡಲು ನೋಟೀಸ್ ನೀಡಿದ್ದರೂ ಕಾನೂನು ಬಾಹಿರವಾಗಿ ಮನೆ ದ್ವಂಸ ಮಾಡಿದ್ದಾರೆ. ಒಬ್ಬರು ವಕೀಲರು ನೀಡಿದ ನೋಟೀಸನ್ನು ಹೈಕೋರ್ಟ್ ನೋಟೀಸು ಎಂದು ನ್ಯಾಯಾಲಯಕ್ಕೆ ಅವಮಾನ ಮಾಡಿದ್ದಾರೆ ಕಡಬ ತಹಸೀಲ್ದಾರ್. ತಕ್ಷಣ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ ಅವರು, ರಾಧಮ್ಮ ಅವರನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ಕುಳಿತುಕೊಳ್ಳಿಸಿ ಅವರಿಂದಲೇ ನ್ಯಾಯ ಸಿಕ್ಕುವ ಹಾಗೆ ಮಾಡುತ್ತೇವೆ ಎಂದು ಹೇಳಿದರು.
ಕಾರ್ಮಿಕ ಮುಖಂಡೆ ಈಶ್ವರಿ ಮಾತನಾಡಿ, ರೇಣುಕಾ ಎಂಬವರ ಮೇಲಿನ ದ್ವೇಷದಿಂದ ಅಮಾಯಕಿ ರಾಧಾಮ್ಮ ಅವರ ಮನೆಯನ್ನು ಕೆಡವಲಾಗಿದೆ. ಇದು ಕಾನೂನು ಬಾಹಿರವಾಗಿದ್ದು, ವಸ್ತುಸ್ಥಿತಿ ಅರಿತುಕೊಂಡು ಅಧಿಕಾರಿಗಳು ನಡೆದುಕೊಳ್ಳಬೇಕಿತ್ತು. ಅದರಲ್ಲೂ ಅಧಿಕಾರಿಗಳು ತಪ್ಪು ಮಾಡಿದರೆ ಜಿಲ್ಲಾಧಿಕಾರಿಗಳು ಬುದ್ಧಿವಾದ ಹೇಳಬೇಕಿತ್ತು. ರಾಧಮ್ಮ ಅವರಿಗೆ ನ್ಯಾಯ ಸಿಗುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಪ್ರತಿಭಟನೆಯಲ್ಲಿ ಸಿಪಿಎಂ (ಐ) ಮುಖಂಡ ಪಿ.ಕೆ.ಸತೀಶನ್, ಬೆಳ್ತಂಗಡಿ ದಲಿತ ಮುಖಂಡ ಪೊಡಿಯ, ಪ್ರಮುಖರಾದ ಸುಬ್ಬ, ಲತೇಶ್, ಶ್ಯಾಮ್ ಭಟ್, ಜಿಲ್ಲಾ ಕರ್ಮಿಕ ಸಂಘಟನೆಯ ಜಯಶ್ರೀ, ಪುಷ್ಪ ಕುಮಾರಿ, ರಾಧಮ್ಮ ಮತ್ತು ಮನೆಯವರು ಉಪಸ್ಥಿತರಿದ್ದರು. ಪ್ರತಿಭಟನೆ ಬಳಿಕ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಪುತ್ತೂರು ಸಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಿದರು.