ಕನ್ನಡದಲ್ಲೇ ತೀರ್ಪು ಪ್ರಕಟ : ಕರ್ನಾಟಕ ಹೈಕೋರ್ಟ್‌ ಐತಿಹಾಸಿಕ ಉಪಕ್ರಮ

ಜನಸಾಮಾನ್ಯರಿಗೆ ತೀರ್ಪು ಅರ್ಥವಾಗಬೇಕೆಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು

ಬೆಂಗಳೂರು: ಕರ್ನಾಟಕ ಹೈಕೋರ್ಟ್​​ ಇದೇ ಮೊದಲ ಬಾರಿಗೆ ಪ್ರಕರಣವೊಂದರ ತೀರ್ಪನ್ನು ಕನ್ನಡದಲ್ಲೇ ಪ್ರಕಟಿಸಿ ಐತಿಹಾಸಿಕ ಉಪಕ್ರಮವೊಂದನ್ನು ಕೈಗೊಂಡಿದೆ. ಡಿಸೆಂಬರ್ 11ರಂದು ಭಾರತ ಭಾಷಾ ದಿವಸವಾಗಿದ್ದು, ಆ ಪ್ರಯುಕ್ತ ಸಾಂಕೇತಿಕವಾಗಿ ಡಿಸೆಂಬರ್ 12ರಂದು ನ್ಯಾ. ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಸಿ.ಎಂ.ಜೋಶಿ ಅವರಿದ್ದ ಪೀಠ ನಂಜಾವಧೂತ ಸ್ವಾಮಿ ವಿರುದ್ಧ ಎಸ್.ಲಿಂಗಣ್ಣ ಪ್ರಕರಣದಲ್ಲಿ ಕನ್ನಡದಲ್ಲೇ ತೀರ್ಪು ನೀಡಿದೆ.

ತುಮಕೂರಿನ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯಲ್ಲಿರುವ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ ವಿರುದ್ಧ ಎಸ್‌ ಲಿಂಗಣ್ಣ ಎನ್ನುವರು ಸಲ್ಲಿಸಿದ್ದ ಮೂಲ ಮೇಲ್ಮನವಿಯನ್ನು ಪೀಠ ಪುರಸ್ಕರಿಸಿದೆ. ಈ ಪ್ರಕರಣದ ತೀರ್ಪನ್ನು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಪ್ರತ್ಯೇಕವಾಗಿ ನ್ಯಾಯಮೂರ್ತಿಗಳು ಬರೆದಿದ್ದಾರೆ. ತೀರ್ಪಿನ ಕಾರ್ಯಾನುಷ್ಠಾನ ಭಾಗವನ್ನು ನ್ಯಾ. ದೀಕ್ಷಿತ್‌ ಅವರು ಕನ್ನಡದಲ್ಲಿ ಓದುವ ಮೂಲಕ ಗಮನಸೆಳೆದರು.































 
 

ಕನ್ನಡದಲ್ಲೇ ತೀರ್ಪನ್ನು ಓದಿದ ನಂತರ ನ್ಯಾ. ದೀಕ್ಷಿತ್‌ ಅವರು ಇಂಗ್ಲೆಂಡ್​ನಲ್ಲಿ 1730ರವರೆಗೆ ಲ್ಯಾಟಿನ್ ಭಾಷೆಯಲ್ಲಿ ಕೋರ್ಟ್ ಕಲಾಪ ನಡೆಯುತ್ತಿತ್ತು. 1730ರಿಂದ ಅವರ ಸ್ವಭಾಷೆ ಇಂಗ್ಲಿಷ್‌​ನಲ್ಲೇ ಕಲಾಪ ಆರಂಭಿಸಿದ್ದರು. ಜನಸಾಮಾನ್ಯರಿಗೆ ಕೋರ್ಟ್​ಗಳ ತೀರ್ಪು ಏನಿದೆ ಎಂದು ತಿಳಿಯಬೇಕೆಂದು ಈ ಉಪಕ್ರಮ. ಕನ್ನಡ ಅವಸಾನವಾಗಬಾರದೆಂದರೆ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳು ಕನ್ನಡದಲ್ಲೇ ವ್ಯವಹರಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಮೊದಲಿಗೆ ಇಂಗ್ಲಿಷ್‌ನಲ್ಲಿ ತೀರ್ಪು ಓದಿದ ನ್ಯಾ. ದೀಕ್ಷಿತ್‌ ಬಳಿಕ ಕನ್ನಡದಲ್ಲಿ ಓದಿದರು. ಮೇಲ್ಕಾಣಿಸಿದ ಕಾರಣಗಳಿಂದಾಗಿ ಈ ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ. ಏಕಸದಸ್ಯ ನ್ಯಾಯಾಧೀಶರ ಪ್ರಶ್ನಿತ ತೀರ್ಪು ಮತ್ತು ಆದೇಶವನ್ನು ರದ್ದುಗೊಳಿಸಲಾಗಿದೆ. ಪ್ರತಿವಾದಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ. ಟಿಒಎಸ್‌ ಸಂಖ್ಯೆ ೧/೨೦೨೩ರಲ್ಲಿ ಮೇಲ್ಮನವಿದಾರರ ದಾವೆಯನ್ನು ಪುನರುಜ್ಜೀವನಗೊಳಿಸಲಾಗಿದೆ. ಅದನ್ನು ಕಾನೂನು ರೀತ್ಯಾ ವಿಚಾರಣೆ ಮತ್ತು ವಿಲೇವಾರಿ ಮಾಡಬೇಕಾಗುತ್ತದೆ. ಯಾರೂ ವೆಚ್ಚವನ್ನು ಭರಿಸುವಂತಿಲ್ಲ ಎಂದರು.

ಆನಂತರ ವಕೀಲರೊಬ್ಬರು ಇದು ಸಾಮಾನ್ಯ ಜನರಿಗೆ ಅರ್ಥವಾಗುತ್ತದೆ. ನ್ಯಾಯಮೂರ್ತಿಗಳ ಈ ತೀರ್ಪು ಇತರ ನ್ಯಾಯಮೂರ್ತಿಗಳಿಗೆ ಉತ್ತಮ ಸಂದೇಶ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ನ್ಯಾ. ದೀಕ್ಷಿತ್‌ ಹೌದು, ಸಾಮಾನ್ಯ ಜನರಿಗೆ ಅರ್ಥವಾಗಬೇಕು. ಇಂಗ್ಲಿಷ್‌ ಅಥವಾ ಅವರಿಗೆ ತಿಳಿಯದ ಭಾಷೆಯಲ್ಲಿ ಹೇಳಿದರೆ ಆಗದು. ನಾವು ನಮ್ಮ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ಈ ಹಿಂದೆ ನ್ಯಾ. ಅರಳಿ ನಾಗರಾಜ್‌ ಅವರು ಸಹ ಕನ್ನಡದಲ್ಲಿಯೇ ತೀರ್ಪು ನೀಡುವ ಮೂಲಕ ನಾಡಿನ ಗಮನ ಸೆಳೆದಿದ್ದರು. ಆದರೆ, ಅವರ ಕನ್ನಡ ತೀರ್ಪು ಇಂಗ್ಲಿಷ್‌ ತೀರ್ಪಿನ ಅನುವಾದವಾಗಿತ್ತು. ಎರಡೂ ತೀರ್ಪುಗಳನ್ನು ಮೂಲ ತೀರ್ಪೆಂದು ಪರಿಗಣಿಸಬೇಕೆಂದು ಅವರು ಆ ವೇಳೆ ಹೇಳಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top