ಚೆನ್ನೈ: ತಮಿಳುನಾಡಿನ ದಿಂಡಿಗಲ್ನಲ್ಲಿರುವ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 7 ರೋಗಿಗಳು ಮೃತಪಟ್ಟಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ. ಗುರುವಾರ ರಾತ್ರಿ ಘಟನೆ ಸಂಭವಿಸಿದೆ. ಸ್ಥಳೀಯ ಅಧಿಕಾರಿಗಳ ಪ್ರಕಾರ ಮೃತರಲ್ಲಿ ಒಂದು ಮಗು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ನೆಲ ಮಹಡಿಯ ರಿಸೆಪ್ಷನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಕ್ಷಣಮಾತ್ರದಲ್ಲಿ ಇಡೀ ಆಸ್ಪತ್ರೆಯನ್ನು ವ್ಯಾಪಿಸಿದೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದೆಂದು ಶಂಕಿಸಲಾಗಿದೆ.
ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಮತ್ತು ರಕ್ಷಣಾ ಕಾರ್ಯಾಚರಣೆಮಾಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಕಾರ, ಅಗ್ನಿ ಅವಘಡದಿಂದಾಗಿ ಆಸ್ಪತ್ರೆಯಲ್ಲಿ ಆವರಿಸಿದ ದಟ್ಟವಾದ ಹೊಗೆಯಿಂದ ಹಲವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ರಿಸೆಪ್ಶನ್ ಹಾಲ್ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ಪ್ರಾಥಮಿಕ ತನಿಖೆಯಿದ ತಿಳಿದುಬಂದಿದೆ.
ಸುಮಾರು 50 ಆಂಬ್ಯುಲೆನ್ಸ್ಗಳನ್ನು ಬಳಸಿಕೊಂಡು ರೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ, ಸಮೀಪದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಕನಿಷ್ಠ 30 ರೋಗಿಗಳನ್ನು ಚಿಕಿತ್ಸೆಗಾಗಿ ದಿಂಡಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ದಳದ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸಪಟ್ಟಿದ್ದಾರೆ. ಆಸ್ಪತ್ರೆಯ ಒಳಗೆ ಸಿಲುಕಿರುವವರನ್ನು ಪತ್ತೆಹಚ್ಚಿ ರಕ್ಷಿಸುವ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ವೆಂಟಿಲೇಟರ್ನಲ್ಲಿ ಇಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.