ಸಮ್ಮೋಹನಗೊಳಿಸಿದ ಕ್ಯಾಂಡಿಯನ್, ಕಥಕ್ ನೃತ್ಯ
ವಿದ್ಯಾಗಿರಿ(ಮೂಡುಬಿದಿರೆ) : ಆಳ್ವಾಸ್ ವಿರಾಸತ್ ವೇದಿಕೆಯಲ್ಲಿ ನಿನ್ನೆ ರಾತ್ರಿ ನಡೆದ ಕಥಕ್ ನೃತ್ಯ ವರ್ಷಧಾರೆ ಪ್ರೇಕ್ಷಕರನ್ನು ಸಮ್ಮೋಹನಗೊಳಿಸಿತು. ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ 30ನೇ ವರ್ಷದ ಆಳ್ವಾಸ್ ವಿರಾಸತ್‌ನ ಮೂರನೇ ದಿನದ ಗಾಯನದ ಬಳಿಕ ಮೂಡಿ ಬಂದ ಸಾಂಸ್ಕೃತಿಕ ವೈಭವ ಮೋಡಿ ಮಾಡುವಂತಿತ್ತು. ಆಶಿಶಬಂಧು ಚಟರ್ಜಿ ನಿರ್ದೇಶನದಲ್ಲಿ ಪ್ರಸ್ತುಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರ ಕಥಕ್ ವರ್ಷಧಾರೆಯನ್ನೇ ಸುರಿಸಿತು. ತುಂತುರು ಮಳೆಯನ್ನು ಸಂಭ್ರಮಿಸುವ ಋತುವಿನ ದರ್ಶನ ನೀಡಿತು. ಉತ್ತರದ ಕಥಕ್ ಬಳಿಕ ನೃತ್ಯಲೋಕವು ದ್ವೀಪ ರಾಷ್ಟ್ರ ಶ್ರೀಲಂಕಾ ಸಂಸ್ಕೃತಿಗೆ ಹೆಜ್ಜೆ ಇಟ್ಟಿತು.

ಅಖಿಲ ಪರಿಮಳನ್ ನಿರ್ದೇಶನದ ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಭೂಮಿ ಮತ್ತು ದ್ವೀಪ ದೇಶದ ಚಮತ್ಕಾರದ ಶಕ್ತಿಯೆಡೆಗೆ ಕೊಂಡೊಯ್ಯಿತು. ತಿರುಗುವ ಚಕ್ರ, ಹಾರುವ ಬೆಂಕಿ ಉಂಡೆ ಇತ್ಯಾದಿಗಳು ಸೊಬಗೇರಿಸಿದವು. ವಿಷ್ಣು, ಸಮನ್, ಕಾತರಂಗ, ಪಟ್ಟಿನಿ, ಕಾಳಿ ಮತ್ತು ಸುನಿಯಂ ಶ್ರೀಲಂಕಾದ ಪ್ರಮುಖ ದೇವ-ದೈವಗಳಾಗಿವೆ. ಅವರ ಆರಾಧನಾ ವಿಧಾನವಾಗಿ ನೃತ್ಯ ಬೆಳೆದು ಬಂದಿದೆ. ಶ್ರೀಲಂಕಾದ ಪ್ರಮುಖ ಪಟ್ಟಣವಾಗಿದ್ದ ‘ಕ್ಯಾಂಡಿ’ಯಲ್ಲಿ ಬೆಳೆದು ಬಂದ ನೃತ್ಯಪ್ರಕಾರವೇ ಶ್ರೀಲಂಕಾದ ನೃತ್ಯಪ್ರಕಾರವಾಗಿ ರೂಪುಗೊಂಡಿದೆ.

ಶ್ರೀಲಂಕಾ ಭೂಮಿ ನೃತ್ಯ ರೂಪಕವು ಉದರಾಟ ನಾಟ್ಯ , ಪಹದಾರತ ನಾಟ್ಯ, ಸಬರಗಮುವಂ ನಾಟ್ಯಗಳನ್ನು ಒಳಗೊಂಡಿದೆ. ಬಳಿಕ ಯುವಜನತೆಯ ಮನಸೂರೆಗೊಳಿಸಿದ ಸೃಜನಶೀಲ ರೂಪಕ ನೃತ್ಯ. ಘೂಮರ್ ಘೂಮರ್ ಘೂಮೇ… ಹಾಗೂ ಚುಪಪೇ ಘೋರಿ ಚಿಂಗಾರಿ ಹಾಡಿಗೆ ಕುಣಿತದ ಆರ್ಭಟ. ಗುಜರಾತಿ, ರಾಜಸ್ಥಾನಿ ಸೇರಿದಂತೆ ಉತ್ತರದ ಕುಣಿತಗಳ ಮಿಶ್ರಣದ ಜೊತೆ ಮಣಿಪುರದ ಕಸರತ್ತು ಸಾಥ್ ನೀಡಿತು. ಪಾಶ್ಚಾತ್ಯ, ಭಾರತೀಯ, ಕಸರತ್ತುಗಳ ಮಿಶ್ರಣದಂತೆ ಸಂಕಲಿಸಿದ ಸೃಜನಾತ್ಮಕ ನೃತ್ಯ ಹೊಸ ಲೋಕಕ್ಕೆ ಕೊಂಡೊಯ್ಯಿತು.
ಆಳ್ವಾಸ್ ಸಾಂಸ್ಕೃತಿಕ ತಂಡದ ಕಲಾ ವೈಭವದ ಅನಂತರ ಉಡುಪಿಯ ಕೊಡವೂರು ನೃತ್ಯ ನಿಕೇತನ ತಂಡ ಕಾಂತಾರ ಖ್ಯಾತಿಯ ಮಾನಸಿ ಸುಧೀರ್ ನೇತೃತ್ವದಲ್ಲಿ ಪುಷ್ಪಾಂಜಲಿ ನೃತ್ಯ ಪ್ರಸ್ತುತ ಪಡಿಸಿತು. ವಿದ್ವಾನ್ ಸುಧೀರ್ ರಾವ್ ಹಾಗೂ ಮಾನಸಿ ಸುಧೀರ್ ಸಂಯೋಜನೆಯಲ್ಲಿ ನೃತ್ಯ ಮೂಡಿಬಂತು. ಬಳಿಕ ಸುರಭಿ ಕೃಷ್ಣನಾಗಿ ಕಾಳಿಂಗ ಮರ್ದನ ಪ್ರಸ್ತುತ ಪಡಿಸಿದರು.

ಬೆಂಗಳೂರಿನ ಚಿಗುರು ನೃತ್ಯಾಲಯ ಸರಿತಾ ಕೊಠಾರಿ ನಿರ್ದೇಶನದಲ್ಲಿ ಗಣಪತಿ ತಾಳಂ ಹಾಗೂ ಅಭಂಗ ಮತ್ತು ಭರತನಾಟ್ಯ ರೂಪಕ ಪ್ರಸ್ತುತ ಪಡಿಸಿದರು. ಮನಮೋಹನ ರಾಧಾರಮಣನ ಆರಾಧನೆ ನಡೆಯಿತು. ನಾಟ್ಯ ಪಾಂಡುರಂಗ ನರ್ತನ ಮನಸೆಳೆಯಿತು. ಮಂಗಳೂರಿನ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳು ವಿದ್ವಾನ್ ಶಾರದಾ ಮಣಿಶೇಖರ್ ಹಾಗೂ ಶ್ರೀಲತಾ ನಾಗರಾಜ್ ನಿರ್ದೇಶನದಲ್ಲಿ ಶ್ರೀ ರಾಮ ತೋಡಯ್ಯ ಮಂಗಳ ಪ್ರಸ್ತುತ ಪಡಿಸಿದರು. ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ಪ್ರವಿತಾ ಅಶೋಕ್ ನಿರ್ದೇಶನದಲ್ಲಿ ರಾಧಾಕೃಷ್ಣ, ಗೀತೋಪದೇಶ ಬಿಂಬಿಸುವ ಗೋಕುಲ ವೃಂದಾವನ ಪ್ರಸ್ತುತ ಪಡಿಸಿದರು. ಗೋಕುಲ ಬೃಂದಾವನ ಸುಂದರಂ ಗೋಪಾಲಕೃಷ್ಣಂ ಭಜೆ ಸ್ತುತಿಗೆ ನೃತ್ಯ ಮಾಡಿದರು.
ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ವಿದ್ಯಾಶ್ರೀ ರಾಧಾಕೃಷ್ಣ ನಿರ್ದೇಶನದಲ್ಲಿ ಭಜನ್ ನಾಟ್ಯ ಸೌರಭ ಪ್ರಸ್ತುತಪಡಿಸಿದರು. ರಾಮ-ಕೃಷ್ಣರ ಭಜನೆ ಜಯ ಜಯ ರಾಮ ಹರೇ ಕೃಷ್ಣ ಹರೇ… ಮೊಳಗಿತು. ನಿತೀಶ್ ಮಾರ್ನಾಡು ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ನೇತೃತ್ವದಲ್ಲಿ ಅತಿಥಿಗಳಾದ ಮಂಗಳೂರು ಭಾರತ್ ಇನ್‌ಫ್ರಾಟೆಕ್‌ನ ಮುಸ್ತಾಫ ಎಸ್.ಎಂ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ಉದ್ಯಮಿ ಶ್ರೀಪತಿ ಭಟ್ ದೀಪ ಪ್ರಜ್ವಲನ ಮಾಡಿದರು. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ, ಮೂಡುಬಿದಿರೆ ಜೈನಮಠದ ಶ್ರೀ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉಪಸ್ಥಿತರಿದ್ದು ಹರಸಿದರು.