ಮಂಗಳೂರು: ಪಾರ್ಕ್ ಮಾಡಿದ್ದ ಕಾರಿನ ಗ್ಲಾಸ್ ಹೊಡೆದು 6,80,000ರೂ. ಬೆಲೆಬಾಳುವ ಚಿನ್ನಾಭರಣ, ಮತ್ತು ಲ್ಯಾಪ್ ಟಾಪನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೂರ್ವ ಠಾಣೆಯ ಪೊಲೀಸರು ತೀವ್ರವಾಗಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಕಳವು ಮಾಡಿದ ಸೊತ್ತನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಮಂಗಳೂರಿನ ಅಡ್ಯಾರು ಗ್ರಾಮದ ಪದವು, ಅಡ್ಯಾರ್, ಭರಿರತ್ ಮಂಜಿಲ್ ನಿವಾಸಿ ಅಬ್ದುಲ್ ಅಕ್ರಮ್(33) ಎಂದು ಗುರುತಿಸಲಾಗಿದೆ.
ಆರೋಪಿಯು ಡಿ. 8ರ ರಾತ್ರಿ ಕಂಕನಾಡಿ ಮಾರ್ಕೆಟ್ ಬಳಿ ಪಾರ್ಕ್ ಮಾಡಿದ್ದ ಕ್ರೇಟಾ ಕಾರಿನ ಗ್ಲಾಸ್ ಹೊಡೆದು ಕಾರಿನ ಒಳಗಡೆ ಇದ್ದ 6,80,000 ರೂ. ಮೌಲ್ಯದ ಚಿನ್ನಾಭರಣ ಮತ್ತು ಲ್ಯಾಪ್ ಟಾಪನ್ನು ಕಳ್ಳತನ ಮಾಡಿದ್ದಾನೆ. ಬಳಿಕ ದೂರುದಾರರು ಬಂದು ನೋಡಿದಾಗ ಘಟನೆಯು ಬೆಳಕಿಗೆ ಬಂದಿದ್ದು, ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರ ದೂರಿನ ಮೇರೆಗೆ ಕಲಂ 303(2) ಬಿಎನ್ ಎಸ್ ಕಾಯಿದೆಯಂತೆ ಪ್ರಕರಣ ದಾಖಲಾಗಿ ತನಿಖೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು 24 ಗಂಟೆಯೊಳಗಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಕಳವು ಮಾಡಿದ ಚಿನ್ನಾಭರಣ ಮತ್ತು ಲ್ಯಾಪ್ ಟಾಪ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಆಕ್ಸೆಸ್ ಸ್ಕೂಟರ್ ಸೇರಿದಂತೆ ಒಟ್ಟು 7,30,000ರೂ. ಮೌಲ್ಯದ ಬೆಲೆ ಬಾಳುವ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ ವಾಲ್ ಅವರ ಮಾರ್ಗದರ್ಶನದಂತೆ ಸಿದ್ದಾರ್ಥ ಗೋಯಲ್ (ಕಾ&ಸು) ಮತ್ತು ಕೆ.ರವಿಶಂಕರ್ ಡಿಸಿಪಿ ಕ್ರೈಂ ಅವರ ನಿರ್ದೇಶನದಂತೆ ಹಾಗೂ ಮಂಗಳೂರು ಕೇಂದ್ರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪ್ರತಾಪ್ ಸಿಂಗ್ ಥೋರಾಟ್ ಅವರ ನೇತೃತ್ವದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾದ ಸೋಮಶೇಖರ್ ಜೆ.ಸಿ, ಪಿಎಸ್‌ಐ ಉಮೇಶ್ ಕುಮಾರ್ ಎಂ.ಎನ್ ಮತ್ತು ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ವರ್ಗ ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯಚರಣೆ ನಡೆಸಿದ್ದಾರೆ.