ಪರಿಹಾರ ಕಾರ್ಯಾಚರಣೆಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಭೀಕರ ಭೂಕುಸಿತ ಸಂಭವಿಸಿ ಐದು ತಿಂಗಳೇ ಕಳೆದು ಹೋದರೂ ಇಬ್ಬರ ಶವ ಇನ್ನೂ ಪತ್ತೆಯಾಗಿಲ್ಲ. ಕಳೆದ ಜುಲೈ 16ರಂದು ಭೀಕರ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಇಡೀ ಒಂದು ಬೆಟ್ಟವೇ ಜಾರಿ ಹೆದ್ದಾರಿಗೆ ಬಿದ್ದು, ರಸ್ತೆ ಬದಿಯಲ್ಲಿದ್ದ ಒಂದು ಚಿಕ್ಕ ಚಹಾದಂಗಡಿ, ಅದರ ಪಕ್ಕ ನಿಂತಿದ್ದ ಲಾರಿ ಸಮೇತ ಪಂಚಗಂಗಾವಳಿ ನದಿಗೆ ದೂಡಿ ಹಾಕಿತ್ತು. ಈ ದುರಂತದಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ. ಕೇರಳದ ಲಾರಿಯೊಂದು ಚಾಲಕನ ಸಮೇತ ಮಣ್ಣಿನಲ್ಲಿ ರಾಶಿಯಲ್ಲಿ ಕೊಚ್ಚಿಕೊಂಡು ಹೋಗಿ ನದಿಗೆ ಬಿದ್ದಿದ್ದು, ಮೂರು ತಿಂಗಳ ಬಳಿಕ ಈ ಲಾರಿಯನ್ನು ಮೇಲೆತ್ತಲಾಗಿದೆ. ಚಾಲಕ ಅರ್ಜುನ್ ಶವ ಲಾರಿಯೊಳಗೆ ಎರಡು ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಇಡೀ ಬೆಟ್ಟವೇ ಜಾರಿ ಬಂದು ನದಿಗೆ ಉರುಳಿದ ಪರಿಣಾಮ ನದಿಯ ನೀರು ಉಕ್ಕೇರಿ ಆಚೆ ದಡದ ಊರಿಗೆ ಅಪ್ಪಳಿಸಿ ನೆರೆ ಬಂದಿತ್ತು. ಈ ನೆರೆಯಲ್ಲಿ ಓರ್ವ ವೃದ್ಧ ಮಹಿಳೆ ಕೊಚ್ಚಿ ಹೋಗಿ ಅಪಾರ ನಾಶ ನಷ್ಟ ಸಂಭವಿಸಿತ್ತು. ಈ ಸಂದರ್ಭದಲ್ಲಿ ನಾಪತ್ತೆಯಾಗಿರುವ ಶಿರೂರಿನ ಜಗನ್ನಾಥ್ ಮತ್ತು ಗಂಗೆಕೊಳ್ಳದ ಲೋಕೇಶ್ ಎಂಬವರ ಶವಗಳು ಇನ್ನೂ ಪತ್ತೆಯಾಗಿಲ್ಲ.
ಜಿಲ್ಲಾಡಳಿತ ಶೋಧ ಕಾರ್ಯಾಚರಣೆಯನ್ನು ಎಂದೋ ನಿಲ್ಲಿಸಿದೆ. ಹೀಗಾಗಿ ಈ ಇಬ್ಬರ ಕುಟುಂಬದವರು ಅವರ ಗತಿ ಏನಾಗಿದೆ ಎಂದು ತಿಳಿಯದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಜಿಲ್ಲಾಡಳಿತ ಮರಣ ಪತ್ರವನ್ನೂ ನೀಡದೆ ಸತಾಯಿಸುತ್ತಿದೆ ಎಂದು ಅವರು ಗೋಳಾಡುತ್ತಿದ್ದಾರೆ. ಹೀಗಾಗಿ ಅವರು ಮರಣ ಪತ್ರ ಕೊಡಿ ಇಲ್ಲವೇ ಶೋಧ ಕಾರ್ಯಾಚರಣೆ ಮುಂದುವರಿಸಿ ಎಂದು ಒತ್ತಾಯಿಸುತ್ತಿದ್ದಾರೆ.
ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಸಿಕ್ಕ ಮೂಳೆಗಳ ಡಿಎನ್ಎ ಪರೀಕ್ಷಾ ವರದಿ ಸಹ ಬಂದಿಲ್ಲ. ಈ ಮಧ್ಯೆ ಕಾರ್ಯಾಚರಣೆ ಸಂಪೂರ್ಣ ನಿಲ್ಲಿಸಿ ಮೃತ ಕುಂಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಸಹ ನೀಡಲಾಗಿತ್ತು. ಆದರೆ ಜಗನ್ನಾಥ್, ಲೋಕೇಶ್ ಕುಟುಂಬದವರು ನಮ್ಮವರ ಮರಣ ಪತ್ರ ನೀಡಿ ಅಥವಾ ಕಾರ್ಯಾಚರಣೆ ಮುಂದುವರಿಸಿ ಎಂದು ಪಟ್ಟು ಹಿಡಿದಿದ್ದಾರೆ.
ಭೂಕುಸಿತ ದುರಂತಕ್ಕೆ ಹೆದ್ದಾರಿ ಕಾಮಗಾರಿ ನಡೆಸುತ್ತಿದ್ದ ಐಆರ್‌ಬಿ ಕಂಪನಿಯ ನಿರ್ಲಕ್ಷ್ಯ ಮತ್ತು ಲೋಪವೇ ಕಾರಣ ಎಂದು ಆರೋಪಿಸಲಾಗಿದೆ. ಆದರೆ ಈ ಕಂಪನಿಯ ವಿರುದ್ಧ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ದುರಂತದ ರಕ್ಷಣಾ ಕಾರ್ಯಾಚರಣೆಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಕಾರವಾರ ಎಸ್ಪಿ ಎಂ. ನಾರಾಯಣ್ ಐಆರ್‌ಬಿ ಕಂಪನಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ತನಿಖೆಗೆ ಅಂಕೋಲ ಕೋರ್ಟ್ ಆದೇಶಿಸಿದೆ. ಆದರೆ ಈವರೆಗೂ ಯಾಕೆ ಎಸ್ಪಿ ವಿರುದ್ಧ ಕೇಸ್ ದಾಖಲಾಗಿಲ್ಲ ಎಂದು ಈಡಿಗ ಸಮಾಜದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಪ್ರಶ್ನಿಸಿದ್ದಾರೆ.