ಬೆಳ್ತಂಗಡಿ: ಕುದುರೆಮುಖ ರಕ್ಷಿತಾರಣ್ಯದಲ್ಲಿ ಭಾರಿ ಗಾತ್ರದ ಕಡವೆಯನ್ನು ಬೇಟೆಯಾಡಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಆದರೆ ಈ ಪ್ರಕರಣದಲ್ಲಿ ಅರಣ್ಯ ಇಲಾಖೆ ತನಿಖೆ ನಡೆಸಿದ ರೀತಿಗೆ ಅಪಸ್ವರ ವ್ಯಕ್ತವಾಗಿದೆ. ಕಡವೆ ಬೇಟೆಯಲ್ಲಿ ಹತ್ತು ಮಂದಿ ಶಾಮೀಲಾಗಿರುವ ಶಂಕೆಯಿದ್ದರೂ ಇಬ್ಬರ ವಿರುದ್ಧ ಮಾತ್ರ ಕೇಸ್ ದಾಖಲಾಗಿದೆ. ಈ ಇಬ್ಬರೂ ಈಗ ತಲೆಮರೆಸಿಕೊಂಡಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ಹೌತೊಟ್ಟು ಎಂಬಲ್ಲಿ ಅಕ್ಟೋಬರ್ 28ರಂದು ಕಡವೆ ಬೇಟೆಯಾಡಲಾಗಿದೆ. ಪ್ರಕರಣದಲ್ಲಿ ಒಂದನೇ ಆರೋಪಿ ಎಂದು ದಾಖಲಾಗಿರುವ ಸಂದೇಶ್ ಪೂಜಾರಿಯ ಮನೆಯಲ್ಲಿ ಕಡವೆ ಜಾತಿಯ ವನ್ಯಪ್ರಾಣಿಯ ಮಾಂಸ ತಯಾರಿಸಲಾಗಿದ್ದು, ಅದನ್ನು ರಾಧಾಕೃಷ್ಣ ಪೂಜಾರಿಯ ಕೋಳಿ ಅಂಗಡಿಯಲ್ಲಿ ಮಾರಾಟ ಮಾಡಲಾಗಿದೆ ಎನ್ನಲಾಗಿದೆ.
ಕೆಜಿಗೆ 1000 ರೂ.ಯಂತೆ ಮಾಂಸ ಮಾರಾಟ ಮಾಡಿದಾಗ ಸ್ಥಳೀಯ ಕೆಲವರು ಜಗಳವಾಡಿದ ಬಳಿಕ ಕಡವೆ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಕುರಿತು ಮಂಗಳೂರು ಅರಣ್ಯ ಸಂಚಾರಿ ದಳಕ್ಕೆ ಬಂದಿದ್ದ ಖಚಿತ ಮಾಹಿತಿಯನ್ವಯ ಕಾರ್ಯಚರಣೆ ನಡೆದಿದೆ. ವೇಣೂರು ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದರು. ಸಂದೇಶ್ ಪೂಜಾರಿ(46) ಮತ್ತು ರಾಧಾಕೃಷ್ಣ ಪೂಜಾರಿ (47) ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರಿಬ್ಬರು ತಲೆಮರೆಸಿಕೊಂಡಿದ್ದಾರೆ.
ಕುದುರೆಮುಖ ರಕ್ಷಿತಾರಣ್ಯ ಪ್ರದೇಶದಲ್ಲಿ ಕಂಡುಬರುವ ಕಡವೆ ಜಾತಿಗೆ ಸೇರಿದ ಪ್ರಾಣಿ 150 ಕೆಜಿಗೂ ಹೆಚ್ಚು ತೂಕ ಇರುತ್ತದೆ. ಮರಿಯೇ ಸುಮಾರು 40 ಕೆಜಿ ತೂಗುತ್ತದೆ. ಅಷ್ಟೊಂದು ಭಾರದ ಕಡವೆಯನ್ನು ಗುಂಡಿಟ್ಟು ಹತ್ಯೆಗೈದ ಬಳಿಕ ಇಬ್ಬರಿಂದ ಹೊತ್ತು ಸಾಗಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಪ್ರಮುಖ ಆರೋಪಿ ಸಂದೇಶ್ ಪೂಜಾರಿಯ ಮನೆಯಂಗಳದಲ್ಲಿ ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದ ಪ್ಲಾಸ್ಟಿಕ್ ಟಾರ್ಪಾಲಿನಲ್ಲಿ ರಕ್ತದ ಕಲೆ ಕಂಡಬಂದಿದ್ದು, ಅದರಲ್ಲಿ ಕಡವೆ ಜಾತಿಯ ವನ್ಯಪ್ರಾಣಿಯ ಮಾಂಸ ತಯಾರಿಸಲಾಗಿದೆ ಎಂದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹೀಗಿರುವಾಗ ಸಂದೇಶ್ ಪೂಜಾರಿಯ ಮನೆಯಂಗಳದವರೆಗೆ ಕಡವೆಯನ್ನು ಹೊತ್ತು ತಂದವರು ಯಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಹತ್ಯೆಗೆ ಬಳಸಿದ ಆಯುಧಗಳನ್ನು ಅರಣ್ಯ ಇಲಾಖೆ ವಶಪಡಿಸಿದ ಮಾಹಿತಿ ಲಭ್ಯವಿಲ್ಲ.
ರಾಧಾಕೃಷ್ಣ ಪೂಜಾರಿಯ ಮನೆಯಲ್ಲಿ ಕುಕ್ಕರ್‌ನಲ್ಲಿ ಬೇಯಿಸಿಟ್ಟ ಕಡವೆ ಜಾತಿಯ ಪ್ರಾಣಿಯ 4.5 ಕೆ.ಜಿ ಮಾಂಸ ಹಾಗೂ ಪ್ರಮುಖ ಆರೋಪಿ ಆರೋಪಿ ಸಂದೇಶ್ ಪೂಜಾರಿಯ ಮನೆಯ ಫ್ರಿಜ್‌ನಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ಮುಚ್ಚಿಡಲಾಗಿದ್ದ 1 ಕೆ.ಜಿ ಮಾಂಸ ಅರಣ್ಯ ಅಧಿಕಾರಿಗಳಿಗೆ ಸಿಕ್ಕಿದೆ. ಪ್ರಾಣಿಯ ತ್ಯಾಜ್ಯ, ಎಲುಬು, ಚರ್ಮ ಇದ್ಯಾವುದನ್ನು ಪತ್ತೆ ಹಚ್ಚಿರುವ ವಿವರಗಳು ಅರಣ್ಯ ಇಲಾಖೆಯ ಕಡತದಲ್ಲಿ ದಾಖಲಾಗದೇ ಇರುವುದು ಹಲವು ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ.