ದೇಶ-ವಿದೇಶಗಳ ಅದ್ಭುತ ಕಲಾಪರಂಪರೆ ಮೂಡುಬಿದಿರೆಯಲ್ಲಿ ಅನಾವರಣ
ವಿದ್ಯಾಗಿರಿ(ಮೂಡುಬಿದಿರೆ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿದ 30ನೇ ವರ್ಷದ ಆಳ್ವಾಸ್ ವಿರಾಸತ್‌ನ ಮೊದಲ ದಿನವಾದ ಮಂಗಳವಾರ ಉದ್ಘಾಟನೆಯ ಬಳಿಕ ನಡೆದ ದೇಶ-ವಿದೇಶಗಳ ಅದ್ಭುತ ಕಲಾಪರಂಪರೆಯನ್ನು ಧರೆಗಿಳಿಸಿ ಸಾರ್ಥಕವಾಯಿತು. ಶ್ರದ್ಧೆ-ಭಕ್ತಿಯ ನಾಡು-ನುಡಿಯ ಕಲಾ ವೈಶಿಷ್ಟ್ಯತೆಯ ಸಾಂಸ್ಕೃತಿಕ ವೈಭವ, ಭಾರತದ ಭವ್ಯ ಸಂಸ್ಕೃತಿಯ ಕಲಾರೂಪವೇ ಧರೆಗಿಳಿದು ಬಂದಂತೆ ಭಾಸವಾಯಿತು. ಉತ್ತರ ಭಾರತದಿಂದ ಹಿಡಿದು ದಕ್ಷಿಣದ ತುತ್ತತುದಿವರೆಗಿನ ವೈವಿಧ್ಯ ಕಲಾಪ್ರಕಾರಗಳು ಮಾತ್ರವಲ್ಲದೆ ಶ್ರೀಲಂಕಾ ಸೇರಿದಂತೆ ನೆರೆಹೊರೆ ರಾಷ್ಟ್ರಗಳ ಸಂಸ್ಕೃತಿ ಶ್ರೀಮಂತಿಕೆಗೆ ಆಳ್ವಾಸ್ ಆವರಣ ಸಾಕ್ಷಿಯಾಯಿತು.
ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕೊಂಡೆವೂರು ಯೋಗಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ ಹಾಗೂ ಕಟೀಲು ದೇವಳದ ಆನುವಂಶಿಕ ಮೊಕ್ತೇಸರ ಲಕ್ಷ್ಮೀನಾರಾಯಣ ಆಸ್ರಣ್ಣ ವೇದಿಕೆಯ ಬಲಭಾಗದಲ್ಲಿದ್ದ ರಥದಲ್ಲಿ ದೇವರ ಪ್ರತಿಷ್ಠಾಪನೆ ಮಾಡಿ ಭವ್ಯ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು.

ಈ ಭವ್ಯ ಸಾಂಸ್ಕೃತಿಕ ಮೆರವಣಿಗೆಯು ಜಾತ್ರೆಯ ಮೆರುಗನ್ನು ಮೂಡಿಸಿತು. ಇಕ್ಕೆಲಗಳಲ್ಲಿ ರಥದ ಸ್ವರೂಪ, ಯಕ್ಷ ಕಿರೀಟ, ಮುಖವಾಡ, ನವಿಲು, ಗಣಪ, ಬೃಹತ್ ಕಾಲುದೀಪಗಳಿಂದ ಶೋಭಾಯಮಾನವಾದ ಸಭಾಂಗಣದಲ್ಲಿ ಸಂಜೆ 6.35ರಿಂದ ರಾತ್ರಿ 8.30ರವರೆಗೆ 150ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳಿಂದ 4000 ಸಾವಿರಕ್ಕೂ ಮಿಕ್ಕಿದ ಕಲಾವಿದರನ್ನು ಒಳಗೊಂಡ ಭವ್ಯ ಸಾಂಸ್ಕೃತಿಕ ಮೆರವಣಿಗೆ ಸಂಪನ್ನಗೊಂಡಿತು.
ಶಂಖ, ದಾಸಯ್ಯ, ಕೊಂಬು, ರಣ ಕಹಳೆ, ಕಹಳೆ, ಕಾಲ ಭೈರವ, ಕೊರಗಡೋಲು, ಸ್ಯಾಕ್ಸೋಫೋನ್, ಬ್ಲಾಕ್ ಎನಿಮಲ್, ನಂದಿ ಧ್ವಜ, ಸುಗ್ಗಿ ಕುಣಿತ, ಶ್ರೀರಾಮ, ಪರಶುರಾಮ, ಘಟೋತ್ಕಜ, ಊರಿನ ಚೆಂಡೆ, ತಟ್ಟಿರಾಯ, ನಾದಸ್ವರ ತಂಡ, ಕೊಡೆಗಳು, ಪೂರ್ಣಕುಂಭ, ಲಂಗ ದಾವಣಿ ತರುಣಿಯರು, ಅಪ್ಸರೆಯರು, ಯಕ್ಷಗಾನ ವೇಷ, ಗೂಳಿ ಮತ್ತು ಕಟ್ಟಪ್ಪ, ಗೊರವರ ಕುಣಿತ, ಕಿಂದರಿ ಜೋಗಿ, ಸೋಮನ ಕುಣಿತ, ಆಂಜನೇಯ ಮತ್ತು ವಾನರ ಸೇನೆ, ಮಹಾಕಾಳೇಶ್ವರ, ಶಿವ, ಮರಗಾಲು, ತಮಟೆ ವಾದನ, ಆಂಜನೇಯ, ಮಹಿಳಾ ಪಟ ಕುಣಿತ, ಕಂಬಳ ಚಿತ್ರಣ, ಹುಲಿವೇಷ, ತೆಯ್ಯಮ್, ಚಿಟ್ಟೆ ಮೇಳ, ಶಿವ ಮತ್ತು ಅಘೋರಿಗಳು, ಕಿಂಗ್ ಕಾಂಗ್, ಶಿಲ್ಪಾ ಗೊಂಬೆ ಬಳಗ, ಆಳ್ವಾಸ್ ಗೊಂಬೆ ಬಳಗ, ಚೈನೀಸ್ ಡ್ರ್ಯಾಗನ್, ಚೈನಾ ಲಯನ್, ಬ್ಯಾಂಡ್ ಸೆಟ್, ಆಳ್ವಾಸ್ ಕಾರ್ಟೂನ್ಸ್, ಸ್ನೇಹ ಗೊಂಬೆ ಬಳಗ, ಚಿಲಿಪಿಲಿ ಬೊಂಬೆ, ವಂಶಿಕಾ ಗೊಂಬೆ ಬಳಗ, ಬಿದಿರೆ ಮೂಡುಬಿದಿರೆ ಗೊಂಬೆಗಳು, ಶೆಟ್ಟಿ ಬೊಂಬೆಗಳು, ಶಾರದಾ ಆರ್ಟ್ಸ್ ಗೊಂಬೆ-ಚೆಂಡೆ, ಟಾಲ್ ಮ್ಯಾನ್, ಹಿಮ ಕರಡಿ ಗೊಂಬೆ, ಚಿರತೆ ಗೊಂಬೆ, ಏರ್ ಬಲೂನ್ ಬೊಂಬೆ, ಕರಡಿ ಗೊಂಬೆ, ಗಜಹುಲಿ, ಕಾಟಿ, ಗಣಪತಿ, ನರಸಿಂಹ, ಹುಲಿ, ಬೋಳಾರ್ ಮತ್ತು ಟೀಮ್ ನರ್ತನ, ವಾರ್ ಕ್ರಾಫ್ಟ್, ಚಿಟ್ಟೆ, ಸಿಂಗಳೀಕ, ಗಣಪತಿ, ಜೋಡಿ ಸಿಂಹ, ಜೋಡಿ ಜಿಂಕೆ, ಚಿತ್ರದುರ್ಗ ಬ್ಯಾಂಡ್, ಪೂಜಾ ಕುಣಿತ, ಬೇಡರ ಕುಣಿತ, ಮಹಿಳೆಯರ ಕೋಲಾಟ, ಹಗಲು ವೇಷ, ಕೋಳಿಗಳು, ನಾಸಿಕ್ ಬ್ಯಾಂಡ್, ಮೀನುಗಳು, ಕಾರ್ಟೂನ್ಸ್, ಪುರವಂತಿಕೆ, ವೀರಭದ್ರನ ಕುಣಿತ, ಜಗ್ಗಳಿಕೆ ಮೇಳ, ಪಟದ ಕುಣಿತ, ಕೊಂಚಾಡಿ ಚೆಂಡೆ, ಶ್ರೀಲಂಕಾ ಕಲಾವಿದರು, ಶ್ರೀಲಂಕಾದ ಮುಖವಾಡ, ವೀರಗಾಸೆ, ಕರಡಿ ಮಜಲು, ಕಂಸಾಳೆ, ಪುರುಷರ ನಗಾರಿ, ಮಹಿಳೆಯರ ನಗಾರಿ, ದಪ್ಪು, ತಿರುವಾದಿರ, ಡೊಳ್ಳು ಕುಣಿತ, ಪಂಚವಾದ್ಯ, ಏಂಜೆಲ್ಸ್, ಎಲ್ವ್ಸ್, ಸಾಂತಾಕ್ಲಾಸ್, ನಾಸಿಕ್ ಬ್ಯಾಂಡ್, ಶಿಂಗಾರಿ ಮೇಳ, ಅರ್ಧ ನಾರೀಶ್ವರ, ಪೂಕಾವಡಿ, ಕೇರಳದ ಚಿಟ್ಟೆ, ಕಥಕ್ಕಳಿ ವೇಷ, ಕೇರಳದ ಅರೆನಾ ವೇಷ, ಕೇರಳದ ಕಮಲ ವೇಷ, ತಮಿಳುನಾಡಿನ ನೃತ್ಯ, ಶೃಂಗಾರಿ ಮೇಳ, ಕೇರಳದ ದೇವರ ವೇಷ, ಕೇರಳದ ಡಿಜಿಟಲ್ ವೇಷ, ತೆಯ್ಯಮ್ ಉಡುಪಿ, ಬ್ಲೂ ಬ್ರಾಸ್ ಬ್ಯಾಂಡ್, ಕೋಳಿ ಉಡುಪಿ, ಮೀನುಗಳು ಉಡುಪಿ, ಕಾಮಿಡಿಯನ್ಸ್, ಗರುಡ, ದಪ್ಪು, ಕ್ಯಾರಲ್, ಡೊಳ್ಳು ಕುಣಿತ ಸಾಗಿಬಂತು.

ಅದರೊಂದಿಗೆ ಎನ್.ಸಿ.ಸಿ-ನೇವಲ್, ಎನ್.ಸಿ.ಸಿ-ಆರ‍್ಮಿ, ಎನ್.ಸಿ.ಸಿ-ಏರ್‌ಫೋರ್ಸ್, ಆಳ್ವಾಸ್ ಬ್ಯಾಂಡ್ ಸೆಟ್, ಸ್ಕೌಟ್ಸ್ ಮತ್ತು ಗೈಡ್ಸ್, ರೋರ್ಸ್, ರೇಂಜರ್ಸ್ ಪಥಸಂಚಲನ ಸಾಥ್ ನೀಡಿತು.
ಆ ಬಳಿಕ ವೇದಘೋಷಗಳು, ಭಜನೆಗಳು, ಪುಷ್ಪಪಲ್ಲಕ್ಕಿಗಳು, ಮಂಗಳವಾದ್ಯಗಳೊಂದಿಗೆ ಹುಲಿ, ಸಣ್ಣ ರಥದಲ್ಲಿ ವಿಘ್ನನಿವಾರಕ ಗಣಪತಿ ಹಾಗೂ ಪಲ್ಲಕ್ಕಿಯಲ್ಲಿ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ದ್ಯೋತಕವಾದ ಮಹಾಲಕ್ಷ್ಮಿ ಹಾಗೂ ವಿದ್ಯಾಮಾತೆ ಮಹಾಸರಸ್ವತಿ ಮೂರ್ತಿಗಳನ್ನು ಕರೆ ತರಲಾಯಿತು. ರಥದಲ್ಲಿ ಪೀಠಸ್ಥರಾದ ಮರ‍್ಯಾದಾ ಪುರುಷೋತ್ತಮ ಶ್ರೀರಾಮ ಹಾಗೂ ಜೀವನೋಲ್ಲಾಸದ ಪ್ರತೀಕ ಶ್ರೀ ಕೃಷ್ಣಾದಿ ಆರೂಢ ದೇವರ ಮೆರವಣಿಗೆಯೊಂದಿಗೆ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ರಥ ಸಂಚಲನ ಶ್ರದ್ಧೆ ಭಕ್ತಿಯಿಂದ ನಡೆಯಿತು.
ರಥಯಾತ್ರೆಯ ಮುಂಭಾಗದಲ್ಲಿ ಮೈಸೂರು, ಪಂಡರಾಪುರ ಹಾಗೂ ಮಂಗಳೂರು ಹರೇಕೃಷ್ಣ ಪಂಥದ ಭಜನಾ ತಂಡಗಳ ಭಜನೆ ಹಾಡಿನ ಮೂಲಕ ಭಕ್ತಿ ಪ್ರಭಾವಳಿ ಮೂಡಿಸಿದರು. ಅರ್ಚಕರು ಮಂತ್ರ ಘೋಷ ಮಾಡಿದರು. ಕೊಂಬು, ಕಹಳೆ ನಾದ ಮೊಳಗಿದವು. ಛತ್ರಿ, ಚಾಮರಗಳೊಂದಿಗೆ ದೊಂದಿಗಳು ಬೆಳಗಿದವು. ಮಂಗಳ ವಾದ್ಯ ನಿನಾದ ಮೂಡಿಸಿತು. ಹರಿದ್ವಾರದಿಂದ ಬಂದ ವಿಪುಲ್ ವರ್ಮ ನೇತೃತ್ವದ ಗಂಗಾರತಿ ತಂಡ ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಿದಾಗ ಶ್ರದ್ಧೆ-ಭಕ್ತಿಯ ಪ್ರಜ್ವಲನವಾಯಿತು. ಭಕ್ತರು ಜಯಕಾರ ಹಾಕಿದರು. ಭಕ್ತರು ಭಾವಪರವಶರಾದರು. ಆಗಸದಲಿ ಮೂಡಿದ ಪಟಾಕಿಯ ಸಿಂಚನ- ಸಿಡಿಮದ್ದು ಜಾತ್ರೆಯನ್ನು ನೆನಪಿಸಿತು.