100 ಮೀಟರ್ ಉದ್ದಕ್ಕೂ ನಿಲ್ಲಿಸಿದ್ದ 40 ವಾಹನಗಳು ಜಖಂ
ಮುಂಬಯಿ: ಬ್ರೇಕ್‌ಫೇಲ್ ಆದ ಬೆಸ್ಟ್ ಬಸ್ ಪಾದಚಾರಿಗಳಿಗೆ ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದು ಆರು ಮಂದಿ ಸ್ಥಳದಲ್ಲೇ ದುರ್ಮರಣವನ್ನಪ್ಪಿ 49 ಮಂದಿ ಗಂಭೀರವಾಗಿ ಗಾಯಗೊಂಡ ಭೀಕರ ಅಪಘಾತ ಸೋಮವಾರ ತಡರಾತ್ರಿ ಮುಂಬಯಿಯ ಉಪನಗರ ಕುರ್ಲಾದಲ್ಲಿ ಸಂಭವಿಸಿದೆ.
ಕುರ್ಲಾ ಪಶ್ಚಿಮದ ಎಲ್ ವಾರ್ಡ್‌ನ ಎಸ್ ಜಿ ಬರ್ವೆ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ಬ್ರೇಕ್‌ಫೇಲ್ ಆದ ಬಸ್ 100 ಮೀಟರ್ ಉದ್ದಕ್ಕೆ ನಿಲ್ಲಿಸಿದ್ದ ಸುಮಾರು 40 ವಾಹನಗಳಿಗೆ ಡಿಕ್ಕಿ ಹೊಡೆದು ಸೊಲೊಮನ್ ಕಾಲನಿಯ ಆರ್‌ಸಿಸಿ ಬಿಲ್ಡಿಂಗ್‌ನೊಳಗೆ ನುಗ್ಗಿದೆ. ಘಟನೆ ಸಂಬಂಧ ಬಸ್ ಚಾಲಕನನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಸ್ಟ್ ಬಸ್ ಕುರ್ಲಾ ರೈಲು ನಿಲ್ದಾಣದಿಂದ ಅಂಧೇರಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಮಾರ್ಗ ಸಂಖ್ಯೆ 332ರ ಬಳಿ ಚಾಲಕ ಬಸ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ಈ ವೇಳೆ ಬಸ್ ಪಾದಚಾರಿಗಳಿಗೆ ಮತ್ತು ಕೆಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಸ್ಥಳೀಯ ಬಾಬಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ನಾನು ನನ್ನ ಸ್ನೇಹಿತರೊಂದಿಗೆ ರಾಯಲ್ ಸ್ವೀಟ್ಸ್ ಅಂಗಡಿಯ ಮುಂದೆ ನಿಂತಿದ್ದಾಗ ವೇಗವಾಗಿ ಬಂದ ಬಸ್ ಏಕಾಏಕಿ ಹಲವು ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಗುದ್ದಿತು. ಬಳಿಕ ಕಾಲೊನಿಗೆ ಪ್ರವೇಶಿಸಿತು. ಕೂಡಲೇ ಸ್ಥಳಕ್ಕೆ ತೆರಳಿ ಬಸ್ ಚಾಲಕನನ್ನು ವಾಹನದಿಂದ ಹೊರಗೆ ತಂದೆವು. ಘಟನೆ ಬಳಿಕ ಹಲವರು ರಕ್ತಸಿಕ್ತರಾಗಿ ಕೆಳಗೆ ಬಿದ್ದಿದ್ದರು. ಸಾಕಷ್ಟು ಜನರು ಸ್ಥಳ ಸೇರಿದ್ದರು. ಬಳಿಕ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದವು ಎಂದು ಪ್ರತ್ಯಕ್ಷದರ್ಶಿ ಝೀಶನ್ ಅನ್ಸಾರಿ ಎಂಬುವವರು ಹೇಳಿದ್ದಾರೆ.
ಮುಂಬಯಿ ನಗರದೊಳಗೆ ವಾಹನಗಳು ಅಪಘಾತಕ್ಕೀಡಾಗುವುದು ಬಹಳ ಅಪರೂಪ. ನಿತ್ಯ ವಾಹನ ದಟ್ಟಣೆ ವಿಪರೀತ ಇರುವುದರಿಂದ ವಾಹನಗಳು ತೆವಳಿಕೊಂಡು ಹೋಗಬೇಕಾಗುತ್ತದೆ. ಅದರಲ್ಲೂ ನಗರದೊಳಗೆ ಸಾರಿಗೆ ಸೇವೆ ಒದಗಿಸುವ ಮಹಾನಗರಪಾಲಿಕೆಯ ಬೆಸ್ಟ್ ಬಸ್‌ಗಳು ಅಪಘಾತಕ್ಕೀಡಾಗುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಆದರೆ ರಾತ್ರಿಯಾದ ಕಾರಣ ಟ್ರಾಫಿಕ್ ಕಡಿಮೆ ಇದ್ದು, ಚಾಲಕ ಅತಿ ವೇಗವಾಗಿ ಬಸ್ ಚಲಾಯಿಸಿದ ಪರಿಣಾಮ ಅಪಘಾತ ತೀವ್ರತೆ ಹೆಚ್ಚಾಯಿತು ಎನ್ನಲಾಗಿದೆ.