ರಾಮಾನುಜನ್ ಬದುಕಿನಲ್ಲಿ ತಿರುವು ಕೊಟ್ಟ ಆ ಘಟನೆ ಯಾವುದು?
1913ನೇ ಇಸವಿಯ ಡಿಸೆಂಬರ್ ತಿಂಗಳ ಮೈ ಕೊರೆಯುವ ಚಳಿಯ ಒಂದು ದಿನ. ಆಕ್ಸಫರ್ಡ್ ವಿವಿಯ ತನ್ನ ಕೊಠಡಿಯಲ್ಲಿ ಕುಳಿತು ಗಣಿತದ ಪ್ರಸಿದ್ಧ ಪ್ರೊಫೆಸರ್ ಹಾರ್ಡಿ ಸರ್ ಅವರು ಸಿಗಾರ್ ಎಳೆಯುತ್ತಿದ್ದರು. ಅವರ ಟೇಬಲ್ ಮೇಲೆ ಅಂಚೆಚೀಟಿ ಹೊತ್ತ ಕಂದು ಬಣ್ಣದ ಒಂದು ಕವರ್ ಬಂದು ಕೂತಿತ್ತು. ಅದು ಭಾರತದಿಂದ ಹಡಗಿನಲ್ಲಿ ಕೂತು ಇಂಗ್ಲೆಂಡಿಗೆ ಬಂದಿತ್ತು. ಹಾರ್ಡಿ ಸರ್ ಅದನ್ನು ಮೇಲೆ ಮೇಲೆ ಒಮ್ಮೆ ನೋಡಿ ಬದಿಗೆ ಸರಿಸಿದರು. ಅವರಿಗೆ ಅದರ ಮೇಲೆ ಯಾವ ಕುತೂಹಲವೂ ಇರಲಿಲ್ಲ.
ಕವರ್ ಒಡೆದು ನೋಡಿದಾಗ ಹಾರ್ಡಿ ಸರ್ ನಿದ್ದೆಯು ಹಾರಿ ಹೋಯಿತು!
ಮಧ್ಯಾಹ್ನ ಊಟ ಮಾಡಿ ಬಂದ ಅವರಿಗೆ ಸಣ್ಣ ನಿದ್ದೆ ಮಾಡುವ ಅಭ್ಯಾಸ. ಹಾಗೆ ಕುರ್ಚಿಗೆ ಒರಗಿ ಒಂದು ಸಣ್ಣ ನಿದ್ದೆ ಮಾಡಿದರು. ಆಗಲೂ ಆ ಕವರ್ ಅಲ್ಲಿಯೇ ಇತ್ತು. ಹೊರಗೆ ರಾಮಾನುಜನ್ ಎಂಬ ಅಪರಿಚಿತ ಹೆಸರಿತ್ತು. ಈಗ ಕುತೂಹಲದಿಂದ ಆ ಕವರ್ ಒಡೆದು ಆ ಪತ್ರದ ಮೇಲೆ ನಿಧಾನಕ್ಕೆ ಕಣ್ಣಾಡಿಸಿದರು. ಬೂದು ಬಣ್ಣದ ಅಗ್ಗದ ಕಾಗದದಲ್ಲಿ ಕಪ್ಪು ಶಾಯಿಯಿಂದ ಬರೆದ ಗಣಿತ ಸೂತ್ರಗಳ ಸಂತೆ ಅದು. ಅಡ್ಡಕ್ಕೆ, ಉದ್ದಕ್ಕೆ, ಮೂಲೆಯಲ್ಲಿ, ಎಲ್ಲೆಲ್ಲಿ ಖಾಲಿ ಜಾಗ ಇದೆಯೋ ಅಲ್ಲಲ್ಲಿ ತುಂಬಿಸಿದ ಗಣಿತದ ಅದ್ಭುತ ಪ್ರಮೇಯಗಳು, ಅವುಗಳ ಪರಿಹಾರಗಳ ಪತ್ರವದು! ಮೂರು ಮೂರು ಬಾರಿ ಓದಿದ ನಂತರ ಅವರು ಬೆಚ್ಚಿ ಬಿದ್ದರು,ಅವರ ನಿದ್ದೆ ಹಾರಿ ಹೋಗಿತ್ತು.
ಒಂಬತ್ತು ಪುಟಗಳಲ್ಲಿ ತುಂಬಿದ್ದವು 120 ಅನೂಹ್ಯ ಗಣಿತದ ಪ್ರಮೇಯಗಳು. ಹಾರ್ಡಿ ಸರ್ ಅದುವರೆಗೆ ಎಲ್ಲಿಯೂ ನೋಡದ, ಓದದ, ಯಾರ ಕಲ್ಪನೆಗೂ ನಿಲುಕದ ಪ್ರಮೇಯಗಳು ಆ ಪತ್ರದಲ್ಲಿ ಇದ್ದವು. ತಾನೇ ಜೀನಿಯಸ್ ಎಂದು ಬೀಗುತ್ತಿದ್ದ ಹಾರ್ಡಿ ಸರ್ ಅವರಿಗೆ ಭಾರತವೆಂದರೆ ಕಳಪೆ ಎಂದು ಬೀಗುತ್ತಿದ್ದ ಇಂಗ್ಲಿಷರಿಗೆ ಕಪಾಳಕ್ಕೆ ಹೊಡೆದ ಹಾಗೆ ಆ ಪ್ರಮೇಯಗಳು ನಿರೂಪಿಸಲ್ಪಟ್ಟಿದ್ದವು.
ಹಾರ್ಡಿ ಸರ್ ಅವರಿಗೆ ತಕ್ಷಣ ಅರ್ಥವಾದ ಸಂಗತಿ ಎಂದರೆ ಆ ಪತ್ರವನ್ನು ಬರೆದವನು ಒಬ್ಬ ಮ್ಯಾಥಮ್ಯಾಟಿಕ್ ಜೀನಿಯಸ್ ಎಂಬುದು. ಅನಂತ ಸಾಮ್ರಾಜ್ಯದಲ್ಲಿ ಈಜಾಡುತ್ತಿದ್ದ ಒಬ್ಬ ಗಣಿತ ತಜ್ಞನಿಗೆ ಮಾತ್ರ ಅಂತಹ ಪ್ರಮೇಯಗಳನ್ನು ನಿರೂಪಿಸಲು ಸಾಧ್ಯ ಎಂದು ಅವರಿಗೆ ಅರಿವಾಗಿತ್ತು. ಆ ಅದ್ಭುತ ಗಣಿತ ಪ್ರತಿಭೆಯನ್ನು ಇಂಗ್ಲೆಂಡಿಗೆ ಕರೆಸಬೇಕು ಎಂದು ಅವರಿಗೆ ತಕ್ಷಣ ಪ್ರೇರಣೆ ಉಂಟಾಯಿತು.
ಆದರೆ ಆ ಗಣಿತ ಪ್ರತಿಭೆ ಎಲ್ಲಿತ್ತು ಅಂದರೆ…!
ಆದರೆ ಆ ಗಣಿತ ಪ್ರತಿಭೆ ಮಾತ್ರ ಮದರಾಸಿನ ಬಂದರಲ್ಲಿ ಮೂಟೆ ಲೆಕ್ಕ ಮಾಡುವ ಕೆಲಸವನ್ನು ಮಾಡುತ್ತಿತ್ತು.
1887ರ ಡಿಸೆಂಬರ್ 22ರಂದು ಕುಂಭಕೋಣಂ ಎಂಬಲ್ಲಿ ಹುಟ್ಟಿದ್ದ ರಾಮಾನುಜನ್ ಅತ್ಯಂತ ಬಡತನದ ಬಾಲ್ಯವನ್ನು ಕಳೆಯಬೇಕಾಗಿತ್ತು. ಆತನಿಗೆ ಗಣಿತದಲ್ಲಿ ಮಾತ್ರ ಆಸಕ್ತಿ ಇತ್ತು. ಬೇರೆ ವಿಷಯಗಳು ಸಪ್ಪೆ ಎಂಬ ಭಾವನೆ. ಪರಿಣಾಮವಾಗಿ ಆತ ಎರಡೆರಡು ಬಾರಿ FA ಪರೀಕ್ಷೆಯಲ್ಲಿ ಫೇಲ್ ಆಗಿದ್ದ. ಆಂಧ್ರ ಪ್ರದೇಶದಲ್ಲಿ ಉದ್ಯೋಗ ಹುಡುಕಿ ಹೈರಾಣ ಆಗಿದ್ದ. ಕಾಲೇಜಿಗೆ ಸೇರಲು ಅರ್ಹತೆ ಇಲ್ಲದೆ ಒದ್ದಾಡುತ್ತಿದ್ದ. ಅವನಿಗೆ ಯಾರೂ ಉದ್ಯೋಗವನ್ನು ಕೊಡುತ್ತಲೆ ಇರಲಿಲ್ಲ.
ಮದುವೆ ಬೇರೆ ಆಗಿ ಜವಾಬ್ದಾರಿಯೂ ಹೆಗಲ ಮೇಲೆ ಏರಿತ್ತು. ಯಾರು ಯಾವ ಕೆಲಸ ಕೊಟ್ಟರೂ ಆತ ಮಾಡಲು ತಯಾರಾಗಿದ್ದ. ಆತನಿಗೆ ದೊರೆತ ಕೆಲಸವೆಂದರೆ ಮದರಾಸು ಬಂದರಿನಲ್ಲಿ ಬಂದು ಹೋಗುತ್ತಿದ್ದ ಕಾರ್ಗೋ ಪೆಟ್ಟಿಗೆಗಳ ಲೆಕ್ಕ ಬರೆಯುವ ಕೆಲಸ. ಈ ಕೆಲಸ ಮಾಡಲು ಎರಡನೇ ಕ್ಲಾಸಿನ ಜ್ಞಾನ ಸಾಕು ಎಂದು ಅವನು ಮನದಲ್ಲಿಯೇ ಗೊಣಗುತ್ತಿದ್ದ. ಆದರೆ ಹೊಟ್ಟೆಪಾಡು ಕೇಳಬೇಕಲ್ಲ.
ನಾನು ಗಣಿತಕ್ಕಾಗಿ ಬದುಕಬೇಕು
ಸಿಕ್ಕ ಸಿಕ್ಕವರ ಹತ್ತಿರ ಆತನ ಬೇಡಿಕೆ ಇಷ್ಟೇ ಇತ್ತು. ‘ನನ್ನ ಗಣಿತದ ಕೆಲಸ ಮುಂದುವರಿಸಿಕೊಂಡು ಹೋಗಲು ನಾನು ಬದುಕಿರಬೇಕು. ನನಗೆ ಬದುಕಲು ಬೇಕಾದ ಅನ್ನ ಸಿಕ್ಕಿದರೆ ಸಾಕು. ದಯವಿಟ್ಟು ಅಂತಹ ಕೆಲಸ ಕೊಡಿ. ಪುಡಿಕಾಸು ಸಂಬಳವಾದರೂ ಪರವಾಗಿಲ್ಲ.’
ಅತ್ಯಂತ ದೊಡ್ಡ ಗಣಿತದ ಪ್ರತಿಭೆಯೊಂದು ಈ ರೀತಿಯ ದೈನ್ಯದಿಂದ ಬದುಕುತ್ತಿರುವ ಸಂಗತಿಯನ್ನು ತಿಳಿದು ಹಾರ್ಡಿ ಸರ್ ಮಮ್ಮಲ ಮರುಗಿದರು. ಕಾಡಿನ ಒಳಗೆ ಕಸ್ತೂರಿ ಮೃಗ ತನ್ನ ನಾಭಿಯಿಂದ ಒಸರುವ ಸುಗಂಧ ದ್ರವ್ಯದ ಅರಿವು ಇಲ್ಲದೆ ಮೂಗು ನಿಮಿರಿಸಿ ಕಾಡಿನ ಉದ್ದಕ್ಕೂ ಸುಗಂಧವನ್ನು ಹುಡುಕುತ್ತದಂತೆ. ಅಂತಹ ಕಸ್ತೂರಿ ಮೃಗ ನಮ್ಮ ರಾಮಾನುಜನ್ ಎಂದು ಅವರಿಗೆ ಅರ್ಥ ಆಯಿತು.
ಹಾರ್ವರ್ಡ್ ವಿವಿಯ ಅಧಿಕಾರಿಗಳನ್ನು ತಕ್ಷಣ ಭೇಟಿ ಆದ ಹಾರ್ಡಿ ಸರ್ ತನ್ನ ಪೂರ್ಣ ಪ್ರಭಾವವನ್ನು ಬೀರಿದರು. ಹಣಕಾಸಿನ ವ್ಯವಸ್ಥೆ ಕೂಡ ಆಯಿತು. ಭಾರತದಿಂದ ಇಂಗ್ಲೆಂಡಿಗೆ ಬರಲು ರಾಮಾನುಜನ್ ಅವರಿಗೆ ಪತ್ರ ಮತ್ತು ಹಡಗಿನ ಟಿಕೆಟ್ ರವಾನೆ ಆಯಿತು. ಆ ಪತ್ರ ದೊರಕಿದ ದಿನ ರಾಮಾನುಜನ್ ಪುಟ್ಟ ಮಗುವಿನ ಹಾಗೆ ಕಣ್ಣೀರು ಸುರಿಸಿದ್ದೂ ಆಯಿತು.
ಮುಂದಿನ ಸವಾಲು ಎಂದರೆ ಸಣ್ಣ ಪ್ರಾಯದ ಹೆಂಡತಿಯನ್ನು ಒಪ್ಪಿಸುವುದು. ಆಕೆ ತಾನೂ ಇಂಗ್ಲೆಂಡಿಗೆ ಬರುತ್ತೇನೆ ಎಂದು ಹಠ ಹಿಡಿದಾಗ ರಾಮಾನುಜನ್ ನಿರಾಕರಿಸಿದರು. ಅಮ್ಮ ಅವರಿಗಾಗಿ ಎರಡು ಕೋಟುಗಳನ್ನು ಹೊಲಿಸಿಕೊಟ್ಟರು.
ಅಂತೂ 17 ಮಾರ್ಚ್ 1914ರಂದು SS NEVASA ಎಂಬ ಪ್ಯಾಸೆಂಜರ್ ಹಡಗಿನಲ್ಲಿ ಕುಂಭಕೋಣಂನ ಅದ್ಭುತ ಗಣಿತದ ಪ್ರತಿಭೆ ಇಂಗ್ಲೆಂಡಿಗೆ ಹೊರಟಿತ್ತು. ಮುಂದೆ ನಡೆದದ್ದು ಎಲ್ಲವೂ ಇತಿಹಾಸ.
ಅದರ ಬಗ್ಗೆ ಇನ್ನೊಮ್ಮೆ ವಿಸ್ತಾರವಾಗಿ ಬರೆಯುವೆ.
ರಾಜೇಂದ್ರ ಭಟ್ ಕೆ.