ಪುತ್ತೂರು: ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಕರ್ನಾಟಕದ ವತಿಯಿಂದ ಬಡ ರೇವತಿ ಕುಟುಂಬಕ್ಕೆ ನೂತನವಾಗಿ ನಿರ್ಮಿಸಿಕೊಟ್ಟ ನೂತನ ಮನೆ “ನೆರಳು” ಇದರ ಹಸ್ತಾಂತರ ಸಮಾರಂಭ ಹಾಗೂ ಸೇವಾ ಸಾಧಕರಿಗೆ ಸನ್ಮಾನ, ಸೇವಾ ಸಂಸ್ಥೆಗಳಿಗೆ ಗೌರವಾರ್ಪಣೆ ಭಾನುವಾರ ಕಬಕ ಗ್ರಾಮದ ಕುಂದ್ರುಕೋಟೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರು ನಗರ ಠಾಣಾ ಇನ್ ಸ್ಪೆಕ್ಟರ್ ಆಂಜನೇಯ ರೆಡ್ಡಿ ಮಾತನಾಡಿ, ಜೀವನದಲ್ಲಿ ಸಹಾಯ ಮಾಡುವ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಪ್ರೀತಿಯಿಂದ, ಆದರತೆಯಿಂದ ದಾನ ಮಾಡಿದರೆ ಅದು ನಿಜವಾದ ಸಮಾಜ ಸೇವೆ. ಈ ನಿಟ್ಟಿನಲ್ಲಿ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಇತರ ಸಂಘ ಸಂಸ್ಥೆಗಳನ್ನು, ದಾನಿಗಳನ್ನು ಸೇರಿಸಿಕೊಂಡು ನೂತನ ಮನೆಯನ್ನು ಹಸ್ತಾಂತರಿಸುವ ಮೂಲಕ ಇನ್ನೊಬ್ಬರಿಗೆ ಮಾಡುವ ಸಹಾಯದಿಂದ ಸಂತೋಷ ಕಂಡಿದೆ ಎಂದರು.
ಪುತ್ತೂರು ಗ್ರಾಮಾಂತರ ಠಾಣಾ ಎಸ್ ಐ ಸುಷ್ಮಾ ಭಂಡಾರಿ ಮಾತನಾಡಿ, ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಜಾತಿ-ಮತ-ಬೇಧವನ್ನು ಮೀರಿ ಸಮಾಜದಲ್ಲಿನ ಆ ಶಕ್ತಿಗೆ ಸಹಾಯ ಮಾಡುವ ಮೂಲಕ ಎಲ್ಲರಿಗೂ ಸ್ಪೂರ್ತಿದಾಯವಾಗಿದೆ. ಇನ್ನಷ್ಟು ಬಡವರಿಗೆ ಸಹಾಯಹಸ್ತ ಚಾಚುವ ಮೂಲಕ ನಿರಂತರವಾಗಿ ಸಂಸ್ಥೆಯ ಸೇವೆ ನಡೆಯಲಿದೆ ಎಂದರು.
ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಒಂದು ಮಾರ್ಗದರ್ಶ ಸಂಸ್ಥೆಯಾದ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ತೋರಿಸಿಕೊಟ್ಟಿದೆ ಎಂದರು.
ಮಂಗಳೂರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ, ಸಾಫ್ಟ್ ವೇರ್ ಇಂಜಿನಿಯರ್, ಅರ್ಜುನ್ ಭಂಡಾರ್ ಕರ್ ಮಾತನಾಡಿ, ಮನೆ ಕಟ್ಟಿ ಕೊಡುವ ಕೆಲಸ ಮುಖ್ಯವಲ್ಲ. ಅದರ ಹಿಂದಿನ ಶ್ರಮ ಎಷ್ಟಿದೆ ಎಂಬುದು ಇದರಲ್ಲಿ ತೊಡಗಿಸಿಕೊಂಡವರಿಗಷ್ಟೇ ಗೊತ್ತು. ನಾವು ಬೆಳೆಯುವ ಮೂಲಕ ಇನ್ನೊಂದು ಸಂಸ್ಥೆಯನ್ನು ಬೆಳೆಸುವ ಟ್ರಸ್ಟ್ ನ ಕಾರ್ಯ ಅಭಿನಂದನೀಯ ಎಂದರು.
ಅಪತ್ಭಾಂಧವ ಈಶ್ವರ್ ಮಲ್ಪೆ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಉದನೇಶ್ವರ ಭಟ್ ಸಮಾರಂಭ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಟ್ರಸ್ಟ್ ನ ಸಚಿನ್, ರಾಜೇಶ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಲವಾರು ಸಂಘ ಸಂಸ್ಥೆಗಳು, ಮನೆ ನಿರ್ಮಿಸಿಕೊಡುವಲ್ಲಿ ಸಹಾಯ ಮಾಡಿದ, ಕೊಡುಗೆಗಳನ್ನು ನೀಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅರ್ಜುನ್ ಭಂಡಾರ್ ಕರ್ ಮನೆಯ ಕೀಯನ್ನು ನೀಡುವ ಮೂಲಕ ಮನೆಯನ್ನು ರೇವತಿಗೆ ಅವರಿಗೆ ಹಸ್ತಾಂತರಿಸಿದರು.
ಸಂಜನಾ ಭಟ್ ಪ್ರಾರ್ಥಿಸಿದರು. ಟ್ರಸ್ಟ್ ಕೋಶಾಧಿಕಾರಿ ಗಿರೀಶ್ ಎಂ.ಎಸ್. ಸ್ವಾಗತಿಸಿ, ವಂದಿಸಿದರು. ಸಿಆರ್ ಪಿ ಗಣೇಶ್ ನಡುವಾಳ್ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ಕಾರ್ಯದರ್ಶಿ ಮನೋಹರ್ ಪೂಜಾರಿ, ಡಿ.ಎಸ್.ಓಡ್ಯ, ನೀತು, ಉಪಾಧ್ಯಕ್ಷ ಸತ್ಯನಾರಾಯಣ ಭಟ್ ಅತಿಥಿಗಳನ್ನು ಗೌರವಿಸಿದರು.