ರಶ್ಮಿಕಾ ಮಂದಣ್ಣ ಬೆಳೆದು ಬಂದ ದಾರಿ ನಿಜಕ್ಕೂ ವಿಸ್ಮಯ
ಇಂದು ಇಡೀ ಭಾರತದ ಸಿನೆಮಾ ಇಂಡಸ್ಟ್ರಿ ಆಕೆಯ ಸೌಂದರ್ಯ ಮತ್ತು ಪ್ರತಿಭೆಗೆ ಬೆರಗಾಗಿದೆ. ಆಕೆಯನ್ನು ಸಿನೆಮಾ ಪಂಡಿತರು ಭಾರತದ ಕೃಶ್ ಎಂದು ಕರೆಯಲು ಆರಂಭಿಸಿದ್ದಾರೆ. ಆಕೆ ಇಂದು ದಕ್ಷಿಣ ಭಾರತದ ಅತ್ಯಂತ ಹೆಚ್ಚು ಸಂಭಾವನೆ ಪಡೆವ ನಟಿ ಎಂದು ಕರೆಯಲ್ಪಟ್ಟಿದ್ದಾರೆ. ಭಾರತದ ಹೆಚ್ಚಿನ ಸೂಪರ್‌ಸ್ಟಾರ್ ನಟರ ಜೊತೆ ಆಕೆ ನಟಿಸಿ ಆಗಿದೆ. ದಕ್ಷಿಣ ಭಾರತದ ಒಬ್ಬ ನಟಿ ಅಮಿತಾಬ್, ಸಲ್ಮಾನ್ ಖಾನ್ ಮೊದಲಾದ ಮಹಾನ್ ನಟರ ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಅಂದರೆ ಅದು ನಿಜಕ್ಕೂ ವಿಸ್ಮಯವೇ ಸರಿ.
ಆಕೆ ರಶ್ಮಿಕಾ ಮಂದಣ್ಣ
ಸಾನ್ವಿಯಿಂದ ಶ್ರೀವಲ್ಲಿಯವರೆಗೆ
ರಶ್ಮಿಕಾ ಮಂದಣ್ಣ ಹುಟ್ಟಿದ್ದು ಕರ್ನಾಟಕದ ವಿರಾಜಪೇಟೆಯ ಒಂದು ಕೊಡವ ಕುಟುಂಬದಲ್ಲಿ. ಬಾಲ್ಯದಲ್ಲಿ ಆಕೆಯ ಕುಟುಂಬ ಆರ್ಥಿಕವಾಗಿ ಕಷ್ಟಪಟ್ಟಿದ್ದು, ಮನೆಯ ಬಾಡಿಗೆ ಕಟ್ಟಲು ಪರದಾಡಿದ್ದು ಆಕೆಗೆ ನೆನಪಿದೆ. ಆಕೆಯ ತಂದೆಗೆ ಸಣ್ಣ ಕಾಫಿ ಎಸ್ಟೇಟ್ ಕೂಡ ಇತ್ತು. ಬಾಲ್ಯದ ನೋವು ಮತ್ತು ಕಷ್ಟಗಳು ಆಕೆಯನ್ನು ಸ್ಟ್ರಾಂಗ್ ಮಾಡಿದ್ದವು. ಅಂತರ್ಮುಖಿಯಾಗಿದ್ದ ಆಕೆಗೆ ಶಾಲಾಹಂತದಲ್ಲಿ ಸಂವಹನದ ಸಮಸ್ಯೆ ಕೂಡ ಇತ್ತು. ಆಗೆಲ್ಲಾ ಮಗಳ ನೆರವಿಗೆ ಗಟ್ಟಿಯಾಗಿ ನಿಂತದ್ದು ಆಕೆಯ ಅಮ್ಮನೇ. ಆಕೆಯ ಮಹಾ ಯಶಸ್ಸಿನಲ್ಲಿ ಅಮ್ಮನ ಪಾತ್ರ ದೊಡ್ಡದು.
ಮುಂದೆ ಮನಶ್ಶಾಸ್ತ್ರದಲ್ಲಿ ಪದವಿ ಪಡೆಯಲು ಬೆಂಗಳೂರಿನ ಎಂ.ಎಸ್ ರಾಮಯ್ಯ ಕಾಲೇಜಿಗೆ ಸೇರಿದ್ದರು ರಶ್. ಆಗ ಟೈಮ್ಸ್ ಆಫ್ ಇಂಡಿಯಾ ನಡೆಸಿದ ‘ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ’ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದದ್ದು, ಅದನ್ನು ಸೂಪರ್‌ಸ್ಟಾರ್ ನಟ ಅಕ್ಷಯ ಕುಮಾರ್ ಕೈಯಿಂದ ಪಡೆದುಕೊಂಡದ್ದು ಆಕೆಯನ್ನು ಮುಂದೆ ಮಾಡೆಲಿಂಗ್ ಕ್ಷೇತ್ರಕ್ಕೆ ಕರೆದಿತಂದಿತು. ಆಗ ತನ್ನ ಕಿರಿಕ್ ಪಾರ್ಟಿ ಸಿನೆಮಾಕ್ಕೆ ಮುಗ್ಧ ಮುಖದ ತಲಾಶೆಯಲ್ಲಿದ್ದ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಕಠಿಣವಾದ ಆಡಿಶನ್ ಟೆಸ್ಟಿನಲ್ಲಿ ಗೆದ್ದುಬಂದು ಸಾನ್ವಿ ಆದದ್ದು, ಕಿರಿಕ್ ಪಾರ್ಟಿ ಸೂಪರ್ ಹಿಟ್ ಆದದ್ದು, ರಶ್ ಇಡೀ ಕರ್ನಾಟಕದ ಕೃಶ್ ಆದದ್ದು ಈಗ ಇತಿಹಾಸ.
ಆಕೆ ಕೇವಲ ಮರ ಸುತ್ತುವ ಪಾತ್ರಗಳಿಗೆ ಅಂಟಿಕೊಳ್ಳುವ ಗ್ಲಾಮರ್ ಗೊಂಬೆ ಅಲ್ಲ ಎಂದು ಸಿನೆಮಾ ಪಂಡಿತರು ಆಗಲೇ ಭವಿಷ್ಯ ಹೇಳಿ ಆಗಿತ್ತು.
ರಕ್ಷಿತ್ ಶೆಟ್ಟಿ ಜೊತೆ ಮುರಿದು ಬಿದ್ದ ನಿಶ್ಚಿತಾರ್ಥ
ಕಿರಿಕ್ ಪಾರ್ಟಿ ಸಿನೆಮಾ ಹಿಟ್ ಆದ ಬೆನ್ನಿಗೆ ರಕ್ಷಿತ್ ಮತ್ತು ರಶ್ ಪರಸ್ಪರ ಪ್ರೀತಿಸಿ ಅದ್ದೂರಿಯಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡರು. ಆದರೆ ಹೊಂದಾಣಿಕೆಯ ಕೊರತೆಯಿಂದ ಆ ನಿಶ್ಚಿತಾರ್ಥ ಒಂದೇ ವರ್ಷಕ್ಕೆ ಮುರಿದುಬಿತ್ತು. ಆಕೆಯ ಮಹತ್ವಾಕಾಂಕ್ಷಿ ಮನೋಭಾವ ಅದಕ್ಕೆ ಕಾರಣ ಎಂದು ಮಾಧ್ಯಮಗಳು ಮಾತಾಡಿಕೊಂಡವು. ಆಕೆಯನ್ನು ಬಹಿರಂಗವಾಗಿ ಬಯ್ದವು.
ಆದರೆ ಆಕೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವ ಹುಡುಗಿ ಅಲ್ಲವಲ್ಲ. ಮುಂದೆ ಪುನೀತ್ ರಾಜಕುಮಾರ್ ಜೊತೆಗೆ ಅಂಜನಿ ಪುತ್ರ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಚಮಕ್, ಧ್ರುವ ಸರ್ಜಾ ಜೊತೆಗೆ ಪೊಗರು, ದರ್ಶನ್ ಜೊತೆಗೆ ಯಜಮಾನ ಮೊದಲಾದ ಕನ್ನಡ ಸಿನೆಮಾಗಳಲ್ಲಿ ಆಕೆಗೆ ಅಭಿನಯಿಸುವ ಅವಕಾಶ ದೊರೆಯಿತು. ಆಕೆ ತನ್ನ ಪಾತ್ರಗಳಿಗೆ ನ್ಯಾಯ ಒದಗಿಸಿದರು. ಎಲ್ಲ ಸಿನಿಮಾಗಳೂ ಸೂಪರ್ ಹಿಟ್ ಆದವು.
ಕೈ ಬೀಸಿ ಕರೆದವು ತೆಲುಗು, ತಮಿಳು ಮತ್ತು ಹಿಂದಿ ಸಿನೆಮಾರಂಗಗಳು
ಆಕೆಗೆ ಯಾವ ಗಾಡ್‌ಫಾದರ್ ಇರಲಿಲ್ಲ. ಮುಗ್ಧವಾದ ಲುಕ್, ಆಕರ್ಷಕವಾದ ಕಣ್ಣುಗಳು, ಸ್ಕ್ರೀನ್ ಮೇಲೆ ಎದ್ದುಕಾಣುವ ಸೌಂದರ್ಯ, ಎಷ್ಟು ಕಷ್ಟವಾದ ನೃತ್ಯಕ್ಕೂ ಹೆಜ್ಜೆ ಹಾಕುವ ಶಕ್ತಿ ಮತ್ತು ಪ್ರತಿಯೊಂದು ಪಾತ್ರಕ್ಕೂ ಪ್ರತ್ಯೇಕವಾಗಿ ಸಿದ್ಧವಾಗುವ ಹಟ ಆಕೆಯನ್ನು ಗೆಲ್ಲಿಸುತ್ತಾ ಹೋದವು. ಇಡೀ ಭಾರತದಲ್ಲಿಯೇ ಅತ್ಯಂತ ಶ್ರೀಮಂತವಾದ ತೆಲುಗು ಚಿತ್ರರಂಗ ಆಕೆಯ ಸೌಂದರ್ಯ ಮತ್ತು ಪ್ರತಿಭೆಯನ್ನು ತುಂಬಾ ಅದ್ಭುತವಾಗಿ ಬಳಸಿಕೊಂಡಿತು. ವಿಜಯ್ ದೇವರಕೊಂಡ ಜೊತೆಗೆ ನಟಿಸಿದ ಗೀತಾ ಗೋವಿಂದ ಮತ್ತು ಡಿಯರ್ ಕಾಮ್ರೇಡ್ ಬ್ಲಾಕ್‌ಬಸ್ಟರ್ ಹಿಟ್ ಆದವು. ಅವರಿಬ್ಬರ ಸ್ಕ್ರೀನ್ ಕೆಮಿಸ್ಟ್ರಿ ಭಾರಿ ಅದ್ಭುತ ಆಗಿದ್ದರಿಂದ ಅವರಿಬ್ಬರೂ ಮದುವೆ ಆಗ್ತಾರೆ ಎಂದು ರೂಮರ್ ಕೂಡ ಹಬ್ಬಿತ್ತು. ಅದಕ್ಕೆ ಕೂಡ ರಶ್ ಉತ್ತರ ಕೊಡಲು ಹೋಗಲೇ ಇಲ್ಲ.
ಮುಂದೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟರಾದ ವಿಜಯ್, ನಿತಿನ್, ಕಾರ್ತಿ, ಮಹೇಶ್ ಬಾಬು, ನಾಗಶೌರ್ಯ ಅವರ ಜೊತೆ ಸಿನೆಮಾಗಳಲ್ಲಿ ನಟಿಸುವ ಅವಕಾಶ ಆಕೆಗೆ ದೊರೆಯಿತು.
ಡಿಯರ್ ಕಾಮ್ರೇಡ್ ಸಿನೆಮಾದಲ್ಲಿ ಕ್ರೀಡಾಪಟುವಿನ ಪಾತ್ರದಲ್ಲಿ ಅಭಿನಯಿಸಲು ಆಕೆ 5 ತಿಂಗಳು ಕಠಿಣವಾದ ತರಬೇತಿ ಪಡೆದದ್ದು, ತೆಲುಗು ಮತ್ತು ತಮಿಳು ಭಾಷೆಗಳ ಅಸೆಂಟ್ ಮತ್ತು ಉಚ್ಚಾರಗಳನ್ನು ಕಲಿಯಲು ಶ್ರಮವಹಿಸಿದ್ದು, ಜಿಮ್‌ನಲ್ಲಿ ಬೆವರು ಹರಿಸಿದ್ದು, ನೃತ್ಯದ ಕಠಿಣವಾದ ಹೆಜ್ಜೆಗಳನ್ನು ಕಲಿಯಲು ಪರಿಶ್ರಮ ಹಾಕಿದ್ದು ಎಲ್ಲವೂ ಮುಂದೆ ಅದ್ಭುತವಾದ ಫಲಿತಾಂಶವನ್ನು ನೀಡಿದವು.
ಆಕೆಯ ಸುಲ್ತಾನ್, ಸೀತಾ ರಾಮನ್, ಭೀಷ್ಮ, ವಾರಿಸು, ದೇವದಾಸ್, ಸರಿಲ್ಲೇವರು ನಿಕ್ಕೇವರು, ಚಾಲೋ ಮೊದಲಾದ ತೆಲುಗು, ತಮಿಳು ಸಿನೆಮಾಗಳು ಸೂಪರ್ ಡೂಪರ್ ಹಿಟ್ ಆದವು. ಕೇವಲ ಎಂಟು ವರ್ಷಗಳಲ್ಲಿ ಆಕೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿಯಾದದ್ದು ನಿಜಕ್ಕೂ ಅದ್ಭುತ.
ಪುಷ್ಪಾದ ಶ್ರೀವಲ್ಲಿ ಆಕೆಯದ್ದೆ ಬ್ರಾಂಡ್
2021ರಲ್ಲಿ ನಿರ್ಮಾಣವಾದ ಅಲ್ಲೂ ಅರ್ಜುನ್ ಅಭಿನಯದ ಪುಷ್ಪಾ ದ ರೈಸ್ (ಭಾಗ 1) ಸಿನೆಮಾದಲ್ಲಿ ಆಕೆ ಮಾಡಿದ ಶ್ರೀವಲ್ಲಿಯ ಪಾತ್ರ ಯಾವ ರೀತಿಯ ಹವಾ ಕಟ್ಟಿಕೊಟ್ಟಿತು ಎಂದರೆ ಆಕೆ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಡಿಮ್ಯಾಂಡ್ ಮತ್ತು ಸಂಭಾವನೆ ಪಡೆಯುವ ನಟಿ ಎಂದು ಕೀರ್ತಿ ಪಡೆದರು. ಆ ಪಾತ್ರ ಆಕೆಯ ವ್ಯಕ್ತಿತ್ವಕ್ಕೆ ಅತ್ಯಂತ ಚಂದವಾಗಿ ಹೊಂದಿಕೆ ಆಯಿತು. ಆಕೆ ಮತ್ತು ಅಲ್ಲೂ ಅರ್ಜುನ್ ಕೆಮಿಸ್ಟ್ರಿ ಕೂಡ ಅದ್ಭುತವಾಗಿಯೇ ಇತ್ತು. ಆಕೆಯ ನೃತ್ಯ ಮತ್ತು ಅಭಿನಯ ಪ್ರತಿಭೆ ಬಗ್ಗೆ ಇಡೀ ದಕ್ಷಿಣ ಭಾರತದ ಚಿತ್ರರಂಗ ಮಾತಾಡಲು ತೊಡಗಿತ್ತು. ಆಕೆಯ ಸೌಂದರ್ಯ ಪ್ರಜ್ಞೆ, ಪಾತ್ರಗಳ ಆಯ್ಕೆಯಲ್ಲಿದ್ದ ಪ್ರಬುದ್ಧತೆ ಮತ್ತು ಗೆಲ್ಲಬೇಕು ಎಂಬ ಹಟ ಆಕೆಯನ್ನು ಭಾರಿಯಾಗಿ ಗೆಲ್ಲಿಸಿದವು.
ಅದರ ಮಧ್ಯೆ ಆಕೆ ಹಿಂದಿಗೂ ಹೋಗಿ ಮೂರು ಹಿಟ್ ಸಿನೆಮಾಗಳನ್ನು ಕೊಟ್ಟು ಬಂದರು. ಅಮಿತಾಬ್ ಜೊತೆಗೆ ಸವಾಲಿನ ಪಾತ್ರ ಇದ್ದ ‘ಗುಡ್ ಬೈ’ ಸಿನೆಮಾ ಆಕೆಯನ್ನು ಗೆಲ್ಲಿಸಿತು. ಅತ್ಯಂತ ಕಠಿಣವಾದ ‘ಅನಿಮಲ್’ ಸಿನೆಮಾದಲ್ಲಿ ಆಕೆಯ ಅಭಿನಯ ತುಂಬಾ ಅದ್ಭುತವಾಗಿ ಇತ್ತು. ಆ ಸಿನೆಮಾದ ಕಥೆ ಟೀಕೆಗೆ ಒಳಗಾದರೂ ರಶ್ ಅಲ್ಲಿ ಗೆದ್ದರು. ಮುಂದೆ ಸಲ್ಮಾನ್ ಖಾನ್ ಜೊತೆಗೆ ಸಿಕಂದರ್ ಸೇರಿದಂತೆ ಮೂರು ಬಿಗ್ ಬಜೆಟ್ ಹಿಂದಿ ಸಿನೆಮಾಗಳಲ್ಲಿ ಅಭಿನಯಿಸುವ ಅವಕಾಶವನ್ನು ಆಕೆ ಪಡೆದರು ಎಂಬಲ್ಲಿಗೆ ರಶ್ ಇಂದು ಇಡೀ ಭಾರತದ ಕೃಶ್ ಆಗಿದ್ದಾರೆ ಅನ್ನಲು ಏನೂ ಅಡ್ಡಿಯಿಲ್ಲ.
ಪುಷ್ಪಾ ದ ರೂಲ್ (ಪಾರ್ಟ್ 2) ಎಂಬ ವೈಲ್ಡ್ ಫಯರ್
ಅಂದಾಜು 450 ಕೋಟಿ ಬಜೆಟನ ಪುಷ್ಪಾ 2 ಸಿನೆಮಾ ಈ ವಾರ ದೇಶದಾದ್ಯಂತ ಬಿಡುಗಡೆ ಆಗಿದ್ದು, ಈಗಾಗಲೇ ಭಾರಿ ಹವಾ ಸೃಷ್ಟಿ ಮಾಡಿದೆ. ಸಿನೆಮಾ ಬಿಡುಗಡೆ ಆಗುವ ಮೊದಲೇ ನಿರ್ಮಾಪಕರನ್ನು ಗೆಲ್ಲಿಸಿದ ಸಿನೆಮಾ ಅದು. ಇಂದು ಎಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಪುಷ್ಪಾ ಸಿನೆಮಾದ್ದೆ ಚರ್ಚೆ. ಅಲ್ಲೂ ಅರ್ಜುನ್ ಅವರ ವೇಗ, ಎನರ್ಜಿ, ಬಾಡಿ ಲ್ಯಾಂಗ್ವೇಜ್ ಇವುಗಳ ಬಗ್ಗೆ ಮಾಧ್ಯಮಗಳು ಚರ್ಚೆ ಮಾಡುವುದರ ಜೊತೆಗೆ ರಶ್ಮಿಕಾ ಮಾಡಿರುವ ಶ್ರೀವಲ್ಲಿ ಪಾತ್ರದ ಬಗ್ಗೆಯೂ ಭರಪೂರ ಮೆಚ್ಚುಗೆ ಹರಿದುಬರುತ್ತಿದೆ. ಆಕೆಯ ಅಭಿನಯಕ್ಕೆ ಭಾಗ ಒಂದಕ್ಕಿಂತ ಇಲ್ಲಿ ಹೆಚ್ಚು ಸ್ಪೇಸ್ ದೊರೆತಿದೆ.
ಈ ಸಿನಿಮಾಕ್ಕೆ ರಶ್ಮಿತಾ ಮಂದಣ್ಣ ದಾಖಲೆಯ 15 ಕೋಟಿ ರೂ. ಸಂಭಾವನೆ ಪಡೆಡಿದ್ದಾರೆ ಎಂಬ ಸುದ್ದಿ ಇದೆ. ಅಲ್ಲಿಗೆ ಆಕೆ ದಕ್ಷಿಣ ಭಾರತದಲ್ಲಿಯೇ ಅತ್ಯಧಿಕ ಸಂಭಾವನೆ ಪಡೆದ ನಟಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಮೊದಲ ಸಿನೆಮಾ ಕಿರಿಕ್ ಪಾರ್ಟಿಗೆ ಆಕೆ ಕೇವಲ 3 ಲಕ್ಷ ಸಂಭಾವನೆ ಪಡೆದಿದ್ದರು ಎಂಬುದನ್ನು ನೆನಪಿಸಿಕೊಂಡಾಗ ಆಕೆ ಇಂದು ಏರಿದ ಎತ್ತರ, ಪಡೆದ ಜನಪ್ರಿಯತೆ ನಮಗೆ ಅರಿವಾಗುತ್ತದೆ. ಹಲವು ದೇಶೀಯ ಮತ್ತು ಜಾಗತಿಕ ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿ ಕೂಡ ಆಕೆ ಕೋಟಿ ಕೋಟಿ ದುಡಿಯುತ್ತಿದ್ದಾರೆ.
ಆಕೆಗೆ ಧಿಮಾಕು, ದುರಹಂಕಾರ ಜಾಸ್ತಿ ಎಂದು ಟೀಕೆ ಮಾಡುವವರೂ ಆಕೆಯ ಪ್ರತಿಭೆ ಮತ್ತು ಬದ್ಧತೆಗಳನ್ನು ಹೊಗಳುತ್ತಾರೆ ಎಂಬಲ್ಲಿಗೆ ಈ ಶ್ರೀವಲ್ಲಿ ಗೆದ್ದಾಗಿದೆ ಎನ್ನುವುದು ಸತ್ಯ.
ರಾಜೇಂದ್ರ ಭಟ್ ಕೆ.