ಎಪಿಕೆ ಮಾದರಿಯ ಫೈಲ್ ಕಳುಹಿಸಿ ಮಂಗಳೂರಿನ ವ್ಯಕ್ತಿಗೆ ವಂಚನೆ
ಮಂಗಳೂರು : ಪೊಲೀಸರು ಚಾಪೆ ಕೆಳಗೆ ತೂರಿದರೆ ಸೈಬರ್ ವಂಚಕರು ರಂಗೋಲಿ ಕೆಳಗೆ ತೂರುವ ಕಲೆಯನ್ನು ಕರಗತಮಾಡಿಕೊಳ್ಳುತ್ತಿದ್ದಾರೆ. ಇಷ್ಟರ ತನಕ ಮೊಬೈಲ್‌ನಲ್ಲಿರುವ ಕೆಲವು appಗಳನ್ನು ಹ್ಯಾಕ್ ಮಾಡಿ ಬ್ಯಾಂಕ್ ಖಾತೆಗಳಲ್ಲಿರುವ ಹಣ ಲಪಟಾಯಿಸುತ್ತಿದ್ದ ವಂಚಕರು ಈಗ ಇಡೀ ಮೊಬೈಲನ್ನೇ ಹ್ಯಾಕ್ ಮಾಡುವ ಹೊಸ ತಂತ್ರವನ್ನು ಕಂಡುಕೊಂಡಿದ್ದಾರೆ. ಮಂಗಳೂರಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಇಂಥ ಪ್ರಕರಣವೊಂದು ನಡೆದಿದ್ದು, ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.
ವಾಟ್ಸಪ್‌ಗೆ ನಕಲಿ ಎಪಿಕೆ ಮಾದರಿಯ ಫೈಲ್ ಕಳುಹಿಸಿ ಪೂರ್ತಿ ಮೊಬೈಲನ್ನು ಹ್ಯಾಕ್ ಅವರ ಹೆಸರಿನಲ್ಲೇ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಆರ್ಡರ್ ಮಾಡಿ ವಂಚಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ದಿಲ್ಲಿಯಲ್ಲಿ ಬಂಧಿಸಿದ್ದಾರೆ.
ಮಂಗಳೂರಿನ ಯದುನಂದನ್ ಆಚಾರ್ಯ ಎಂಬವರ ಮೊಬೈಲ್‌ಗೆ ಬೆಂಗಳೂರು ಸಿಟಿ ಪೊಲೀಸರ ಹೆಸರಿನಲ್ಲಿ ನಿಮ್ಮ ವಾಹನದ ದಂಡ ಪಾವತಿ ಬಾಕಿ ಇದೆ ಎಂಬ ಮೆಸೇಜ್ ಬಂದಿತ್ತು. ಈ ದಂಡ ಪಾವತಿಗೆ ವಾಹನ್ ಪರಿವಾಹನ್ ಎಂಬ ಸಾರಿಗೆ ಇಲಾಖೆಯ ಆ್ಯಪ್‌ನ ಎಪಿಕೆ ಫೈಲ್ ಸಹ ಕಳುಹಿಸಿಕೊಟ್ಟಿದ್ದಾರೆ. ಇದನ್ನು ಇನ್‌ಸ್ಟಾಲ್ ಮಾಡಿ ದಂಡ ಪಾವತಿಸುವಂತೆ ಮೇಸೆಜ್‌ನಲ್ಲಿ ತಿಳಿಸಲಾಗಿತ್ತು.
ಅದರಂತೆ ಯದುನಂದನ್ ಎಪಿಕೆ ಫೈಲ್ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿದ್ದಾರೆ. ಇನ್‌ಸ್ಟಾಲ್ ಮಾಡುತ್ತಿದ್ದಂತೆ ಅವರ ಮೊಬೈಲ್ ಸಂಪೂರ್ಣವಾಗಿ ಸೈಬರ್ ವಂಚಕರ ನಿಯಂತ್ರಣಕ್ಕೆ ಹೋಗಿ ಅವರ ಫ್ಲಿಪ್‌ಕಾರ್ಟ್ ಖಾತೆ ಹ್ಯಾಕ್ ಆಗಿದೆ. ಸೈಬರ್ ವಂಚಕರು ಅವರ ಫ್ಲಿಪ್‌ಕಾರ್ಟ್ ಖಾತೆ ಬಳಸಿಕೊಂಡು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳಿಂದ 1.31 ಲಕ್ಷ ರೂ. ಮೌಲ್ಯದ ಎರಡು ಮೊಬೈಲ್ ಫೋನ್, 1 ಇಯರ್‌ಪಾಡ್ ಮತ್ತು ಗಿಫ್ಟ್ ವೋಚರ್‌ಗಳನ್ನು ಖರೀದಿಸಿದ್ದಾರೆ.
ಮರುದಿನ ತನ್ನ ಮೊಬೈಲ್ ಹ್ಯಾಕ್ ಆಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಯದುನಂದನ್ ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಫ್ಲಿಪ್‌ಕಾರ್ಟ್ ಕಂಪನಿಯನ್ನು ಸಂಪರ್ಕಿಸಿ ಇಯರ್ ಪಾಡ್ ಹಾಗೂ 50 ಸಾವಿರ ರೂ. ಮೌಲ್ಯದ ಗಿಫ್ಟ್ ವೋಚರ್ ಡೆಲಿವರಿಯನ್ನು ತಡೆಹಿಡಿದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಎರಡು ಮೊಬೈಲ್ ಫೋನ್ ಡೆಲಿವರಿ ಆಗಿತ್ತು. ಆದರೆ ಈ ವಿಳಾಸವನ್ನು ಬೆನ್ನತ್ತಿದ್ದಾಗ ದಿಲ್ಲಿಯ ವಿಳಾಸ ಎಂದು ಗೊತ್ತಾಗಿದೆ.
ಮಂಗಳೂರು ಪೊಲೀಸರು ದಿಲ್ಲಿಗೆ ತೆರಳಿ ಡೆಲಿವರಿ ಏಜೆಂಟ್ ವೇಷದಲ್ಲಿ ವಂಚಕನಿದ್ದ ಫ್ಲ್ಯಾಟ್‌ಗೆ ಹೋಗಿದ್ದಾರೆ. ಉಳಿದ ವಸ್ತುಗಳನ್ನು ರಿಸೀವ್ ಮಾಡಿಕೊಳ್ಳಲು ಆರೋಪಿ ಬರುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಗೌರವ್ ಮಕ್ವಾನ್ ಎಂದು ಗುರುತಿಸಲಾಗಿದೆ.
ಆರೋಪಿಯಿಂದ ಐದು ಐಫೋನ್-15, ಎರಡು ಆಂಡ್ರಾಯ್ಡ ಫೋನ್, ಎರಡು ಇಯರ್‌ಪಾಡ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಸೇರಿದಂತೆ 4 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ವಂಚನೆ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಮಾಹಿತಿ ಸಿಕ್ಕಿದ್ದು, ವಂಚಕರು ಈ ಹಿಂದೆಯೂ ಸಾಕಷ್ಟು ಮಂದಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಅನುಮಾನವಿದೆ. ಮೊಬೈಲ್ ಹ್ಯಾಕ್ ಆಗುತ್ತಿದ್ದಂತೆ ಆ ಮೊಬೈಲ್‌ಗಳಲ್ಲಿ ಲಾಗಿನ್ ಆಗಿರುವ ಅಕೌಂಟ್‌ಗಳನ್ನು ಬಳಸಿ ಈ ರೀತಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ತಮ್ಮ ವಿಳಾಸಕ್ಕೆ ಡೆಲಿವರಿ ಮಾಡಿಕೊಳ್ಳುತ್ತಿದ್ದರು. ನಕಲಿ ಆ್ಯಪ್ ಕಳುಹಿಸಿ ಹ್ಯಾಕ್ ಮಾಡುವುದು ಒಬ್ಬನಾದರೇ, ಡೆಲಿವರಿಯನ್ನು ಸ್ವೀಕರಿಸುವವರು ಇನ್ನೊಬ್ಬರಾಗಿರುತ್ತಾರೆ.