ಪಾಕಿಸ್ಥಾನದಲ್ಲಿ 22 ಭಯೋತ್ಪಾದಕರ ಹತ್ಯೆ

ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ 6 ಸೈನಿಕರ ಸಾವು

ಇಸ್ಲಾಮಾಬಾದ್‌: ವಾಯುವ್ಯ ಪಾಕಿಸ್ಥಾನದ ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದಲ್ಲಿ ಎರಡು ದಿನಗಳ ಕಾಲ ನಡೆದ ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 22 ಭಯೋತ್ಪಾದಕರನ್ನು ಪಾಕಿಸ್ಥಾನದ ಭದ್ರತಾ ಪಡೆ ಹತ್ಯೆಗೈದಿದೆ. ಈ ಕಾರ್ಯಾಚರಣೆಯಲ್ಲಿ ಆರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ಥಾನದ ಸೇನೆಯ ಮಾಧ್ಯಮ ವಿಭಾಗ ತಿಳಿಸಿದೆ.
ಗುಪ್ತಚರ ಮಾಹಿತಿ ಆಧಾರದ ಮೇಲೆ ಖೈಬರ್ ಪುಖ್ತುನ್‌ಖ್ವಾದ ಟ್ಯಾಂಕ್, ಉತ್ತರ ವಜಿರಿಸ್ಥಾನ್ ಮತ್ತು ಥಾಲ್ ಜಿಲ್ಲೆಗಳಲ್ಲಿ ಡಿ.6 ಮತ್ತು 7ರಂದು ಈ ಕಾರ್ಯಾಚರಣೆ ನಡೆಸಲಾಗಿದೆ. ಟ್ಯಾಂಕ್ ಜಿಲ್ಲೆಯಲ್ಲಿ, ಗುಲ್ ಇಮಾಮ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ 9 ಭಯೋತ್ಪಾದಕರು ಹತ್ಯೆಗೀಡಾಗಿ 6 ಮಂದಿ ಗಾಯಗೊಂಡಿದ್ದಾರೆ. ಉತ್ತರ ವಜೀರಿಸ್ಥಾನದಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಕನಿಷ್ಠ 10 ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ ಎಂದು ವರದಿಯಾಗಿದೆ.
ಮೂರನೇ ಎನ್‌ಕೌಂಟರ್‌ ಥಾಲ್ ಜಿಲ್ಲೆಯ ಚೆಕ್‌ಪೋಸ್ಟ್ ಬಳಿ ನಡೆದಿದೆ. ಈ ವೇಳೆ ಚೆಕ್‌ಪೋಸ್ಟ್‌ ಮೇಲೆ ದಾಳಿ ಮಾಡಲು ಯತ್ನಿಸಿದ ಭಯೋತ್ಪಾದಕರ ಪ್ರಯತ್ನವನ್ನು ವಿಫಲಗೊಳಿಸಲಾಗಿದ್ದು, ಮೂವರು ಭಯೋತ್ಪಾದಕರು ಹತ್ಯೆಗೀಡಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ 6 ಸೈನಿಕರು ಸಹ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ‌ಪಾಕಿಸ್ತಾನದಲ್ಲಿ ಪ್ರತ್ಯೇಕತಾವಾದಿ ಗುಂಪುಗಳಿಂದ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗುತ್ತಿವೆ. ಇದರಿಂದ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಭದ್ರತಾ ಪಡೆಗಳು ಮುಂದಾಗಿವೆ ಎಂದು ಅಧಿಕಾರಿಗಳ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top