ಪುತ್ತೂರು: ಹಣ ಹೂಡಿಕೆಯ ಯೋಜನೆಯ ಮೂಲಕ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿ ಜೀವ ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ಕಳೆದ 5 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಓರ್ವನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದ ಸಕಾರ ನಿವಾಸಿ ಸೋಮೇಶ್ವರ (38) ಬಂಧಿತ ಆರೋಪಿ.
ಬೆಳ್ತಂಗಡಿ ತಾಲೂಕಿನ ಕಲ್ಲಗುಡ್ಡೆ ನಿವಾಸಿ ಗಣೇಶ್ ಅವರು ಕುಶಾಲನಗರದಲ್ಲಿ ಹಿಂದುಸಿನ್ ಇಸ್ಕಾನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನಲ್ಲಿ ಪ್ರತಿನಿಧಿಯಾಗಿರುವ ಸಂದರ್ಭ ಅವರು ಆರೋಪಿ ಸೋಮೇಶ್ವರ ಸಹಿತ 13 ಮಂದಿ ತಿಳಿಸಿದ ಆರ್.ಟಿ ಯೋಜನೆಯಲ್ಲಿ ಇತರ ಗ್ರಾಹರನ್ನು ಸೇರಿಸಿ ರೂ.15 ಲಕ್ಷವನ್ನು 3 ವರ್ಷಗಳಿಗೆಂದು ಪಾವತಿ ಮಾಡಿದ್ದರು. ಆದರೆ ಆರೋಪಿಗಳು ಬಳಿಕ ಬಡ್ಡಿ, ಅಸಲನ್ನು ವಾಪಸ್ ಮಾಡದೆ ವಂಚನೆ ಮಾಡಿದ್ದರು. ಈ ಕುರಿತು ಪ್ರಶ್ನಿಸಿದಾಗ ಆರೋಪಿಗಳು ಜೀವ ಬೆದರಿಕೆಯೊಡ್ಡಿದ್ದರು. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಜೀವ ಬೆದರಿಕೆ ಆರೋಪದ ಪ್ರಕರಣ ದಾಖಲಾಗಿತ್ತು.ಆರೋಪಿಗಳು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ನ್ಯಾಯಾಲಯ ಅವರ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ಇದೀಗ 11ನೇ ಆರೋಪಿ ಸೋಮೇಶ್ವರ ಎಂಬಾತನನ್ನು ಚಿತ್ರದುರ್ಗ ಜಿಲ್ಲೆಯಿಂದ ಪೊಲೀಸರು ಬಂಧಿಸಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.