ದೀಪಾವಳಿ ರಜೆ ಮುಗಿಸಿ ಕಾಲೇಜಿಗೆಂದು ಹೊರಟವ ಕಣ್ಮರೆ, ಊರೂರು ಅಲೆದು ಹುಡುಕುತ್ತಿರುವ ತಾಯಿ
ಮಡಿಕೇರಿ: ಮಂಗಳೂರಿನ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ಮಡಿಕೇರಿಯ ದೀಕ್ಷಿತ್ (17) ಎಂಬ ಯುವಕ ಕಳೆದ ಸುಮಾರು ಒಂದು ತಿಂಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ದೀಪಾವಳಿ ಹಬ್ಬದ ರಜೆಯಲ್ಲಿ ಮನೆಗೆ ಬಂದಿದ್ದ ಯುವಕ ರಜೆ ಮುಗಿಸಿ ಕಾಲೇಜಿಗೆಂದು ಹೊರಟವ ಅತ್ತ ಹಾಸ್ಟೆಲ್ ತಲುಪದೆ ಇತ್ತ ಮನೆಗೂ ಬಾರದೆ ನಾಪತ್ತೆಯಾಗಿದ್ದಾನೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಗ ಕಾಣೆಯಾಗಿ ಒಂದು ತಿಂಗಳು ಕಳೆದರೂ ಸುಳಿವು ಇಲ್ಲದೆ ಹತಾಶರಾಗಿರುವ ತಾಯಿ ಮಗನನ್ನು ಹುಡುಕಿಕೊಂಡು ಊರೂರು ಅಲೆಯುತ್ತಿದ್ದಾರೆ. ಕೊಡಗಿನ ಗೋಣಿಕೊಪ್ಪದ ಯುವಕನನ್ನು ತಾಯಿ ಮಗನಿಗೆ ಉತ್ತಮ ಶಿಕ್ಷಣ ಸಿಗಬೇಕೆಂದು ಮಂಗಳೂರಿನ ಕಾಲೇಜಿಗೆ ಸೇರಿಸಿದ್ದರು. ಹಾಸ್ಟೆಲ್‌ನಲ್ಲಿದ್ದುಕೊಂಡು ಓದುತ್ತಿದ್ದ ದೀಕ್ಷಿತ್ ನಿಗೂಢವಾಗಿ ಕಣ್ಮರೆಯಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಈ ಯುವಕ ಓದಿನಲ್ಲಿ ಮುಂದೆ ಇದ್ದ. ಆಟ ಪಾಠ ಕ್ರೀಡೆ ಸೇರಿದಂತೆ ಎಲ್ಲದರಲ್ಲೂ ಚಟುವಟಿಕೆಗಳಿಂದ ಇರುತ್ತಿದ್ದ. ದೀಪಾವಳಿ ಹಬ್ಬದ ರಜೆಯಲ್ಲಿ ಹಾಸ್ಟೆಲ್‌ನಿಂದ ಮನೆಗೆ ಬಂದು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಹಬ್ಬ ಮುಗಿಸಿಕೊಂಡು ಹೊರಟಿದ್ದ. ತಾಯಿಯೇ ಮಗನೊಂದಿಗೆ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತಿಸಿದ್ದರು. ಆದರೆ ದೀಕ್ಷಿತ್ ಹಾಸ್ಟೆಲ್ ತಲುಪದೆ ನಿಗೂಢವಾಗಿ ಕಣ್ಮರೆಯಾಗಿದ್ದಾನೆ. ನಂತರ ತಾಯಿ ಗೋಣಿಕೊಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.
ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಯುವಕನ ಶೋಧ ಕಾರ್ಯಕ್ಕೆ ಪೋಲಿಸರ 3 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಪೊಲೀಸರ ತಂಡವು ಈಗಾಗಲೇ ಮಂಗಳೂರಿನ ಕಾಲೇಜು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಹೊಟೇಲ್, ಲಾಡ್ಜ್, ಬೀಚ್ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ.