ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ ಪ್ರಯಾಣದ ವೇಳೆ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ನಿರ್ವಾಹಕ ವಿಷ್ಣು ಎಂಬವರು ಬಸ್ ಅನ್ನು ಉಪ್ಪಿನಂಗಡಿಗೆ ಚಲಾಯಿಸಿಕೊಂಡು ಬಂದು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಡಿ.6ರಂದು ತಿಳಿದು ಬಂದಿದೆ.
ಮಂಗಳೂರು ಡಿಪೋಗೆ ಸೇರಿದ ಕೆಎಸ್ಸಾರ್ಟಿಸಿ ಬಸ್ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ವೇಳೆ ಬಸ್ ಕಡಬ ತಾಲೂಕಿನ ಆತೂರಿಗೆ ಬರುತ್ತಿದ್ದಂತೆಯೇ ಬಸ್ಸಿನ ಚಾಲಕ ಗಣಪತಿಯವರ ಚಾಲನೆಯ ವೇಗವನ್ನು ನಿಧಾನ ಮಾಡತೊಡಗಿದರು.
ಇದನ್ನು ಕಂಡು ಸಂಶಯಗೊಂಡ ಬಸ್ ನಿರ್ವಾಹಕ, ಚಾಲಕನ ಹತ್ತಿರ ಬಂದು ಮಾತನಾಡಲು ಪ್ರಯತ್ನಿಸಿದಾಗ ಬಸ್ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿರುವುದು ತಿಳಿದು, ಕೆಲ ಕ್ಷಣಗಳಲ್ಲಿಯೇ ಬಸ್‌ನ ಚಾಲಕ ಮಾತನಾಡದಂತಹ ಸ್ಥಿತಿಗೆ ತಲುಪಿದರು. ತಕ್ಷಣ ಬಸ್ ನಿಲ್ಲಿಸಲು ತಿಳಿಸಿ, ಅವರನ್ನು ಬಸ್‌ನ ಸೀಟ್‌ನಲ್ಲಿ ಮಲಗಿಸಿ ಸಮೀಪದಲ್ಲಿ ಆಸ್ಪತ್ರೆ ಇರದಿರುವುದರಿಂದ ಬಸ್ ನಿರ್ವಾಹಕ ಬಸ್ಸನ್ನು ಚಲಾಯಿಸಿಕೊಂಡು ಸುಮಾರು ಏಳು ಕಿ.ಮೀ. ದೂರವಿರುವ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ತಲುಪಿಸಿದರಲ್ಲದೆ, ಹತ್ತಿರವಿರುವ ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು.
ಬಳಿಕ ಅವರನ್ನು ಆಯಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಯಿತು. ಈ ಬಸ್‌ನಲ್ಲಿ ಸುಮಾರು 30ರಷ್ಟು ಪ್ರಯಾಣಿಕರಿದ್ದರು. ನಿರ್ವಾಹಕನ ತಕ್ಷಣದ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
























