ಸಿಬಿಐ ತನಿಖೆಗೆ ಆಗ್ರಹಿಸಿ ನರೇಂದ್ರ ಮೋದಿಯವರಿಗೆ ಪತ್ರ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಉರುಳಾಗಿ ಪರಣಮಿಸಿರುವ ಮುಡಾ ಹಗರಣ ಈಗ ಪ್ರಧಾನಿ ಅಂಗಳ ತಲುಪಿದೆ. ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸದಿರುವುದು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಯಲಾದ ಬೆನ್ನಿಗೆ ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ವಕೀಲರೊಬ್ಬರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ವಕೀಲ ರವಿಕುಮಾರ್ ಎಂಬವರು ಪ್ರಧಾನ ಮಂತ್ರಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ. 296 ಪುಟಗಳ ದಾಖಲೆ ಸಮೇತ ಪತ್ರ ರವಾನಿಸಲಾಗಿದೆ. ಈಗಾಗಲೇ ಪ್ರಧಾನಿಗಳ ಕಚೇರಿಗೆ ಪತ್ರ ತಲುಪಿದೆ.
ಮುಡಾ ಮಾಜಿ ಆಯುಕ್ತರಾದ ದಿನೇಶ್ ಮತ್ತು ಡಿ.ಬಿ. ನಟೇಶ್ ಇಬ್ಬರೇ ಸರ್ಕಾರಕ್ಕೆ 100 ಕೋಟಿ ರೂ.ಗೂ ಅಧಿಕ ಆರ್ಥಿಕ ನಷ್ಟ ಮಾಡಿದ್ದಾರೆ. ಅಲ್ಲದೇ ಸೇಲ್ ಡೀಡ್ ಮತ್ತು ಸೆಟ್ಲ್‌ಮೆಂಟ್ ಡೀಡ್ ಹೆಸರಿನಲ್ಲಿ ದೊಡ್ಡ ಭ್ರಷ್ಟಾಚಾರವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ದಿನೇಶ್ ಕುಮಾರ್ ಮತ್ತು ನಟೇಶ್ ಬೇನಾಮಿ ವಹಿವಾಟು ನಡೆಸಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮುಡಾದಲ್ಲಿ 2800 ಕೋ.ರೂ.ಗೂ ಅಧಿಕ ಮೊತ್ತದ ಹಗರಣ ನಡೆದಿರುವುದು ಇ.ಡಿ.ತನಿಖೆಯಲ್ಲಿ ತಿಳಿದುಬಂದಿದೆ. 4000ಕ್ಕೂ ಅಧಿಕ ಸೈಟ್‌ಗಳನ್ನು ಅಕ್ರಮವಾಗಿ ಹಂಚಲಾಗಿದೆ ಎಂದು ಇ.ಡಿ.ವರದಿ ನೀಡಿದೆ.