ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ – ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.
ಷಷ್ಠಿ ಮಹೋತ್ಸವದ ಅಂಗವಾಗಿ ಪಂಚಮಿ ದಿನವಾದ ಶುಕ್ರವಾರ ಬೆಳಗ್ಗೆ ಭಕ್ತಾದಿಗಳಿಂದ ಮೂಲನಾಗನ ಕಟ್ಟೆಯಲ್ಲಿ ಆಶ್ಲೇಷ ಪೂಜೆ, ನಾಗತಂಬಿಲ ಸೇವೆ ನಡೆಯಿತು. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ನಡೆದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 5 ರಿಂದ ನೃತ್ಯೋಪಾಸನಾ ಕಲಾ ಕೇಂದ್ರದ ವತಿಯಿಂದ ನೃತ್ಯೋಹಂ ಪ್ರದರ್ಶನಗೊಂಡಿತು. ಸಂಜೆ 6 ರಿಂದ ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂಡಳಿಯವರಿಂದ ಕುಣಿತ ಭಜನೆ ನಡೆಯಿತು.
ಶನಿವಾರ ಷಷ್ಠಿ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಷಷ್ಠಿ ಮಹೋತ್ಸವ, ಪಲ್ಲಕ್ಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ಜರಗಿತು. ಬಳಿಕ ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಐದು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಂಡರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಸುಲೋಚನಾ ಪಿ.ಕೆ., ಉತ್ಸವ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರು, ಊರ, ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.