ಕಡಬ: ತಾಲೂಕಿನ ಕೌಕ್ರಾಡಿ ಗ್ರಾಮ ನಿವಾಸಿ ದಲಿತೆ ರಾಧಮ್ಮ ಕುಟುಂಬದ ಮೇಲೆ ಮತ್ತೆ ಮತ್ತೆ ದೌರ್ಜನ್ಯ ಎಸಗುತ್ತಿರುವ ಕಡಬ ತಹಶೀಲ್ದಾರ್ ಪ್ರಭಾಕರ ಕಜೂರೆ ಅವರ ಕಾನೂನು ದುರುಪಯೋಗದ ನಡೆಯನ್ನು ಸಹಿಸಲು ಸಾದ್ಯವಿಲ್ಲ. ಈ ನಿಟ್ಟಿನಲ್ಲಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐಎಂ ಜಿಲ್ಲಾ ಮುಖಂಡ, ನ್ಯಾಯವಾದಿ ಬಿ.ಎಂ.ಭಟ್ ಸರಕಾರವನ್ನು ಒತ್ತಾಯಿಸಿದ್ದಾರೆ.
ರೇಣುಕೆ ಎಂಬ ಬೆಳ್ತಂಗಡಿ ತಾಲೂಕು ಶಿಬಾಜೆ ನಿವಾಸಿಯ ಹೆಸರಲ್ಲಿ ಹೈಕೋರ್ಟಲ್ಲಿ ದಾವೆ ದಾಖಲಿಸಲಾಗಿದೆ ಎಂದು ರೇಣುಕೆ ಎಂಬವರ ಮನೆಯನ್ನು ದ್ವಂಸ ಮಾಡಲು ಆದೇಶವಿದೆ ಎಂದು ಸುಳ್ಳು ಹೇಳುತ್ತಾ, ಕೌಕ್ರಾಡಿ ಗ್ರಾಮದಲ್ಲಿ ರೇಣುಕೆಯವರ ಮನೆ ಸಿಗದೆ ಕೊನೆಗೆ ರಾಧಮ್ಮನ ಮನೆಯನ್ನು ಕಡಬ ತಹಶೀಲ್ದಾರ್ ದ್ವಂಸ ಮಾಡಿದ್ದಾರೆ. ಮೆಸ್ಕಾಂ ಎಇಇಯವರು ಇದು ರಾಧಮ್ಮನ ಮನೆ ಎಂದು ಮೆಸ್ಕಾಂನಲ್ಲಿ ದಾಖಲೆ ಇದೆ ಎಂದು ಹೇಳಿದ್ದರೂ ಕೇಳದ ತಹಶೀಲ್ದಾರ್ ಕೈ ತೋರಿಸಿ ಮನೆಯ ವಿದ್ಯುತ್ ಸಂಪರ್ಕ ತೆಗೆಯಿರಿ ಎಂದು ಸ್ಥಳದಲ್ಲೇ ಮೌಖಿಕ ಆದೇಶ ನೀಡಿದ್ದಾರೆ ಎಂದು ಮೆಸ್ಕಾಂ ಅದಿಕಾರಿಗಳು ತಿಳಿಸಿದ್ದಾರೆ. ಘಟನೆ ಖಂಡಿಸಿ ರಾಧಮ್ಮರ ಮನೆಯನ್ನು ಪುನಃ ನಿರ್ಮಿಸಿಕೊಡಲು ಆಗ್ರಹಿಸಿ ಕಡಬದಲ್ಲಿ ನ.20 ರಂದು ಪ್ರತಿಭಟನೆ ಮಾಡಿ ಎಸಿಯವರಿಗೆ ಮನವಿ ನೀಡಿದಾಗ ಒಂದು ವಾರದ ಒಳಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆದರೆ 2 ವಾರ ಕಳೆದರೂ ನ್ಯಾಯ ಸಿಗಲಿಲ್ಲ. ಈ ದಲಿತರ ಮೇಲೆ ದೌರ್ಜನ್ಯ ಹಾಗೂ ದಲಿತರ ಮನೆಯನ್ನುದ್ವಂಸ ಮಾಡಿದ ತಹಶೀಲ್ದಾರ್ ವಿರುದ್ದಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರೂ ಇನ್ನೂ ಎ.ಫ್.ಐ.ಆರ್ ದಾಖಲಿಸಿ ಪ್ರತಿ ನೀಡಿಲ್ಲ ಎಂದವರು ತಿಳಿಸಿದರು.
ಕೇವಲ ಜನರ ರಕ್ಷಣೆಗಾಗಿ ಇರುವ ಕಾನೂನನ್ನು ದುರುಪಯೋಗ ಮಾಡಿ ದಲಿತರ ಮೇಲೆ ದೌರ್ಜನ್ಯ ಎಸಗುವ ತಹಶೀಲ್ದಾರ್ ವಿರುದ್ದ ನ್ಯಾಯಕ್ಕಾಗಿ ದಲಿತ ಸಂಘಟನೆಗಳು ಡಿ.13 ರಂದು ಹೋರಾಟ ನಡೆಸಲು ಸಿದ್ದತೆ ನಡೆಸಿದ್ದಾರೆ. ಈ ಹೋರಾಟವನ್ನು ನಾವು ಸಮಾನ ಮನಸ್ಕ ಸಂಘಟನೆಗಳು ಬೆಂಬಲಿಸುತ್ತೇವೆ ಎಂದು ತಿಳಿಸಿದ್ದಾರೆ.