ಜಗತ್ತು ಹೆಚ್ಚು ನೆನಪಿಡುವುದು ಮೊದಲಿಗರನ್ನು ಮಾತ್ರ

ನೀವು ಕೂಡಾ ಪಯೋನೀರ್ ಆಗಬಹುದು

ಜಗತ್ತಿನಲ್ಲಿ ಯಾವುದೇ ಸಾಧನೆಯನ್ನು ಮೊದಲು ಮಾಡಿದವರನ್ನು ಪಯೋನೀರ್ ಎಂದು ಕರೆಯುತ್ತಾರೆ. ಜಗತ್ತು ಅವರನ್ನು ಮಾತ್ರ ಹೆಚ್ಚು ನೆನಪಿಟ್ಟುಕೊಳ್ಳುತ್ತದೆ.

1) ಭಾರತದ ಮೊತ್ತಮೊದಲ ಮಹಿಳಾ ವೈದ್ಯೆ ಎಂದರೆ ಅದು ಡಾಕ್ಟರ್ ಆನಂದಿಬಾಯಿ ಜೋಶಿ. ಅದರ ನಂತರ ಸಾವಿರಾರು ಮಹಿಳೆಯರು ವೈದ್ಯರಾದರು. ಜಗತ್ತು ಅವರನ್ನೆಲ್ಲ ಗಮನಿಸಿದ್ದು ಕಡಿಮೆ.































 
 

2) ಜುಲೈ 20, 1969ರಂದು ಚಂದ್ರನ ಮೇಲೆ ಮೊದಲ ಹೆಜ್ಜೆ ಇರಿಸಬೇಕಾದದ್ದು ಎಡ್ವಿನ್ ಆಲ್ಡ್ರಿನ್. ಆದರೆ ಆತ ಸ್ವಲ್ಪ ಅಳುಕಿದ ಕಾರಣ ನೀಲ್ ಆರ್ಮ್‌ಸ್ಟ್ರಾಂಗ್ ಮೊದಲು ಇಳಿಯಬೇಕಾಯಿತು. ಅರ್ಧ ಕ್ಷಣ ನಂತರ ಆಲ್ಡ್ರಿನ್ ಕೂಡ ಇಳಿದನು. ಆದರೆ ಇಂದು ನೀಲ್ ಆರ್ಮ್‌ಸ್ಟ್ರಾಂಗ್‌ನನ್ನು ಜಗತ್ತು ನೆನಪಿಟ್ಟುಕೊಂಡುಕೊಂಡಿದೆ. ಆಲ್ಡ್ರಿನ್ ಜಗತ್ತಿಗೆ ಮರೆತೇ ಹೋಗಿದ್ದಾನೆ.

3) ಮೌಂಟ್ ಎವರೆಸ್ಟ್ ಮೇಲೆ ಮೊದಲ ಹೆಜ್ಜೆ ಜೊತೆಯಾಗಿ ಇಟ್ಟವರು ಇಬ್ಬರು. ತೆನ್ಸಿಂಗ್ ನೋರ್ಕೆ ಮತ್ತು ಎಡ್ಮಂಡ್ ಹಿಲರಿ ಅವರು ಜೊತೆಯಾಗಿ ಆ ಸಾಧನೆ ಮಾಡಿದ ಕಾರಣ ಇಬ್ಬರೂ ನಮ್ಮ ನೆನಪಲ್ಲಿ ಇದ್ದಾರೆ.

4) ಒಲಿಂಪಿಕ್ಸ್ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಹತ್ತಕ್ಕೆ ಹತ್ತು ಪೂರ್ಣ ಅಂಕಗಳನ್ನು ಮೊದಲು ಪಡೆದ ಹುಡುಗಿ ಅಂದರೆ ಅದು ನಾಡಿಯಾ ಕೊಮೇನೆಸಿ(1976). ಆಗ ಆಕೆಗೆ 14 ವರ್ಷ. ಆನಂತರ ತುಂಬಾ ಜನರು ಈ ಸಾಧನೆಯನ್ನು ರಿಪೀಟ್ ಮಾಡಿದರು. ಅವರ್ಯಾರನ್ನೂ ಒಲಿಂಪಿಕ್ಸ್ ಇತಿಹಾಸ ನೆನಪಲ್ಲಿ ಇಟ್ಟುಕೊಂಡಿಲ್ಲ.

4) ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಬಾರಿ 625/625 ಅಂಕಗಳನ್ನು ಪಡೆದ ಹುಡುಗ ಅಂದರೆ ಅದು ರಂಜನ್. ಅವನು ಭದ್ರಾವತಿಯವನು. ಮುಂದಿನ ವರ್ಷಗಳಲ್ಲಿ ನೂರಾರು ವಿದ್ಯಾರ್ಥಿಗಳು ಆ ಸಾಧನೆ ಮಾಡಿದರು. ಆದರೆ ರಂಜನ್ ಹೆಸರು ಎಸ್ಸೆಸ್ಸೆಲ್ಸಿ ಪರೀಕ್ಷೆ ಇರುವತನಕ ಶಾಶ್ವತ.

5) ಮಹಿಳಾ ಕಬ್ಬಡ್ಡಿ ವಿಶ್ವಕಪ್ ಆರಂಭವಾದಾಗ ಮೊದಲ ಟ್ರೋಫಿ ಗೆದ್ದದ್ದು ಭಾರತ (2004). T20 ವಿಶ್ವಕಪ್ ಆರಂಭ ಆದಾಗಲೂ ಮೊದಲು ಟ್ರೋಫಿಯನ್ನು ಎತ್ತಿದ್ದು ಭಾರತ. ಅಷ್ಟರಮಟ್ಟಿಗೆ ಅದು ಇತಿಹಾಸ. ನಂತರ ಗೆದ್ದವರು ಕೂಡ ಸಾಧಕರು ಹೌದು. ಆದರೆ ಮೊದಲು ಗೆದ್ದವರು ಮಾತ್ರ ಇತಿಹಾಸದಲ್ಲಿ ನೆನಪಲ್ಲಿ ಉಳಿಯುತ್ತಾರೆ.

6) ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯರು ಅಂದರೆ ಖ್ಯಾತ ವಸ್ತ್ರ ವಿನ್ಯಾಸಕಿಯಾದ ಭಾನೂ ಅಥೈಯ್ಯ. ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗ ಕುವೆಂಪು. ಮೊದಲ ಭಾರತರತ್ನ ಪ್ರಶಸ್ತಿಯನ್ನು ಕರ್ನಾಟಕ ಪಡೆದದ್ದು ವಿಶ್ವೇಶ್ವರಯ್ಯನವರ ಮೂಲಕ. ಅದರಿಂದಾಗಿ ಅವರೆಲ್ಲರೂ ಪಯೋನೀರ್ ಆದರು. ಲೆಜೆಂಡ್ ಆದರು.

7) ಟೆಸ್ಟ್ ಕ್ರಿಕೆಟ್ ಇನ್ನಿಂಗ್ಸ್ ಒಂದರಲ್ಲಿ ಹತ್ತಕ್ಕೆ ಹತ್ತು ವಿಕೆಟ್ ಮೊದಲು ಪಡೆದವನು ಇಂಗ್ಲೆಂಡ್ ಬೌಲರ್ ಜಿಮ್ ಲೇಕರ್ (1956). ಮುಂದೆ ನಮ್ಮ ಅನಿಲ್ ಕುಂಬ್ಳೆ (1999) ಮತ್ತು ಎಜಾಜ್ ಪಟೇಲ್ (2021) ಈ ಸಾಧನೆಯನ್ನು ಲೆವೆಲ್ ಮಾಡಿದರು (ಮುರಿಯುವುದು ಸಾಧ್ಯ ಇಲ್ಲ ಅಲ್ವಾ?). ಅನಿಲ್ ಕುಂಬ್ಳೆ ಭಾರತೀಯ ಅನ್ನುವ ಕಾರಣಕ್ಕೆ ನಮಗೆ ಅದು ಸ್ಪೆಷಲ್ ಅನ್ನಿಸಬಹುದು. ಆದರೆ ಜಿಮ್ ಲೇಕರ್ ಸಾಧನೆಯೇ ಎಲ್ಲರಿಗಿಂತ ಪ್ರಖರ ಎಂದು ನನ್ನ ಭಾವನೆ. ಏಕೆಂದರೆ ಇಂತಹದ್ದು ಸಾಧ್ಯ ಎಂದು ಜಗತ್ತು ನಂಬಿದ್ದು ಜಿಮ್ ಲೇಕರ್ ಅಚೀವ್ ಮಾಡಿದ ನಂತರ.

8) ಏಕದಿನದ ಪಂದ್ಯಗಳಲ್ಲಿ ಮೊದಲ ದ್ವಿಶತಕವನ್ನು ಹೊಡೆದ ಕೀರ್ತಿ ದೊರೆತದ್ದು ನಮ್ಮ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ. ಮುಂದೆ ಹತ್ತಾರು ಜನರು ಈ ಸಾಧನೆಯನ್ನು ರಿಪೀಟ್ ಮಾಡಿದರು. ರೋಹಿತ್ ಶರ್ಮ ಮೂರು ಬಾರಿ ಈ ಸಾಧನೆ ಮಾಡಿದರು. ಆದರೆ ಸಚಿನ್ ದ್ವಿಶತಕ ಅದು ಜಗತ್ತಿಗೇ ಸ್ಪೆಷಲ್. ಏಕೆಂದರೆ ಅದು ಜಗತ್ತಿನ ಮೊದಲ ಏಕದಿನ ದ್ವಿಶತಕ. ಏಕದಿನದ ಒಂದು ಪಂದ್ಯದಲ್ಲಿ ದ್ವಿಶತಕವನ್ನು ಹೊಡೆಯಲು ಸಾಧ್ಯ ಎಂದು ಮೊದಲು ತೋರಿಸಿಕೊಟ್ಟದ್ದು ಸಚಿನ್ ಅಲ್ವಾ?

9) ಜಗತ್ತಿನ ಮೊದಲ ಬಲ್ಬ್ ಸಂಶೋಧನೆ ಮಾಡಿದ್ದು ಎಡಿಸನ್. ನಂತರ ನೂರಾರು ವಿಜ್ಞಾನಿಗಳು ಆ ಬಲ್ಬನ್ನು ಇಂಪ್ರೂವ್ ಮಾಡಿದರು. ಹೊಸ ಫಿಲಮೆಂಟ್, ಹೊಸ ವಿನ್ಯಾಸ ಪರಿಚಯ ಮಾಡಿದರು. ಫಿಲಮೆಂಟ್ ಇಲ್ಲದ ಬಲ್ಬುಗಳು ಕೂಡ ಆವಿಷ್ಕಾರ ಆದವು. ಆದರೆ ಎಲೆಕ್ಟ್ರಿಕ್ ಬಲ್ಬ್ ಸಂಶೋಧನೆಯ ಶ್ರೇಯಸ್ಸು ಎಡಿಸನ್ ಮತ್ತು ಎಡಿಸನ್ ಅವರಿಗೆ ಮಾತ್ರ ಸಲ್ಲುತ್ತದೆ.

10) ಹಾಗೆಯೇ ಜಗತ್ತಿನ ಮೊದಲ ಎಣಿಕೆಯ ಯಂತ್ರ ಸಂಶೋಧನೆ ಮಾಡಿದ್ದು ಚಾರ್ಲ್ಸ್ ಬ್ಯಾಬೇಜ್. ಮುಂದೆ ಹಲವಾರು ವಿಜ್ಞಾನಿಗಳು ಆಧುನಿಕ ಕಂಪ್ಯೂಟರ್ ಕಂಡುಹಿಡಿದರು. ಸೂಪರ್ ಸಾನಿಕ್ ಕಂಪ್ಯೂಟರ್‌ಗಳು ಬಂದವು. ಕೃತಕ ಬುದ್ಧಿಮತ್ತೆಯ ಕಾರಣಕ್ಕೆ ಮನುಷ್ಯನ ಮೆದುಳಿನ ವೇಗಕ್ಕೆ ಸರಿಯಾಗಿ ಕೆಲಸ ಮಾಡುವ ಕಂಪ್ಯೂಟರ್‌ಗಳು ಬರಲಿವೆ. ಮನುಷ್ಯನ ಹಾಗೆ ಭಾವನೆಗಳನ್ನು ಹೊಂದಿರುವ ಕಂಪ್ಯೂಟರ್‌ಗಳು ಬರಲಿವೆ. ಆದರೆ ಚಾರ್ಲ್ಸ್ ಬ್ಯಾಬೇಜ್ ಆ ಕ್ಷೇತ್ರದ ಪಯೊನೀರ್ ಎಂದು ಖಚಿತವಾಗಿ ಹೇಳಬಹುದು.

ಭರತವಾಕ್ಯ

ಹೀಗೆ ಜಗತ್ತಿನ ಸಾವಿರಾರು ಮೊದಲಿಗರ ಪಟ್ಟಿಯನ್ನು ಮಾಡಬಹುದು. ಹಾಗೆಯೇ ಅವರ ಸಾಧನಾ ಕ್ಷೇತ್ರಗಳು ವಿಸ್ತಾರ ಆಗಿರುವುದನ್ನು ಕೂಡ ಗಮನಿಸಿ. ಯಾವುದೇ ಸಾಧನೆಯನ್ನು ಇಂಪ್ರೂವ್ ಮಾಡಲು ಕೂಡ ಅವಕಾಶ ಇರುತ್ತದೆ. ಮಾನವನ ಕ್ರಿಯಾಶಾಲಿ ಮೆದುಳು ಹೊಸ ಹೊಸ ಸಾಧನಾ ಕ್ಷೇತ್ರಗಳನ್ನು ಹುಡುಕಿಕೊಂಡು ಮುಂದೆ ಹೋಗುತ್ತಿದೆ ಅನ್ನಬಹುದು. ಹಾಗೆಯೇ ಮೊದಲಿಗರನ್ನು ಕೂಡ ಸೃಷ್ಟಿ ಮಾಡುತ್ತ ಜಗತ್ತು ಮುಂದೆ ಹೋಗುತ್ತದೆ.

ಇದುವರೆಗೂ ಪಯೋನೀರ್ ಇಲ್ಲದೆ ಇರುವ ಸಾವಿರಾರು ಸಾಧನಾ ಕ್ಷೇತ್ರಗಳು ಇನ್ನೂ ಬಾಕಿ ಇವೆ. ಅಂತಹ ಕ್ಷೇತ್ರಗಳನ್ನು ಆರಿಸಿ ಅದರಲ್ಲಿ ಸಾಧನೆ ಮಾಡಿದರೆ ನಾವು ನಮ್ಮ ಬದುಕಿನ ನಂತರವೂ ನೆನಪಲ್ಲಿ ಉಳಿಯುತ್ತೇವೆ. ಏನಂತೀರಿ?

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top