ಪುತ್ತೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಹಾಸನ ವತಿಯಿಂದ ಕಾಲೇಜಿನ ಹಿರಿಯ ಸಾಧಕ ವಿದ್ಯಾರ್ಥಿಗಳಿಗೆ ನೀಡುವ ‘ಅಶ್ವಿನಿ’ ಪ್ರಶಸ್ತಿಯನ್ನು ಮಂಗಳೂರಿನ ವೇದಂ ಆರೋಗ್ಯ ಆಯುರ್ವೇದ ಆಸ್ಪತೆಯ ಮುಖ್ಯ ವೈದ್ಯಾಧಿಕಾರಿ ಹಾಗೂ ಆಡಳಿತ ನಿರ್ದೇಶಕ ಡಾ.ಸಚಿನ್ ನಡ್ಕ ಅವರಿಗೆ ನೀಡಿ ಗೌರವಿಸಲಾಯಿತು.
ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಸಭಾಂಗಣದಲ್ಲಿ ನಡೆದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ‘ಸಮನ್ವಯ’ದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ವೇದಿಕೆಯಲ್ಲಿ ಕೋಟಕ್ಕಲ್ ಆರ್ಯವೈದ್ಯ ಶಾಲಾದ ಆಡಳಿತ ಟ್ರಸ್ಟಿ ಡಾ.ಪಿ.ಮಾಧವನ್ ಕುಟ್ಟಿ ವಾರಿಯರ್, ಎಸ್‌ಡಿಎಂ ಎಜುಕೇಶನಲ್ ಸೊಸೈಟಿ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ನಿರ್ದೇಶಕ ಪ್ರೊ.ಪ್ರಸನ್ನ ನರಸಿಂಹ ರಾವ್, ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಶೈಲಜಾ ಉಪ್ಪಿನಕುದ್ರು ಉಪಸ್ಥಿತರಿದ್ದರು.
ಡಾ.ಸಚಿನ್ ನಡ್ಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, 2011ರಿಂದ ಆಯುರ್ವೇದ ತಜ್ಞವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನ ವೆಲೆನ್ಸಿಯಾ ಮತ್ತು ಕದ್ರಿಯಲ್ಲಿ ವೇದಂ ಆರೋಗ್ಯ’ ಆಯುರ್ವೇದ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ. ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ನಡ್ಕ ಹಾಗೂ ನಿವೃತ್ತ ಮುಖ್ಯ ಶಿಕ್ಷಕಿ ಕಮಲಾ ದಂಪತಿಯ ಪುತ್ರರಾಗಿರುವ ಡಾ.ಸಚಿನ್ ನಡ್ಕ ಅವರು ಪತ್ನಿ ಡಾ.ಅನುಷಾ ಮತ್ತು ಮಕ್ಕಳಾದ ಅವಿಕಾ ಮತ್ತು ಅವ್ಯಾನ್ ಜೊತೆಗೆ ಪ್ರಸ್ತುತ ಮಂಗಳೂರಿನ ಕದ್ರಿಯಲ್ಲಿ ನೆಲೆಸಿದ್ದಾರೆ.