ಮಕ್ಕಳನ್ನು ಅಡಿಕ್ಷನ್ ಮಟ್ಟದಿಂದ ಹೊರತರುವುದು ಹೇಗೆ?
ಆನ್ಲೈನ್ ಕ್ಲಾಸ್ ನೆಪದಲ್ಲಿ ಮಕ್ಕಳ ಕೈಗೆ ಮೊಬೈಲ್ ಎಂಬ ಮಾಯಾಂಗನೆ ಬಂದಾಗಿದೆ. ನಮ್ಮ ಮಕ್ಕಳನ್ನು ಈ ಮಾಯಾಜಾಲದಿಂದ ಸದ್ಯಕ್ಕೆ ಹೊರತರುವುದು ಕಷ್ಟ ಎಂಬ ಪರಿಸ್ಥಿತಿ ಎದುರಾಗಿದೆ. ನನ್ನ ಅನುಭವಕ್ಕೆ ಸಾವಿರಾರು ಇಂತಹ ಘಟನೆಗಳು ಬಂದಿವೆ. ಅವುಗಳಲ್ಲಿ ಒಂದೆರಡನ್ನು ಮಾತ್ರ ಇಲ್ಲಿ ಉಲ್ಲೇಖ ಮಾಡುತ್ತೇನೆ.
ಘಟನೆ 1– ಒಂದು ಮಧ್ಯಾಹ್ನದ ಹೊತ್ತಿಗೆ ನನಗೆ ನನ್ನ ಶಾಲೆಯ ಪೋಷಕರಿಂದ ಒಂದು ಕಾಲ್ ಬಂತು. ಆ ಅಮ್ಮ ತುಂಬಾ ಆತಂಕದಿಂದ ಮಾತಾಡುತ್ತಿದ್ದರು.
ಸರ್, ನನ್ನ ಮಗಳು ನಿಮ್ಮ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳಿಗೆ ಮ್ಯೂಸಿಕ್ ಕೇಳಲು ಎಂಟು ಸಾವಿರ ರೂಪಾಯಿ ಬೆಲೆಯ ಮೊಬೈಲ್ ಬೇಕಂತೆ. ನನ್ನ ಗಂಡ ನನ್ನನ್ನು ಬಿಟ್ಟು ಹೋಗಿದ್ದಾರೆ. ನಾನು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದೇನೆ. ಎಂಟು ಸಾವಿರ ನನ್ನ ಎರಡು ತಿಂಗಳ ಆದಾಯ. ಅವಳು ಬಾವಿಕಟ್ಟೆಯ ಮೇಲೆ ಕೂತು ನನ್ನನ್ನು ಹೆದರಿಸುತ್ತಿದ್ದಾಳೆ. ದುಡ್ಡು ಕೊಡದಿದ್ದರೆ ಬಾವಿಗೆ ಹಾರ್ತಾಳೆ ಅಂತೆ. ನೀವೇ ಬುದ್ದಿ ಹೇಳಬೇಕು ಅವಳಿಗೆ.
ನಾನು, ಅವಳಿಗೆ ಮೊಬೈಲ್ ಕೊಡಿ. ನನಗೆ ಮಾತಾಡಲು ಇದೆ ಎಂದೆ. ಆ ಕಡೆಯಿಂದ ನನಗೆ ಆ ಹುಡುಗಿಯ ಧ್ವನಿ ಕೇಳಿಸಿತು. ನಾನು ಹೇಳಿದೆ.
ಮಗಳೆ, ನಾನು ನಿನಗೆ ಮೊಬೈಲ್ ಕೊಡಿಸಬಾರದು ಎಂದು ನಿನ್ನ ಅಮ್ಮನಿಗೆ ಹೇಳಿದ್ದೇನೆ. ಬಾವಿಗೆ ಹಾರುತ್ತಿ ಎಂದಾದರೆ ಹಾರು. ಏನೂ ಬೇಜಾರು ಇಲ್ಲ ಎಂದೆ. ಆ ಕಡೆಯಿಂದ ಗಾಢವಾದ ಮೌನ. ಅವಳು ಕಣ್ಣೀರು ಒರೆಸುತ್ತಾ ಮನೆಗೆ ಬಂದಳು ಮತ್ತು ಮೊಬೈಲ್ ಬೇಕೂ ಎಂದು ಆಮೇಲೆ ಹಠ ಮಾಡಿಲ್ಲ ಎಂದವಳ ಅಮ್ಮ ನನಗೆ ಮುಂದೆ ಪೋಷಕರ ಸಭೆಗೆ ಬಂದಾಗ ಹೇಳಿದರು.
(ಈ ಪ್ರಯೋಗ ಬೇರೆ ಯಾರೂ ಮಾಡಲು ಹೋಗಬೇಡಿ. ನನಗೆ ಆ ಹುಡುಗಿಯ ಮನಸ್ಥಿತಿ ಚೆನ್ನಾಗಿ ಗೊತ್ತಿದ್ದ ಕಾರಣ ನಾನು ಅಲ್ಲಿ ಗೆದ್ದೆ)

ಘಟನೆ 2- ಒಂದು ಬೆಳಗ್ಗೆ ಒಬ್ಬ ತಾಯಿ ತನ್ನ 18 ವರ್ಷದ ಮಗಳನ್ನು ಕರೆದುಕೊಂಡು ನನ್ನ ಬಳಿಗೆ ಬಂದಿದ್ದರು. ಅವರದ್ದು ಕೂಡ ಹೆಚ್ಚು ಕಡಿಮೆ ಅದೇ ಹಿನ್ನೆಲೆಯ ಕುಟುಂಬ. ಅಮ್ಮ ಹೇಳುತ್ತಾ ಹೋದರು.
ಸರ್, ನನಗೆ ಒಬ್ಬಳೇ ಮಗಳು. ಗಂಡ ನನ್ನ ಜೊತೆ ಇಲ್ಲ. ಹಠ ಮಾಡಿ ಅವಳು ಮೊಬೈಲ್ ತೆಗೆದುಕೊಂಡಿದ್ದಾಳೆ. ರಾತ್ರಿ ನನ್ನ ಪಕ್ಕದಲ್ಲಿ ಕಂಬಳಿ ಹೊದ್ದು ಮಲಗುತ್ತಾಳೆ. ನಾನು ಅವಳು ನೆಮ್ಮದಿಯಿಂದ ಮಲಗಿದ್ದಾಳೆ ಎಂದು ಭಾವಿಸಿದ್ದೆ. ಮೊನ್ನೆ ಬೆಳಗ್ಗೆ ಅವಳ ಮೊಬೈಲ್ ಚೆಕ್ ಮಾಡಿದಾಗ ನನಗೆ ಶಾಕ್ ಕಾದಿತ್ತು. ನನ್ನ ಪ್ರೀತಿಯ ಮಗಳು ನನ್ನ ಪಕ್ಕದಲ್ಲಿ ಕಂಬಳಿ ಹೊದ್ದು ಮಲಗಿ ಅದರ ಒಳಗಿನಿಂದ ತನ್ನ ಪ್ರೀತಿಯ ಹುಡುಗನಿಗೆ ಇಡೀ ರಾತ್ರಿ ನೂರಕ್ಕಿಂತ ಹೆಚ್ಚು ಅಶ್ಲೀಲ ಮೆಸೇಜ್ ಸೆಂಡ್ ಮಾಡಿದ್ದಾಳೆ. ಅಷ್ಟಕ್ಕೂ ಆ ದರಿದ್ರ ಹುಡುಗ ಅಷ್ಟೇ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೆ. ನನ್ನ ಮಗಳು ಹೀಗೆ ಮಾಡ್ತಾಳೆ ಎಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ. ನೀವೇ ಬುದ್ಧಿ ಹೇಳಬೇಕು ಎಂದು ಅಳಲು ಆರಂಭ ಮಾಡಿದರು.
ಹುಡುಗಿಯ ಮುಖದಲ್ಲಿ ಒಂದು ಸಣ್ಣ ಗಿಲ್ಟ್ ಕೂಡ ಇರಲಿಲ್ಲ. ಅವಳನ್ನು ಮಾತಾಡಿಸಿದಾಗ ಅವಳು ಹೇಳಿದ ಎರಡು ಮಾತು ನನ್ನನ್ನು ಬೆಚ್ಚಿ ಬೀಳಿಸಿತು.
ನನ್ನ ಅಮ್ಮನಿಗೆ ಬುದ್ದಿ ಇಲ್ಲ ಸರ್. ಅವಳು ಹಳೆಯ ಕಾಲದವರು. ನಮ್ಮ ಕಾಲೇಜಿನಲ್ಲಿ ಇದೆಲ್ಲ ಕಾಮನ್. ನಾನೇನು ಓಡಿ ಹೋಗುವುದಿಲ್ಲ ಎಂದು ಅಮ್ಮನಿಗೆ ಹೇಳಿ.
ಆಕೆಯನ್ನು ಮುಂದೆ ಕೂರಿಸಿ ಅಮ್ಮನ ಅಸಹಾಯಕ ಸ್ಥಿತಿ ಮತ್ತು ಆತಂಕಗಳನ್ನು ಅವಳಿಗೆ ಅರ್ಥ ಮಾಡಿಸಿ ಕಳುಹಿಸಿದೆ. ಎಷ್ಟು ಅವಳಿಗೆ ಅರ್ಥ ಆಯಿತೋ ನನಗೆ ಗೊತ್ತಾಗಲೇ ಇಲ್ಲ.

ಇದೀಗ ಸಣ್ಣ ಮಕ್ಕಳ ಕೈಗೆ ಮೊಬೈಲ್ ಬಂದೇ ಬಿಟ್ಟಿತು
ಒಂದು ಐದು ವರ್ಷಗಳ ಹಿಂದೆ ಹದಿಹರೆಯದ ಮಕ್ಕಳಲ್ಲಿ ಮೊಬೈಲ್ ಅಡಿಕ್ಷನ್ ಬಗ್ಗೆ ನಾನು ಪೋಷಕರ ಸಭೆಯಲ್ಲಿ ಮಾತಾಡುತ್ತಿದ್ದೆ. ಆದರೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಣ್ಣ ಮಕ್ಕಳ ಕೈಗೆ ಮೊಬೈಲ್ ಬಂದಾಗಿದೆ.
ಕೊರೋನ ಸಂದರ್ಭದಲ್ಲಿ ಶಾಲೆಗಳು ಜಾರಿಗೆ ತಂದ ವಿದ್ಯಾಗಮ ಮತ್ತು ಆನ್‌ಲೈನ್ ಕ್ಲಾಸಗಳ ಪರಿಣಾಮವಾಗಿ ಹೆತ್ತವರೇ ಮಕ್ಕಳಿಗೆ ಮೊಬೈಲ್ ಫೋನನ್ನು ಕೊಡಿಸಿದ್ದಾರೆ. ನಮ್ಮ ಮಕ್ಕಳಿಗೆ ಆಗ ಸಾಕಷ್ಟು ಬಿಡುವಿನ ಹೊತ್ತು ಇತ್ತು. ಕೊರೋನ ಸಂದರ್ಭ ಮನೆಯ ಒಳಗೆ ಬಂಧಿಯಾದ ಮಕ್ಕಳಿಗೆ ಮೊಬೈಲ್ ಫೋನ್ ಮನರಂಜನೆಯ ತಾಣ ಆಯಿತು. ಮಕ್ಕಳು ನಿಧಾನವಾಗಿ ಆ ಮೊಬೈಲ್ ಎಂಬ ಮಾಯಾಯಂತ್ರಕ್ಕೆ ಅಡಿಕ್ಟ್ ಆದರು.

ಮೊಬೈಲ್ ಎನ್ನುವುದು ಸ್ವೇಚ್ಛೆಯ ಸಂಕೇತ
ಸ್ಥಿರ ದೂರವಾಣಿ ಇದ್ದಾಗ ಈ ಸಮಸ್ಯೆ ಬಂದಿರಲಿಲ್ಲ. ಮೊಬೈಲ್ ಅಂದರೆ ಹುಚ್ಚು ಸ್ವಾತಂತ್ರ್ಯದ ಪ್ರತೀಕ ಎಂದು ನಾನು ಎರಡು ದಶಕಗಳ ಹಿಂದೆ ಹೇಳಿದ್ದೆ. ಸ್ವೇಚ್ಚೆಯನ್ನು ಬಯಸುವ ಮಕ್ಕಳ ಕೈಗೆ ಮೊಬೈಲ್ ಬಂತು ಅಂತಾದರೆ ಮಕ್ಕಳು ನಮ್ಮ ನಿಯಂತ್ರಣಕ್ಕೆ ಸಿಗುವುದು ಹೇಗೆ?
ಮೊಬೈಲ್ ಅತಿಬಳಕೆಯ ಅಡ್ಡ ಪರಿಣಾಮಗಳು
1) ಮಕ್ಕಳು ಅಶ್ಲೀಲ ಸೈಟ್ ಹಾಗೂ ಪೋರ್ನ್ ಸೈಟ್‌ಗಳನ್ನು ಸುಲಭವಾಗಿ ತಲುಪುತ್ತಿದ್ದಾರೆ. ಇವುಗಳು ಮಕ್ಕಳಲ್ಲಿ ಅಡಿಕ್ಷನ್ ಹುಟ್ಟಿಸುತ್ತಿವೆ.
2) ಹೆಚ್ಚು ಹಿಂಸೆ ಇರುವ ಮತ್ತು ಡಾರ್ಕ್ ಪುಟಗಳು ಇರುವ ವೆಬ್ ಸೀರೀಸ್ ಮಕ್ಕಳಿಗೆ ಸುಲಭವಾಗಿ ಆಕ್ಸೆಸ್ ಆಗುತ್ತಾ ಇದೆ.
3) ಗೆಳೆತನದ ಹೆಸರಿನಲ್ಲಿ ಆರಂಭವಾದ ಹುಡುಗ ಮತ್ತು ಹುಡುಗಿಯರ ಸಲ್ಲಾಪಗಳು ಮುಂದೆ ಅಶ್ಲೀಲ ಸಂಭಾಷಣೆ, ಅಶ್ಲೀಲ ಫೋಟೊಗಳ ರವಾನೆ, ಅಶ್ಲೀಲ ವೀಡಿಯೊಗಳ ವಿನಿಮಯ ಇತ್ಯಾದಿಗಳು ನಿರ್ಭೀತಿಯಿದ ನಡೆಯುತ್ತಿವೆ. ಇದ್ಯಾವುದೂ ಪೋಷಕರ ಗಮನಕ್ಕೆ ಬರುವುದಿಲ್ಲ. ಮಕ್ಕಳು ವಿನಿಮಯ ಮಾಡಿಕೊಂಡ ಅಶ್ಲೀಲ ಫೋಟೊ ಮತ್ತು ಸಂಭಾಷಣೆಗಳು ಮುಂದೆ ಯಾರದೋ ದುರುದೇಶದಿಂದ ವೈರಲ್ ಆಗಿ ಹಲವಾರು ಹದಿಹರೆಯದ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿವೆ. ನಡೆಯುತ್ತ ಇವೆ.
4) ತಡರಾತ್ರಿಯ ಹೊತ್ತು ನಡೆಯುವ ಚಾಟ್‌ಗಳು ಮಕ್ಕಳ ನಿದ್ದೆ ಕಸಿಯುತ್ತಿವೆ. ಇದರಿಂದ ಖಿನ್ನತೆ ಮೊದಲಾದ ನೂರಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ.
5) ಮಕ್ಕಳೇ ಮಾಡಿಕೊಂಡ ವಾಟ್ಸಪ್ ಗುಂಪುಗಳ ಚಾಟ್‌ಗಳು ಮಕ್ಕಳ ಖಾಸಗಿತನವನ್ನು ಖಾಲಿ ಮಾಡುತ್ತಿವೆ. ಮಕ್ಕಳು ಮುಗ್ಧತೆಯನ್ನು ಕಳೆದುಕೊಂಡಾಗಿದೆ.
6) ಫೇಸ್‌ಬುಕ್ಕಲ್ಲಿ ಯಾರ್ಯಾರ ಗೆಳೆತನ ಮಾಡಿಕೊಂಡು ನಂತರ ನಂಬರ್ ವಿನಿಮಯ ಮಾಡಿಕೊಂಡ ಮಕ್ಕಳು ಮುಂದೆ ಮನೆಬಿಟ್ಟು ಅವರನ್ನು ಹುಡುಕಿಕೊಂಡು ಹೋದ ಪ್ರಸಂಗಗಳು ನೂರಾರು ನಡೆದಿವೆ.
7) ಮಕ್ಕಳ ಏಕಾಗ್ರತೆ ಖಾಲಿ ಆಗ್ತಾ ಇದೆ. ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.
8) ಮಕ್ಕಳು ಹಿಂಸೆಯನ್ನು ಪ್ರಚೋದನೆ ಮಾಡುವ ನೂರಾರು ವೀಡಿಯೊ ಗೇಮ್‌ಗಳಿಗೆ ಅಡಿಕ್ಟ್ ಆಗ್ತಾ ಇದ್ದಾರೆ. ಇದರಿಂದಾಗಿ ಆತ್ಮಹತ್ಯೆಗೆ ಶರಣಾಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.
9) ಮಕ್ಕಳಲ್ಲಿ ಅಪರಾಧಿ ಪ್ರವೃತ್ತಿ ಹೆಚ್ಚುತ್ತಿದೆ. ಕ್ರೈಮ್‌ಗಳಲ್ಲಿ ಇಂದು ಸಣ್ಣ ಪ್ರಾಯದ ಮಕ್ಕಳು ಯಾವ ಅಂಕುಶ ಇಲ್ಲದೆ ಭಾಗವಹಿಸುತ್ತಿದ್ದಾರೆ.
10) ಮಕ್ಕಳಲ್ಲಿ ನೈತಿಕ ಮೌಲ್ಯಗಳ ಕುಸಿತ ಉಂಟಾಗುತ್ತಿದೆ. ಕೌಟುಂಬಿಕ ವ್ಯವಸ್ಥೆ ನಾಶ ಆಗ್ತಾ ಇದೆ. ಮಕ್ಕಳು ಕುಟುಂಬದ ಜೊತೆಗೆ ಕಳೆಯುವ ಹೊತ್ತು ಕಡಿಮೆ ಆಗ್ತಾ ಇದೆ.

ಹೆತ್ತವರು ಜಾಗೃತರಾಗಬೇಕು ಅಷ್ಟೇ
ಬೇರೆ ದಾರಿ ಯಾವುದೂ ಕಾಣಿಸುತ್ತಿಲ್ಲ. ಹೆತ್ತವರ ಮತ್ತು ಶಿಕ್ಷಕರ ಜಾಗೃತಿ ಒಂದೇ ಸದ್ಯದ ಪರಿಹಾರ.
1) ಹೆತ್ತವರು ಮಕ್ಕಳಿಗೆ ಮೊಬೈಲ್ ಕೊಡಿಸುವ ಮುನ್ನ ನೂರು ಬಾರಿ ಯೋಚನೆ ಮಾಡಬೇಕು. ಭದ್ರತೆಯ ದೃಷ್ಟಿಯಿಂದ ಮೊಬೈಲ್ ಕೊಡಿಸಲೇ ಬೇಕು ಅಂತಾದರೆ ಬಟನ್ ಫೋನ್ ಕೊಡಿಸಿ. ಆಂಡ್ರಾಯ್ಡ್ ಅಥವಾ ಸ್ಮಾರ್ಟ್ಫೋನ್ ಬೇಡವೇ ಬೇಡ.
2) ಈಗಲೇ ಮೊಬೈಲ್ ಫೋನ್ ತೆಗೆಸಿಕೊಟ್ಟಿದ್ದರೆ ಅದರ ಬಳಕೆ ಕಡಿಮೆ ಮಾಡಲು ಸೂಚನೆ ನೀಡಿ. ಆನ್ಲೈನ್ ಕ್ಲಾಸ್ ಮಕ್ಕಳು ವಾಚ್ ಮಾಡುವಾಗ ಹೆತ್ತವರು ಅವರ ಜೊತೆ ಕಡ್ಡಾಯವಾಗಿ ಕೂತಿರಲೆಬೇಕು. ಕೋರೊನ ನಂತರ ಈಗ ತರಗತಿಗಳು ಲೈವ್ ಆಗಿ ನಡೆಯುತ್ತಿರುವ ಕಾರಣ ಶಿಕ್ಷಕರು ಕೂಡ ಆನಲೈನ್ ತರಗತಿಯನ್ನು ನಿಲ್ಲಿಸುವುದು ಒಳ್ಳೆಯದು.
3) ಹೆತ್ತವರು ತಮ್ಮ ಸಣ್ಣ ಮಕ್ಕಳ ಮೊಬೈಲ್ ಫೋನಗಳನ್ನು ದಿನಕ್ಕೊಮ್ಮೆ ಚೆಕ್ ಮಾಡುವುದರಲ್ಲಿ ಯಾವುದೇ ತಪ್ಪು ಇಲ್ಲ. ಅಗತ್ಯವಾಗಿ ಮಾಡಿ.
4) ಮಕ್ಕಳು ಹೆಚ್ಚು ಹೊತ್ತು ಕುಟುಂಬದ ಜೊತೆ ಕಳೆಯುವ ಹಾಗೆ ಮಾಡಿ. ಮಕ್ಕಳನ್ನು ಹೆಚ್ಚು ಹೊತ್ತು ಏಕಾಂತದಲ್ಲಿ ಇಡುವುದು ಸರಿಯಲ್ಲ.
5) ಮಕ್ಕಳು ರಾತ್ರಿ ಹತ್ತು ಗಂಟೆಯ ನಂತರ ಆನ್‌ಲೈನ್ ಇರಬಾರದು ಎಂದು ನೇರ ಸೂಚನೆ ನೀಡಿ.
6) ಮಕ್ಕಳು ಮನೆಯಲ್ಲಿ ಹೆತ್ತವರ ಮತ್ತು ಇತರರ ಜೊತೆಗೆ ಮುಕ್ತವಾಗಿ ಮಾತಾಡುವ ಹೊತ್ತನ್ನು ಖಾತರಿ ಪಡಿಸಿ.
7) ಮಕ್ಕಳಲ್ಲಿ ನೈತಿಕವಾದ ಮೌಲ್ಯಗಳು ಮತ್ತು ಭಾರತೀಯ ಸಂಸ್ಕೃತಿಯನ್ನು ಹೆಚ್ಚು ಮಾಡಲು ಹೆತ್ತವರು ಮತ್ತು ಶಿಕ್ಷಕರು ತೀವ್ರ ಪ್ರಯತ್ನ ಮಾಡುವುದು ತುಂಬಾ ಅಗತ್ಯ.
8) ಹೆತ್ತವರು ಈ ವಿಷಯದಲ್ಲಿ ಹದಿಹರೆಯದ ಮಕ್ಕಳ ಜೊತೆಗೆ ಸರ್ವಾಧಿಕಾರಿಗಳ ಹಾಗೆ ವರ್ತಿಸುವುದಕ್ಕಿಂತ ಆಪ್ತ ಗೆಳೆಯರ ಹಾಗೆ ವರ್ತಿಸುವುದರಿಂದ ಅನಾಹುತ ತಪ್ಪಿಸಬಹುದು.
9) ಮಕ್ಕಳು ತಮ್ಮ ಮೊಬೈಲ್ ನಂಬರ್‌ಗಳನ್ನು ಅಪರಿಚಿತರ ಜೊತೆಗೆ ಶೇರ್ ಮಾಡದ ಹಾಗೆ ತರಬೇತು ನೀಡಿ. ಅದರ ದುಷ್ಪರಿಣಾಮಗಳ ಬಗ್ಗೆ ಅವರಿಗೆ ತಿಳಿಸಿ.
10) ಮಕ್ಕಳಿಗೆ ಮೊಬೈಲ್ ಅತಿಬಳಕೆಯ ಬಗ್ಗೆ ಸ್ವಯಂ ನಿಯಂತ್ರಣದ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.
ಒಟ್ಟಿನಲ್ಲಿ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವ ಪ್ರಯತ್ನ ಎಲ್ಲರೂ ಮಾಡಬೇಕು.
ರಾಜೇಂದ್ರ ಭಟ್ ಕೆ.