ಕಾಂಗ್ರೆಸ್‌ ಸದಸ್ಯ ಅಭಿಷೇಕ್‌ ಸಿಂಘ್ವಿ ಸೀಟಿನಡಿ ನೋಟಿನ ಬಂಡಲ್‌ಗಳು ಪತ್ತೆ

ರಾಜ್ಯಸಭೆ ಆಸನದಡಿ ಸಿಕ್ಕಿದ ರಾಶಿ ರಾಶಿ ನೋಟುಗಳು ಯಾರಿಗೆ ಸೇರಿದ್ದು?

ಹೊಸದಿಲ್ಲಿ : ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರ ಆಸನದ ಕೆಳಗೆ ಕಂತೆ ಕಂತೆ ನೋಟು ಪತ್ತೆಯಾಗಿರುವುದು ಅಧಿವೇಶನದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಸಂಸತ್‌ನ ಚಳಿಗಾಲದ ಅಧಿವೇಶನ ಪ್ರಸ್ತುತ ನಡೆಯುತ್ತಿದ್ದು, ರಾಜ್ಯಸಭೆ ಸಭಾಪತಿ ಜಗದೀಪ್‌ ಧನ್‌ಕರ್‌ ಅವರು ರಾಜ್ಯಸಭೆಗೆ ಅಭಿಷೇಕ್‌ ಆಸನದ ಕೆಳಗೆ ನೋಟಿನ ಬಂಡಲ್‌ಗಳು ಸಿಕ್ಕಿವೆ ಎಂದು ಸದನಕ್ಕೆ ತಿಳಿಸಿದರು.
ಇದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ಷೇಪ ಎತ್ತಿ ತನಿಖೆ ಮುಗಿಯುವ ತನಕ ಯಾರ ಹೆಸರೂ ಉಲ್ಲೇಖಿಸಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಸದಸ್ಯರು ಗದ್ದಲ ಎಬ್ಬಿಸಿದಾಗ ಕೋಲಾಹಲ ಉಂಟಾಯಿತು.
ಸಂಸತ್ತಿನೊಳಗೆ ನೋಟಿನ ಬಂಡಲ್‌ಗಳು ಪತ್ತೆಯಾಗುತ್ತಿರುವುದು ಆಘಾತಕಾರಿ ಸಂಗತಿ. ತೆಲಂಗಾಣದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್‌ ಸದಸ್ಯ ಅಭಿಷೇಕ್‌ ಸಿಂಘ್ವಿ ಆಸನದ ಕೆಳಗೆ ಹಣದ ರಾಶಿಯಿತ್ತು ಎಂದು ಧನ್‌ಕರ್‌ ತಿಳಿಸಿದರು.
ರಾಜ್ಯಸಭಾ ಸಂಸದರ ಸೀಟಿನ ಸಂಖ್ಯೆ 222ರ ಅಡಿಯಲ್ಲಿ 500 ರೂ ನೋಟುಗಳ ಬಂಡಲ್ ಪತ್ತೆಯಾಗಿದೆ. ಮೂಲಗಳ ಪ್ರಕಾರ ಅದರಲ್ಲಿ 50 ಸಾವಿರ ರೂ. ಹಣವಿತ್ತು.
ಅಭಿಷೇಕ್ ಮನು ಸಿಂಘ್ವಿ ಸದನಕ್ಕೆ ಹಣ ತಂದ ಆರೋಪವನ್ನು ಅಲ್ಲಗಳೆದಿದ್ದಾರೆ. ರಾಜ್ಯಸಭೆಗೆ ಹೋಗುಬಾಗ 500 ರೂಪಾಯಿ ನೋಟು ಈರುತ್ತದೆ. ಆದರೆ ನೋಟಿನ ಬಂಡಲ್‌ ಇರುವ ಬಗ್ಗೆ ಕೇಳಿದ್ದು ಇದೇ ಮೊದಲು. ಮಧ್ಯಾಹ್ನ 12.57ಕ್ಕೆ ಸದನ ತಲುಪಿ 1.30 ಗಂಟೆಗೆ ಸದನದಿಂದ ಎದ್ದು ಹೋಗಿದ್ದೆ ಎಂದರು.

ಮೂಲಗಳ ಪ್ರಕಾರ ಸದನವನ್ನು ಮುಂದೂಡಿದ ಬಳಿಕ ದಿನನಿತ್ಯದ ತಪಾಸಣೆ ಸಮಯದಲ್ಲಿ ಭದ್ರತಾ ಅಧಿಕಾರಿಗಳಿಗೆ ನೋಟುಗಳ ಬಂಡಲ್ ಸಿಕ್ಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ಜೆ.ಪಿ.ನಡ್ಡಾ, ಈ ಘಟನೆ ಅತ್ಯಂತ ಗಂಭೀರವಾದದ್ದು ಎಂದು ಹೇಳಿದ್ದಾರೆ. ಸದನದ ಘನತೆಗೆ ಧಕ್ಕೆಯಾಗಿದೆ. ಯಾವುದೇ ವಿಚಾರದಲ್ಲಿ ಸಿಟ್ಟು ತೋರಿಸುವುದು, ಯಾವುದೇ ವಿಷಯದ ಮೇಲೆ ಕೆಸರೆರಚಾಟ ಸರಿಯಲ್ಲ. ಈ ವಿಷಯವನ್ನು ಇತ್ಯರ್ಥ ಪಡಿಸಲಾಗುವುದು ಎಂದಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top