ಪುತ್ತೂರು: ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್ ಸಂಸ್ಥೆಯ 42ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಡಿ.6,7 ಹಾಗೂ 8 ರಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಯಾದವಶ್ರೀ ಸಭಾಂಗಣದಲ್ಲಿ ನಡೆಯಲಿದೆ ಎಂದು ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಅಲೈಡ್ ಆರ್ಟ್ಸ್ ನ ಮುಖ್ಯ ಶಿಕ್ಷಕ ಎಂ.ಸುರೇಶ್ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್ ಸಂಸ್ಥೆ ಕಳೆದ 46 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ಸಂಸ್ಥೆಯ ಹಲವಾರು ವಿದ್ಯಾರ್ಥಿಗಳು ಕರಾಟೆ ಪಟುಗಳಾಗಿ ಹೊರಹೊಮ್ಮಿದ್ದಾರೆ. ಪುತ್ತೂರಿನಲ್ಲಿ 1978 ರಲ್ಲಿ ಆರಂಭಗೊಂಡ ಸಂಸ್ಥೆ ಆತಿಥ್ಯದಲ್ಲಿ ಸ್ಪರ್ಧೆ ನಡೆಯಲಿದ್ದು, ದೇಶದ ವಿವಿಧ ರಾಜ್ಯಗಳಿಂದ ಸುಮಾರು 2 ಸಾವಿರ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಡಿ.6 ಶುಕ್ರವಾರ ಸ್ಪರ್ಧೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಕೆ.ಎಂ., ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಅಧ್ಯಕ್ಷ ಡಾ.ಶಿವಪ್ರಕಾಶ್ ಎಂ., ಪುತ್ತೂರು ಕಿರಾಟೆ ಸಂಸ್ಥೆಯ ಸ್ಥಾಪಕ ಸೇಡಿಯಾಪು ಜನಾರ್ದನ ಭಟ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಡಿ.8 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಳಿಯ ಜ್ಯುವೆಲ್ಸ್ ನ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ರವಿನಾರಾಯಣ ಎಂ., ಮುಖ್ಯ ಶಿಕ್ಷಕ ಸತೀಶ್ ಕುಮಾರ್ ರೈ, ರಾಧಾಕೃಷ್ಣ ಮಂದಿರದ ಕಾರ್ಯದರ್ಶಿ ದಿನೇಶ್ ಪಾಂಗಾಳ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಶಿಕ್ಷಕರುಗಳಾದ ಗೋಪಾಲ್ ವಿ., ಉಮೇಶ್ ಆಚಾರ್ಯ, ನವೀನ್ ಕುಮಾರ್, ಸುಖೇಶ್ ಉಪಸ್ಥಿತರಿದ್ದರು.