ಯತ್ನಾಳ್‌ಗೆ ಹೈಕಮಾಂಡ್‌ ಶಿಸ್ತಿನ ಪಾಠ : ಪಕ್ಷದ ಚೌಕಟ್ಟಿನೊಳಗಿರಲು ಖಡಕ್‌ ಸೂಚನೆ

ಬಿಜೆಪಿಯ ಒಳಜಗಳ ಸದ್ಯಕ್ಕೆ ಶಮನ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ದಿಲ್ಲಿಯಲ್ಲಿ ಬಿಜೆಪಿ ಹೈಕಮಾಂಡ್ ಶಿಸ್ತಿನ ಪಾಠ ಮಾಡಿದೆ. ಕೇಂದ್ರ ಶಿಸ್ತು ಸಮಿತಿ ಕೊಟ್ಟ ನೋಟಿಸ್​ಗೆ 6 ಪುಟಗಳ ಉತ್ತರ ನೀಡಿರುವ ಯತ್ನಾಳ್, ಖುದ್ದು ಹಾಜರಾಗಿ ಲಿಖಿತ ಮಾತ್ರವಲ್ಲದೆ ಮೌಖಿಕವಾಗಿಯೂ ಸ್ಪಷ್ಟನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಚೌಕಟ್ಟು ಮೀರಿ ಹೋಗದಂತೆ ಯತ್ನಾಳ್‌ಗೆ ಪಕ್ಷದ ವರಿಷ್ಠರು ಎಚ್ಚರಿಕೆ ರೂಪದಲ್ಲಿ ಸಲಹೆ ನೀಡಿದ್ದಾರೆ. ಇತ್ತ ಯಡಿಯೂರಪ್ಪ ಕೂಡ ಯತ್ನಾಳ್‌ ನಮ್ಮವರೇ ಎಂದು ಹೇಳುವ ಮೂಲಕ ಬಿಜೆಪಿ ಒಳಜಗಳ ಸದ್ಯದ ಮಟ್ಟಿಗೆ ತಣ್ಣಗಾದಂತೆ ಕಾಣಿಸುತ್ತದೆ.
ತಮ್ಮ ಬಂಡಾಯಕ್ಕೆ 6 ಪುಟಗಳ ಸುದೀರ್ಘ ಉತ್ತರ ನೀಡಿರುವ ಯತ್ನಾಳ್, ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್​ಗೆ ಕಾರಣಗಳನ್ನು ಕೊಟ್ಟಿದ್ದಾರೆ. ನಾನು ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡಿಲ್ಲ. ವಕ್ಫ್​ ವಿರುದ್ಧ ಹೋರಾಟ ಮಾಡಿದ್ದೇನೆ. ವಕ್ಫ್ ಬೋರ್ಡ್ ರೈತರು, ಮಠಗಳ ಭೂಮಿ ಕಬಳಿಸುತ್ತಿರುವಾಗ ಸುಮ್ಮನಿರಲು ಸಾಧ್ಯವಿಲ್ಲ. ಪಕ್ಷದ ರಾಜ್ಯಾಧ್ಯಕ್ಷರು ವಕ್ಫ್ ಬೋರ್ಡ್ ವಿರುದ್ಧ ಹೋರಾಟಕ್ಕೆ ಮುಂದಾಗಲಿಲ್ಲ. ಹೀಗಾಗಿ ವಕ್ಫ್ ಬೋರ್ಡ್ ವಿರುದ್ಧ ನಾವು ತಾರ್ಕಿಕವಾಗಿ ಹೋರಾಟ ಮಾಡಿದ್ದೇವೆ. ವಾಲ್ಮೀಕಿ ನಿಗಮ ಹಗರಣದ ವಿರುದ್ಧ ಹೋರಾಟದಲ್ಲಿ ಪಕ್ಷ ಭಾಗಿಯಾಗಬೇಕಿತ್ತು. ನಾವು ಪಾದಯಾತ್ರೆಗೆ ಮುಂದಾಗಿದ್ದೆವು. ಆದರೆ, ಇದಕ್ಕೆ ವ್ಯವಸ್ಥಿತ ತಡೆಯೊಡ್ಡಲಾಯಿತು. ಬಿ.ವೈ.ವಿಜಯೇಂದ್ರರಿಂದ ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚುತ್ತಿದೆ. ಕೆಲವರನ್ನು ಕಟ್ಟಿಕೊಂಡು ಪಕ್ಷ ಮುನ್ನಡೆಸುತ್ತಿದ್ದಾರೆ ಹೀಗಾಗಿ ಉಪಚುನಾವಣೆಯಲ್ಲಿ ಸೋಲಾಯಿತು. ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣದಿಂದ ಹಲವು ಕ್ಷೇತ್ರಗಳಲ್ಲಿ ಸೋಲಾಗಿದೆ. ಬಿಎಸ್​ವೈ ವಿರುದ್ಧ ಹಲವು ಕೇಸ್​ಗಳಿವೆ. ಹೀಗಾಗಿ ಕಾಂಗ್ರೆಸ್ ಜೊತೆಗೆ ಅವರಿಗೆ ಹೊಂದಾಣಿಕೆ‌ ಅನಿವಾರ್ಯವಾಗಿದೆ. ನನ್ನ ಕಾರ್ಖಾನೆ ಬಂದ್ ಮಾಡಿಸಿದರು. ಆದರೂ ನಾನು ಹೋರಾಟ ಮುಂದುವರಿಸಿದ್ದೇನೆ. ನಾನು ಹಿಂದುತ್ವವನ್ನ ಪ್ರಬಲವಾಗಿ ಸಮರ್ಥಿಸಿಕೊಂಡಿದ್ದೇನೆ, ಇದು ಪಕ್ಷದ ವಿರೋಧಿ ನಿಲುವೆ? ಎಂದು ಶಿಸ್ತು ಸಮಿತಿಗೆ ನೀಡಿದ ಉತ್ತರದಲ್ಲಿ ಯತ್ನಾಳ್ ಪ್ರಶ್ನಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top