ಜಿಲ್ಲಾ ಸಮಿತಿಗಳಿಗೆ ಮರಳು ಬ್ಲಾಕ್‌ ಹಂಚಿಕೆ ಹೊಣೆ

ಹೊಸ ಮರಳು ನೀತಿ ಕುರಿತು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾಹಿತಿ

ಬೆಂಗಳೂರು : ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಕೈಗೆಟುಕುವ ದರಗಳಲ್ಲಿ ಮರಳು ಸಿಗಲಿ ಎಂಬ ಉದ್ದೇಶದಿಂದ ಸರಕಾರ ಹೊಸ ಮರಳು ನೀತಿ ಜಾರಿಗೊಳಿಸಿದ್ದು, ಆಯವ್ಯಯದಲ್ಲಿ ಘೋಷಿಸಿರುವಂತೆ ಈ ಸಮಗ್ರ ಮರಳು ನೀತಿಯನ್ನು ಗಣಿ ಇಲಾಖೆ ಅನುಷ್ಠಾನಗೊಳಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಮರಳು ಪೂರೈಸುವ ಉದ್ದೇಶದಿಂದ ಮರಳು ಬ್ಲಾಕ್‌ಗಳನ್ನು ಹಂಚಿಕೆ ಮಾಡುವ ಹೊಣೆಗಾರಿಕೆಯನ್ನು ಜಿಲ್ಲಾ ಸಮಿತಿಗಳಿಗೆ ನೀಡಲು ನಿರ್ಧರಿಸಲಾಗಿದೆ. ನೂತನ ಮರಳು ನೀತಿ ಜಾರಿಗೆ ತರುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ ಸಾರ್ವಜನಿಕ ಕಾಮಗಾರಿಗಳಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲೆ ಅತ್ಯಂತ ಕಡಿಮೆ ದರದಲ್ಲಿ ಮರಳನ್ನು ಪೂರೈಕೆ ಮಾಡಲಾಗುತ್ತಿದೆ. ಅದೇ ಮಾದರಿಯಲ್ಲಿ ಖಾಸಗಿ ಬಳಕೆಗೆ ಮರಳನ್ನು ಕಡಿಮೆ ಬೆಲೆಗೆ ಪೂರೈಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.































 
 

ಒಂದು, ಎರಡು ಮತ್ತು ಮೂರನೇ ಶ್ರೇಣಿಯ ಹಳ್ಳಗಳಿಂದ ಮರಳನ್ನು ತೆಗೆದು ವಿಲೇವಾರಿ ಮಾಡುವ ಹೊಣೆಗಾರಿಕೆಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿದೆ. ಸಾರ್ವಜನಿಕ ಕಾಮಗಾರಿಗಳಿಗೆ ಪ್ರತಿ ಟನ್‌ಗೆ 300 ರೂಪಾಯಿಯಂತೆ ಮರಳು ಪೂರೈಕೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಪೂರೈಸಲು ರಾಜ್ಯಾದ್ಯಂತ ನದಿಪಾತ್ರದಿಂದ ತೆಗೆಯುವ ಪ್ರತಿ ಟನ್ ಮರಳಿಗೆ ಸರ್ಕಾರ ಏಕರೂಪದ ಬೆಲೆ 850 ರೂ. ನಿಗದಿ ಪಡಿಸಿದೆ.

ಈ ನೂತನ ನೀತಿಯಂತೆ ಮರಳು ಬ್ಲಾಕ್‍ಗಳ ಟೆಂಡರನ್ನು ಆಯಾ ಜಿಲ್ಲಾ ಮರಳು ಸಮಿತಿಯಿಂದ ನಡೆಸಲಾಗುವುದು. ಜಿಲ್ಲಾವಾರು ಗುರುತಿಸಲಾಗುವ ಮರಳು ಬ್ಲಾಕ್‍ಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಮತ್ತು ಇತರ ಸಾಮಾನ್ಯ ವರ್ಗದವರಿಗೆ ರೋಸ್ಟರ್ ಪದ್ಧತಿಯಡಿಯಲ್ಲಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಟೆಂಡರ್ ಪ್ರಕ್ರಿಯೆಯನ್ನು ಇ-ಪೋರ್ಟಲ್‍ನಲ್ಲಿ ನಡೆಸಲಾಗುತ್ತಿದ್ದು, ಸದರಿ ಪೋರ್ಟಲ್ ಮೂಲಕ ಆಸಕ್ತ ವ್ಯಕ್ತಿ/ಖಾಸಗಿ ಕಂಪನಿ/ಸಂಸ್ಥೆಯವರು ಅರ್ಜಿ ಸಲ್ಲಿಸಲು ಜಿಲ್ಲಾವಾರು ಅಧಿಸೂಚನೆ ಜಾರಿ ಮಾಡಲಾಗುವುದು ಎಂದು ಮಲ್ಲಿಕಾರ್ಜುನ್ ವಿವರಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top