ಸೈಟ್ ಹಂಚಿಕೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವುದಕ್ಕೆ ಸಿಕ್ಕಿದೆ ಹಲವು ಪುರಾವೆ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಆರೋಪಿಯಾಗಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹಲವು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದೆ. ಮುಡಾದಲ್ಲಿ ಹಗರಣ ನಡೆದೇ ಇಲ್ಲ, ಎಲ್ಲ ವಿಪಕ್ಷಗಳ ಅಪಪ್ರಚಾರ ಎನ್ನುತ್ತಿರುವ ಸಿದ್ದರಾಮಯ್ಯನವರಿಗೆ ಈ ಸಾಕ್ಷ್ಯಗಳು ಉರುಳಾಗಿ ಪರಿಣಮಿಸಲಿವೆ ನ್ನಲಾಗಿದೆ.
ಮುಡಾದ 14 ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಬಿ.ಎಂ ಪಾರ್ವತಿ ಅವರಿಗೆ ಹಸ್ತಾಂತರಿಸಿರುವ ಹಿಂದೆ ಹಲವಾರು ಅವ್ಯವಹಾರಗಳು ನಡೆದಿರುವುದಕ್ಕೆ ಹಲವು ಪುರಾವೆಗಳನ್ನು ಜಾರಿ ನಿರ್ದೇಶನಾಲಯ ಪತ್ತೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಮುಡಾದಿಂದ ಬೇನಾಮಿ ಹಾಗೂ ಇನ್ನಿತರ ವ್ಯವಹಾರಗಳ ಮೂಲಕ ಒಟ್ಟು 1095 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದ್ದು, ಇವುಗಳ ಮೌಲ್ಯ ಬರೊಬ್ಬರಿ 700 ಕೋಟಿ ರೂ. ಆಗಿದೆ. ಪಾರ್ವತಿ ಅವರಿಗೆ ಮಾಡಲಾದ ಭೂಪರಿವರ್ತನೆಯಲ್ಲಿ ಶಾಸನಬದ್ಧ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಕಚೇರಿ ಕಾರ್ಯ ವಿಧಾನಗಳ ಉಲ್ಲಂಘನೆ, ಅನವಶ್ಯಕ ಒಲವು ತೋರಿರುವುದು, ಪ್ರಭಾವದ ಬಳಕೆ, ಫೋರ್ಜರಿ ಮಾಡಿರುವುದಕ್ಕೆ ಸಾಕ್ಷ್ಯಗಳು ಇಡಿ ತನಿಖೆಯಲ್ಲಿ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಸಿದ್ದರಾಮಯ್ಯ ಆಪ್ತ ಸಹಾಯಕರಲ್ಲಿ ಒಬ್ಬರಾದ ಎಸ್.ಜಿ ದಿನೇಶ್ ಕುಮಾರ್ ಅಲಿಯಾಸ್ ಕುಮಾರ್ ಸೈಟ್ ಹಂಚಿಕೆಗೆ ಪ್ರಭಾವ ಬೀರಿದ್ದಾರೆ. ಭೂಮಿ ಕಳೆದುಕೊಳ್ಳುವವರ ಸೋಗಿನಲ್ಲಿ ಬೇನಾಮಿ ಅಥವಾ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ನಿವೇಶನ ಹಂಚಲಾಗಿದೆ. ಈ ಅಕ್ರಮ ಹಂಚಿಕೆಯ ಫಲಾನುಭವಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಪ್ರಭಾವಿ ವ್ಯಕ್ತಿಗಳಾಗಿದ್ದಾರೆ ಎಂದು ಇಡಿ ತನಿಖೆಯಲ್ಲಿ ತಿಳಿದುಬಂದಿದೆ.
ಪಾರ್ವತಿಯವರಿಗೆ ನಿವೇಶನ ಸಿಕ್ಕಾಗ ಅವರ ಪುತ್ರ ಯತೀಂದ್ರ ಮುಡಾ ಮಂಡಳಿಯಲ್ಲಿದ್ದರು. ಪತಿ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದರು. ಮುಡಾದಿಂದ ಕೆಲವೊಂದು ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಜಾಗವನ್ನೇ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಖರೀದಿಸಿದ್ದಾರೆ ಎಂದು ಇಡಿ ಪತ್ತೆಹಚ್ಚಿದೆ.
ಕೃಷಿ ಜಮೀನು ಎಂದು ತೋರಿಸಿ ಆ ಜಾಗವನ್ನು ಕೊಂಡುಕೊಂಡಿದ್ದಾರೆ. ಜಮೀನು ಮಾಲೀಕ ಮಾರುವ ಮುನ್ನವೇ ಮುಡಾ ಸೈಟ್ ಪಡೆದಿದ್ದಾರೆ. ಪಾರ್ವತಿ ಅವರಿಗೆ ನಿವೇಶನವನ್ನು ಸಂಬಂಧಿಸಿದ ವಿಭಾಗ ಹಂಚಿಕೆ ಮಾಡಿಲ್ಲ. ಮುಡಾ ಆಯುಕ್ತರಾಗಿದ್ದ ನಟೇಶ್ ಸ್ವಇಚ್ಛೆಯಿಂದ ಹಂಚಿದ್ದಾರೆ. ಪಾರ್ವತಿ ಅವರಿಗೆ ಯಾವ ಭಾಗದ ನಿವೇಶನ ನೀಡಬೇಕು ಎಂದು ಮುಡಾ ಆಯುಕ್ತರೇ ಆಯ್ಕೆಯನ್ನು ಮಾಡಿ, ಹಂಚಿಕೆ ಮಾಡಿದ್ದಾರೆ ಎಂದು ಇಡಿ ತನಿಖೆಯಲ್ಲಿ ತಿಳಿದು ಬಂದಿದೆ.