ಹೈದರಾಬಾದ್ : ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಇಂದು ಬೆಳಗ್ಗೆ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಹೈದರಾಬಾದ್‌ನಾದ್ಯಂತ ಕಂಪನಗಳ ಅನುಭವಗಳಾಗಿವೆ. ಭೂಕಂಪನ ರಾಷ್ಟ್ರೀಯ ಕೇಂದ್ರದ ಪ್ರಕಾರ ಭೂಕಂಪ ಬೆಳಗ್ಗೆ 7.27ರ ವೇಳೆಗೆ ಸಂಭವಿಸಿದೆ. ಕಂಪನ ಕೇಂದ್ರ ಭೂಮಿಯ 40 ಕಿ. ಮೀ. ಆಳದಲ್ಲಿತ್ತು.
ಭೂಕಂಪ ಈ ಪ್ರದೇಶಗಳ ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿದೆ. ಯಾವುದೇ ಪ್ರಾಣಹಾನಿ ಅಥವಾ ಗಮನಾರ್ಹ ಹಾನಿಯ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ. ಅಧಿಕಾರಿಗಳು ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಜನರಿಗೆ ಜಾಗರೂಕರಾಗಿರಲು ಮತ್ತು ಕಿಕ್ಕಿರಿದ ಹಾಗೂ ಅಸುರಕ್ಷಿತ ಕಟ್ಟಡಗಳಿಂದ ದೂರವಿರುವಂತೆ ತಿಳಿಸಲಾಗಿದೆ. ತೆಲಂಗಾಣದಲ್ಲಿ ಭೂಕಂಪಗಳಂತಹ ಘಟನೆಗಳು ತೀರಾ ಅಪರೂಪ. ರಿಕ್ಟರ್ ಮಾಪಕದಲ್ಲಿ 5.3 ಎಂದರೆ ಮಧ್ಯಮ ತೀವ್ರತೆಯಾಗುತ್ತದೆ. ಭೂಕಂಪದ ಕುರಿತಾದ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಬರಬೇಕಾಗಿದೆ.
ಭೂಕಂಪದಿಂದ ಭೂಮಿ ಲಘುವಾಗಿ ನಡುಗುತ್ತಿರುವ ಅನೇಕ ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ವೈರಲ್ ಆಗುತ್ತಿವೆ. ಒಂದು ವೀಡಿಯೊದಲ್ಲಿ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿರುವಾಗಲೇ ಭೂಮಿ ಲಘುವಾಗಿ ಕಂಪಿಸುತ್ತಿರುವ ಕಾಣಿಸುತ್ತದೆ. ಆದರೆ ಈ ಎಲ್ಲ ವೀಡಿಯೊಗಳ ನೈಜತೆ ಇನ್ನಷ್ಟೇ ದೃಢಪಡಬೇಕಾಗಿದೆ.