ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಮೇಶ್ವರಂ ಮಾದರಿಯಲ್ಲಿ ಸ್ಫೋಟದ ಬೆದರಿಕೆ

ಸಂದೇಶದಲ್ಲಿರುವ ಹೆಸರುಗಳನ್ನು ನೋಡಿ ಪೊಲೀಸರು ಹೈರಾಣ

ಮಂಗಳೂರು : ರಾಮೇಶ್ವರಂ ಕೆಫೆ ಮಾದರಿಯಲ್ಲಿ ಬಾಂಬ್ ಇರಿಸಿದ್ದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಸಂದೇಶ ಬಂದ ಬಗ್ಗೆ ತಡವಾಗಿ ವರದಿಯಾಗಿದೆ. ನ.30ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಅಕ್ರಮ್ ವಾಯ್ಕರ್‌ ಎನ್ನುವ ಹೆಸರಲ್ಲಿದ್ದ ಇಮೇಲ್‌ನಿಂದ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ಬಜಪೆ ಠಾಣೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ದೂರು ನೀಡಿದ್ದಾರೆ.

ಇಂಥ ಬೆದರಿಕೆ ಕರೆಗಳು ಈಗ ಮಾಮೂಲಿಯಾಗಿದ್ದರೂ ಈ ಸಂದೇಶದಲ್ಲಿ ಉಲ್ಲೇಖಿಸಿರುವ ಕೆಲವು ಹೆಸರುಗಳು ಮಾತ್ರ ಕುತೂಹಲ ಕೆರಳಿಸಿವೆ. ಅದರಲ್ಲೂ ನೇರವಾಗಿ ತಮಿಳುನಾಡು ಸರಕಾರಕ್ಕೆ ಲಿಂಕ್‌ ಇರುವುದು ಕುತೂಹಲವನ್ನು ಹೆಚ್ಚಿಸಿದೆ. ಈ ಹೆಸರುಗಳನ್ನು ನೋಡಿ ಪೊಲೀಸರೇ ಚಕಿತರಾಗಿದ್ದಾರೆ.































 
 

ತಮಿಳುನಾಡಿನಲ್ಲಿ ಬಂಧನಕ್ಕೀಡಾಗಿರುವ ಡ್ರಗ್ ಕಿಂಗ್‌ಪಿನ್ ಜಾಫರ್ ಸಾದಿಕ್ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಪತ್ನಿ ಚಿತ್ರ ನಿರ್ಮಾಪಕಿ ಕೃತಿಗಾ ಉದಯನಿಧಿ ಅವರ ಮೇಲಿರುವ ಕೇಸನ್ನು ವಾಪಸ್ ಪಡೆಯಬೇಕು. ತಿರುಚ್ಚಿ ಸೆಂಟ್ರಲ್ ಜೈಲಿನಲ್ಲಿರುವ ಟಿಎನ್‌ಎಲ್‌ಎ ಉಗ್ರ ಸಂಘಟನೆಯ ಮುಖ್ಯಸ್ಥ ಎಸ್. ಮಾರನ್ ಅವರನ್ನು ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಇಡಲಾಗಿದೆ.

ರಾಮೇಶ್ವರ ಕೆಫೆ ಬ್ಲಾಸ್ಟನ್ನು ಪಾಕ್ ಐಎಸ್‌ಐನವರು ತಮಿಳುನಾಡು ಡಿಜಿಪಿಯ ಪುತ್ರಿ ದೌಡಿ ಜೀವಾಲ್ ಎಂಬವರನ್ನು ಬಳಸಿಕೊಂಡು ಮಾಡಿದ್ದಾರೆ. ಜಮೇಶಾ ಮುಬೀನ್ ಎಂಬಾತ ಇದಕ್ಕೆ ಸಹಕಾರ ನೀಡಿದ್ದಾನೆ ಎಂದು ಇಮೇಲ್ ಸಂದೇಶದಲ್ಲಿ ಬರೆಯಲಾಗಿದೆ. ಅದರಲ್ಲಿ ವಿ.ಬಾಲಕೃಷ್ಣನ್ ಐಪಿಎಸ್, ಎಡ್ವೊಕೇಟ್ ಶ್ವೇತಾ, ವರುಣ್ ಐಪಿಎಸ್ ಎಂಬ ಹೆಸರುಗಳನ್ನು ಉಲ್ಲೇಖಿಸಲಾಗಿದೆ.

ಇದೇ ರೀತಿಯ ಬೆದರಿಕೆ ಸಂದೇಶ ಅಕ್ಟೋಬರ್ 25ರಂದು ತಿರುಪತಿಯ ಎರಡು ಪ್ರಸಿದ್ಧ ಹೊಟೇಲ್‌ಗಳಿಗೆ ಬಂದಿತ್ತು. ಅದರಲ್ಲಿಯೂ ಜಾಫರ್ ಸಾದಿಕ್ ಮತ್ತು ಕೃತಿಕಾ ಉದಯನಿಧಿ ಹೆಸರು ಉಲ್ಲೇಖಿಸಲಾಗಿತ್ತು. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಬೆದರಿಕೆ ಸಂದೇಶದಲ್ಲಿ ತಮಿಳುನಾಡಿನ ವಿಚಾರ ಇರುವುದರಿಂದ ಅಲ್ಲಿನವರೇ ಈ ಕೃತ್ಯ ನಡೆಸಿರುವ ಸಾಧ್ಯತೆಯನ್ನು ಪೊಲೀಸರು ಶಂಕಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top