ಮನೋರಂಜನಾ ಕಾರ್ಯಕ್ರಮದಲ್ಲಿ ದೈವಾರಾಧನೆಯ ಅಣಕು
ಬೆಂಗಳೂರು: ಕಾಂತಾರ ಸಿನೆಮಾ ಬಂದ ಬಳಿಕ ತುಳುನಾಡಿನ ಪವಿತ್ರ ದೈವಾರಾಧನೆಯನ್ನು ನಕಲು ಮಾಡಿ ಅದೇ ರೀತಿಯ ವೇಷಭೂಷಣ ಧರಿಸಿ ನೃತ್ಯ ಮಾಡುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಈ ಬಗ್ಗೆ ತುಳುನಾಡಿನವರು ಎಷ್ಟೇ ಆಕ್ರೋಶ ವ್ಯಕ್ತಪಡಿಸಿದರೂ ಪ್ರಯೋಜನವಾಗುತ್ತಿಲ್ಲ. ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇದೇ ಮಾದರಿಯ ಘಟನೆಯೊಂದು ನಡೆದಿದ್ದು, ಇದರ ವೀಡಿಯೊ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಂಜುರ್ಲಿ ದೈವದಂತೆ ವೇಷ ಧರಿಸಿದ ಇಬ್ಬರು ಕಾಂತಾರ ಚಿತ್ರದ ವರಾಹ ರೂಪಂ…ಹಾಡಿಗೆ ನರ್ತಿಸಿ ಪಂಜುರ್ಲಿ ದೈವದ ಹಾವಾಭಾವಗಳನ್ನು ಪ್ರದರ್ಶಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಪಂಜುರ್ಲಿ ದೈವದ ವೇಷಧಾರಿಗಳು ಎರಡೂ ಕೈ ಹಿಡಿದುಕೊಂಡು ವೇದಿಕೆಗೆ ಕರೆತಂದಿದ್ದಾರೆ.
ಈ ಮನರಂಜನಾ ಕಾರ್ಯಕ್ರಮ ತುಳುನಾಡಿನವರ ಆಕ್ರೋಶಕ್ಕೆ ಗುರಿಯಾಗಿದೆ. ತುಳುನಾಡಿನವರು ಆರಾಧನಾ ಪದ್ಧತಿಯನ್ನು ಈ ರೀತಿ ಮನರಂಜನೆಯ ವಸ್ತುವಾಗಿ ಬಳಸಿ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಹಲವು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತುಳುನಾಡಿನ ಸಾಂಸ್ಕೃತಿಕ, ಭಕ್ತಿಯ ಅಣಕು ಪ್ರದರ್ಶನ ಮಾಡುವ ಮೂಲಕ ಅಗೌರವ ತೋರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಕಾಂತಾರ ಸಿನಿಮಾದ ಹಾಡು ಬಳಸಿ ಜಮೀರ್ ಅಹ್ಮದ್ ಕೈ ಹಿಡಿದು ವೇಷಧಾರಿಗಳು ನರ್ತಿಸಿದ್ದಾರೆ. ಇದು ತುಳುನಾಡಿನ ಸಂಸ್ಕೃತಿಗೆ ಅಪಚಾರ ಮಾಡಿದಂತೆ. ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ದೈವ ನಂಬಿಕೆಯನ್ನು ಅಪಹಾಸ್ಯ ಮಾಡುವುದು ಸರಿಯಲ್ಲ. ದೈವರಾಧನೆ ತುಳುನಾಡಿನ ಸಾಂಸ್ಕೃತಿಕ, ಧಾಮಿಕ ನಂಬಿಕೆಯಲ್ಲಿ ಬೇರೂರಿರುವ ಪವಿತ್ರ ಸಂಪ್ರದಾಯ ಎಂದು ಕರಾವಳಿಗರು ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ದೈವದ ವೇಷ ಧರಿಸಲು ಅವಕಾಶ ಕೊಡಬಾರದೆಂದು ಸರ್ಕಾರ, ಬೆಂಗಳೂರು ಪೊಲೀಸ್ ಕಮಿಷನರ್‌ಗೆ ತುಳು ಸಂಘಟನೆಗಳು ಕೋರಿದ್ದವು. ತುಳುನಾಡಿನ ಸಂಪ್ರದಾಯ ರಕ್ಷಿಸಲು ಸರ್ಕಾರವು ತುಳು ಬುಡಕಟ್ಟು ಸಾಂಸ್ಕೃತಿಕ ಮಂಡಳಿ (ಟಿಟಿಸಿಬಿ) ಸ್ಥಾಪನೆಗೆ ಒತ್ತಾಯವೂ ಇದೆ.
ಈ ನಡುವೆ ಕಾಂತಾರ-1ರ ಕುರಿತು ಕರಾವಳಿ ಜನತೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪಂಜುರ್ಲಿ ದೈವವನ್ನು ಸಿನಿಮಾಗಳಲ್ಲಿ ತೋರಿಸದಂತೆ ಸ್ಥಳೀಯರು ಸಿನಿಮಾ ನಿರ್ದೇಶಕರನ್ನು ಒತ್ತಾಯಿಸಿದ್ದಾರೆ. ಕಾಂತಾರದಲ್ಲಿ ಪಂಜುರ್ಲಿ ದೈವದ ಆರಾಧನೆ ತೋರಿಸಿದ ಪರಿಣಾಮ ಹಲವು ಸಿನಿಮಾಗಳ ನಿರ್ದೇಶಕರು ದೈವಾರಾಧನೆ ಬೆನ್ನು ಹತ್ತಿದ್ದಾರೆ. ಮಂಗಳೂರು ಮೂಲದ ಕಲಾವಿದರಿಂದ ನಿರ್ಮಾಣಗೊಂಡಿರುವ ಕನ್ನಡ ಕಲ್ಜಿಗ ಸಿನಿಮಾದಲ್ಲಿ ಕೊರಗಜ್ಜನ ಕಾರಣಿಕವನ್ನು ತೋರಿಸಲಾಗಿದೆ. ಇದರಿಂದಾಗಿ ಕಾಂತಾರ ಸಿನಿಮಾ ಸೇರಿದಂತೆ ಯಾವುದೇ ಸಿನಿಮಾಗಳಲ್ಲಿ ದೈವಾರಾಧನೆಯನ್ನು ತೋರಿಸಬಾರದು ಎಂದು ಸ್ಥಳೀಯರು ಹಾಗೂ ತುಳುನಾಡು ದೈವಾರಾಧನೆ ಸಂರಕ್ಷಣಾ ವೇದಿಕೆ ಹೇಳಿದೆ.