ಅಕಾಲಿಕ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ; ಕಾರ್ಯಕ್ರಮಗಳೆಲ್ಲ ರದ್ದು
ಬೆಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಕರಾವಳಿಯಲ್ಲಿ ನಿನ್ನೆ ಸಂಜೆಯಿಂದೀಚೆಗೆ ಗುಡುಗು ಮಿಂಚಿನೊಂದಿಗೆ ಧಾರಾಕಾರ ಮಳೆ ಸುರಿಯುತ್ತಿದೆ. ಅಕಾಲಿಕ ಮಳೆ ಹಲವು ಅನಾಹುತಗಳನ್ನೂ ಸೃಷ್ಟಿಸಿದೆ. ಸಿಡಿಲು ಬಡಿದು ಪುತ್ತೂರಿನ ಕೆಯ್ಯೂರು ಸಮೀಪ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಬಂಟ್ವಾಳದಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಅಪಾರ ಹಾನಿಯಾಗಿದೆ. ಮನೆ ಮಂದಿ ಅದೃಷ್ಟವಶಾತ್ ಪಾರಾಗಿದ್ದಾರೆ.
ಉಡುಪಿ ಜಿಲ್ಲೆಯ ಕೆಲವೆಡೆಗಳಲ್ಲಿ ಮಳೆಯಿಂದಾಗಿ ಕೃತಕ ನೆರೆ ಸೃಷ್ಟಿಯಾಗಿ ಜನರು ಸಮಸ್ಯೆ ಅನುಭವಿಸಿದ್ದಾರೆ. ನಿನ್ನೆ ರಾತ್ರಿಯಿಂದೀಚೆಗೆ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ಹೀಗೆ ಮಳೆಯಾಗುತ್ತಿರುವುದು ಅಪರೂಪದ ವಿದ್ಯಮಾನ ಎನ್ನಲಾಗಿದೆ.
ಹವಾಮಾನ ಇಲಾಖೆ ದಕ್ಷಿಣ ಕನ್ನಡ, ಉಡುಪಿ ಸೇರಿ ಹತ್ತು ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿ ಈ ಹತ್ತು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ಸಾರಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ರಾಮನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಪರಿಣಾಮ ಆಗಲಿದೆ ಎಂಬ ಮುನ್ಸೂಚನೆ ಇದೆ.
ಸಚಿವರ ಕಾರ್ಯಕ್ರಮಗಳು ರದ್ದು
ಫೆಂಗಲ್ ಚಂಡಮಾರುತ ಪರಿಣಾಮದಿಂದಾಗಿ ಮಂಗಳವಾರ ಮಂಗಳೂರಿನಲ್ಲಿ ನಡೆಯಬೇಕಿದ್ದ ಬಹುಸಂಸ್ಕೃತಿ ಉತ್ಸವವನ್ನು ಮುಂದೂಡಲಾಗಿದೆ. ಹೀಗಾಗಿ, ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ಮತ್ತು ಸಚಿವ ಶಿವರಾಜ್ ತಂಗಡಗಿ ಪ್ರವಾಸ ರದ್ದಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲಾಡಳಿತ ಸೇರಿದಂತೆ ವಿವಿಧ ಅಕಾಡೆಮಿಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಫೆಂಗಲ್ ಚಂಡಮಾರುತದಿಂದ ಮಳೆ ಹಿನ್ನೆಲೆ ಕಾರ್ಯಕ್ರಮ ಮುಂದೂಡಿ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
ಸೋಮವಾರ ಮಂಗಳೂರಿನ ಕೊಟ್ಟಾರ ಚೌಕಿ, ತಲಪಾಡಿ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿತ್ತು. ಜಿಲ್ಲಾ ಪಂಚಾಯತ್ ಸಂಭಾಗಣದಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಸಭೆ ನಡೆಸುತ್ತಿರುವಾಗಲೇ ಸಭಾಂಗಣಕ್ಕೆ ಮಳೆ ನೀರು ನುಗ್ಗಿತ್ತು.
ಉಡುಪಿ ಜಿಲ್ಲೆಯಲ್ಲೂ ಸೋಮವಾರ ಸಂಜೆಯಿಂದ ಭಾರಿ ಮಳೆಯಾಗುತ್ತಿದೆ. ಉಡುಪಿ ನಗರ, ಕಾರ್ಕಳ, ಕುಂದಾಪುರ, ಕಾಪು, ಬೈಂದೂರು ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ.
ಕುಕ್ಕೆಯಲ್ಲಿ ಮುನ್ನೆಚ್ಚರಿಕೆ
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಜಾತ್ರೆ ನಡೆಯುತ್ತಿರುವುದರಿಂದ ಭಕ್ತರ ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಭಕ್ತರು ಕುಮಾರಧಾರಾ ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಪ್ರವಾಸಿಗರು ಕುಮಾರಧಾರಾ ನದಿಗೆ ಇಳಿಯಬಾರದು ಎಂದು ಪುತ್ತೂರು ಉಪ ಆಯುಕ್ತ ಜುಬಿನ್ ಮೊಹಾಪಾತ್ರ ಸೂಚಿಸಿದ್ದಾರೆ.
ಪ್ರಯಾಣಿಕರ ಪರದಾಟ
ಫೆಂಗಲ್ ಚಂಡಮಾರುತದಿಂದಾಗಿ ಮಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ನಗರದ ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಚರಂಡಿಗಳು ಬ್ಲಾಕ್ ಆಗಿ ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ಕೊಟ್ಟಾರ ಚೌಕಿಯಲ್ಲಿ ಕೃತಕ ನೆರೆ ಸೃಷ್ಟಿಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸುರತ್ಕಲ್, ಮುಲ್ಕಿ, ಉಡುಪಿ ಕಡೆ ಹೋಗುವ ಮತ್ತು ಮಂಗಳೂರಿಗೆ ಬರುವ ಪ್ರಯಾಣಿಕರು ಪರದಾಡುವಂತಾಗಿದೆ.