ಕಟ್ಟಡಕ್ಕೆ ಬೆಂಕಿಹಚ್ಚಿ ಪ್ರಿಯಕರ, ಆತನ ಸ್ನೇಹಿತನ ಹತ್ಯೆ
ಮುಂಬಯಿ: ಪ್ರಿಯಕರ ಹಾಗೂ ಆತನ ಸ್ನೇಹಿತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್‌ನ ಜನಪ್ರಿಯ ನಟಿ ನರ್ಗಿಸ್ ಫಕ್ರಿಯ ಸಹೋದರಿ ಅಲಿಯಾ ಫಕ್ರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಿಂದಿಯ ರಾಕ್‌ಸ್ಟಾರ್ ಸೇರಿದಂತೆ ಹಲವು ಭಾರತೀಯ ಸಿನೆಮಾಗಳಲ್ಲಿ ನಟಿಸಿರುವ ನರ್ಗಿಸ್ ಫಕ್ರಿ ಮೂಲತಃ ಅಮೆರಿಕದವರು. ಅವರ ಸಹೋದರಿ ಅಲಿಯಾ ಫಕ್ರಿ ಕೂಡ ಸೆಲೆಬ್ರಿಟಿಯಾಗಿದ್ದು, ಆಕೆಯ ಮೇಲೆ ನ್ಯೂಯಾರ್ಕ್‌ನಲ್ಲಿ ಬಾಯ್‌ಫ್ರೆಂಡ್ ಮತ್ತು ಆತನ ಗೆಳೆಯನನ್ನು ಕೊಂದ ಆರೋಪವಿದೆ.
ಬಾಯ್‌ಫ್ರೆಂಡ್ ಎಡ್ವರ್ಡ್ ಜೇಕಬ್ (35) ಮತ್ತು ಆತನ ಸ್ನೇಹಿತ ಅನ್‌ಸ್ಟೆಶಿಯ ಎಟ್ಟಿನ್ (33) ಎಂಬಾತನನ್ನು ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿ ಅವರಿದ್ದ ಎರಡು ಮಹಡಿಯ ಗ್ಯಾರೇಜ್‌ಗೆ ಬೆಂಕಿಹಚ್ಚಿ ಸಾಯಿಸಲಾಗಿತ್ತು.
ಕಳೆದ ನ.2ರಂದು ನಸುಕಿನ ವೇಳೆ ಈ ಘಟನೆ ಸಂಭವಿಸಿದೆ.
ಕಟ್ಟಡ ಬೆಂಕಿ ಹತ್ತಿಕೊಂಡು ಉರಿಯುತ್ತಿರುವಾಗ ಅಲಿಯಾ ಗ್ಯಾರೇಜ್ ಹೊರಗೆ ನಿಂತು ನೀವು ಇಂದು ಸಾಯಲಿದ್ದೀರಿ ಎಂದು ಕಿರುಚುತ್ತಿದ್ದುದನ್ನು ಅಕ್ಕಪಕ್ಕದವರು ಕೇಳಿಸಿಕೊಂಡಿದ್ದರು. ಇಬ್ಬರು ಸ್ನೇಹಿತರು ಒಳಗೆ ಮಲಗಿರುವಾಗ ಅಲಿಯಾ ಕಟ್ಟಡಕ್ಕೆ ಬೆಂಕಿ ಹಚ್ಚಿರಬೇಕೆಂದು ಶಂಕಿಸಿ ಆಕೆಯನ್ನು ಬಂಧಿಸಲಾಗಿದೆ. ಆಕೆಯೇ ಪ್ರಮುಖ ಆರೋಪಿಯಾಗಿರುವುದರಿಂದ ಆರೋಪ ಸಾಬೀತಾದರೆ ಆಜೀವ ಕಾರಾಗೃಹ ವಾಸದ ಶಿಕ್ಷೆಯಾಗಲಿದೆ.