ಪುತ್ತೂರು: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಡಿ.4 ರಂದು ಮಂಗಳೂರಿನ ಮಿನಿವಿಧಾನ ಸೌಧದ ಎದುರು ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣ ಪ್ರಸನ್ನ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಂಗ್ಲಾದಲ್ಲಿ ಮುಸ್ಲಿಂ ಮೂಲಭೂತವಾದಿಗಳು ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ದೌರ್ಜನ್ಯ ನಡೆಸುತ್ತಿದ್ದಾರೆ. ಅನೇಕ ಹೆಣ್ಣು ಮಕ್ಕಳ ಮಾನಹರಣದ ಜತೆ ಮಕ್ಕಳನ್ನು ಒಳಗೊಂಡಂತೆ ಬರ್ಬರವಾಗಿ ಹತ್ಯೆ ಮಾಡುತ್ತಿದ್ದಾರೆ. ಹಿಂದೂಗಳ ಆಸ್ತಿಪಾಸ್ತಿಗಳನ್ನು ನಾಶ ಮಾಡುತ್ತಿದ್ದಾರೆ. ಹಿಂದೂಗಳ ಹಕ್ಕಿಗಾಗಿ ಹೋರಾಟ ಮಾಡಿದ ಇಸ್ಕಾನ್ ಸ್ವಾಮೀಜಿ ಚಿನ್ಮೋಯ್ ಕೃಷ್ಣದಾಸರನ್ನು ಸುಳ್ಳು ಆರೋಪಗಳ ಮೇಲೆ ಬಂಧಿಸಲಾಗಿದೆ. ಅವರ ಆರೋಗ್ಯ ವಿಚಾರಿಸಲು ಹೋದ ಇಬ್ಬರು ಸಂತರನ್ನೂ ಬಂಧಿಸಿದ್ದಾರೆ. ಇದನ್ನು ವಿಶ್ವಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
ಬಾಂಗ್ಲಾ ದೇಶಕ್ಕೆ ಅಸ್ತಿತ್ವ ಬಂದದ್ದೇ ಭಾರತ ದೇಶದಿಂದ. ಅದರಲ್ಲೂ ಇಸ್ಕಾನ್ ಸಂಸ್ಥೆ ಬಾಂಗ್ಲಾ ನಿರಾಶ್ರಿತರಿಗೆ ಅನ್ನ ನೀಡಿ ಅವರನ್ನು ರಕ್ಷಿಸಿದೆ. ಅಂತಹಾ ಸಂಸ್ಥೆಯ ವಿರುದ್ಧ, ಹಿಂದೂಗಳ ವಿರುದ್ಧ ಹೀನಾಯವಾಗಿ ನಡೆದುಕೊಳ್ಳುತ್ತಿರುವುದು ಖಂಡನೀಯ ಎಂದರು.
ಡಿ.4 ರಂದು ಬೆಳಿಗ್ಗೆ ಜ್ಯೋತಿ ವೃತ್ತದಿಂದ ಮೆರವಣಿಗೆ ಮೂಲಕ ಮಿನಿ ವಿಧಾನಸೌಧದ ತನಕ ಸಾಗಿ ಬಳಿಕ ಪ್ರತಿಭಟನಾ ಸಭೆ ನಡೆದು ಅಲ್ಲಿ ಹಕ್ಕೊತ್ತಾಯಗಳನ್ನು ಮಂಡಿಸಿ, ಹಿಂದೂಗಳಿಗೆ ರಕ್ಷಣೆ ನೀಡುವಂತೆ ಬಾಂಗ್ಲಾ ಸರಕಾರಕ್ಕೆ ಇಲ್ಲಿನ ಸರಕಾರ ಒತ್ತಡ ತರುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ ತೆಂಕಿಲ, ಕೋಶಾಧಿಕಾರಿ ಮಾಧವ ಪೂಜಾರಿ, ಸಂಯೋಜಕ ಭರತ್ ಕುಮ್ಡೇಲು, ನಗರ ಅಧ್ಯಕ್ಷ ದಾಮೋದರ ಪಾಟಾಳಿ ಉಪಸ್ಥಿತರಿದ್ದರು.