ಇನ್ನೊಂದು ದೊಡ್ಡ ಚುನಾವಣೆಗೆ ತಯಾರಾಗುತ್ತಿರುವ ಕಾಂಗ್ರೆಸ್‌

ಸೋಲು, ಒಳಜಗಳದಿಂದ ಕಳೆಗುಂದಿರುವ ಬಿಜೆಪಿ

ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದ ನಾನಾ ಕಾರಣಗಳಿಂದಾಗಿ ಬಾಕಿಯಿರುವ ತಾಲೂಕು ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ ಚುನಾವಣೆ ಮುಂದಿನ ವರ್ಷ ನಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ. ಸ್ವತಹ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಜಿಪಂ ಮತ್ತು ತಾಪಂ ಚುನಾವಣೆ ನಡೆಸುವ ಬಗ್ಗೆ ಸುಳಿವು ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್‌ ಡಿ.5ರಂದು ಹಾಸನದಲ್ಲಿ ನಡೆಯಲಿರುವ ಕಾಂಗ್ರೆಸ್‌ ಸಮಾವೇಶದ ಕುರಿತು ಮಾಹಿತಿ ನೀಡುವ ವೇಳೆ, ನಾವು ಯಾವುದೋ ಒಂದು ಉದ್ದೇಶ ಇಟ್ಟುಕೊಂಡು ವೇದಿಕೆ ಸಿದ್ಧ ಮಾಡಬೇಕಲ್ಲವೇ? ಜಿ.ಪಂ. ಮತ್ತು ತಾ.ಪಂ. ಚುನಾವಣೆ ಸದ್ಯದಲ್ಲೇ ನಡೆಯಲಿದೆ ಎನ್ನುವುದು ನಿಜ. ಅದನ್ನು ತಡೆಯಲು ಆಗುವುದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಫೆಬ್ರವರಿ ವೇಳೆಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಮೂರು ವಿಧಾನಸಭೆ ಕ್ಷೇತ್ರಗಳ ಗೆಲುವಿನಿಂದ ಕಾಂಗ್ರೆಸ್‌ ಪಾಳಯದಲ್ಲಿ ಹೊಸ ಹುರುಪು ಕಾಣಿಸಿಕೊಂಡಿದ್ದು, ಈ ಗೆಲುವಿನ ನಾಗಾಲೋಟವನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ ನಾಲ್ಕು ವರ್ಷಗಳಿಂದ ಏನೇನೋ ಕಾರಣ, ನೆಪಗಳನ್ನು ಹೇಳಿಕೊಂಡು ಮುಂದೂಡಿಕೊಂಡು ಬಂದಿದ್ದ ತಾಪಂ, ಜಿಪಂ ಚುನಾವಣೆ ನಡೆಸಲು ಮುಂದಾಗಿದೆ ಎನ್ನಲಾಗುತ್ತಿದೆ.
ವಕ್ಫ್‌ ವಿವಾದ, ಭ್ರಷ್ಟಾಚಾರಗಳ ಆರೋಪಗಳು, ಒಳಜಗಳದಂತಹ ಹಲವು ಅಡೆತಡೆಗಳು ಇದ್ದರೂ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಕ್ಲೀನ್‌ಸ್ವೀಪ್‌ ಮಾಡುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ. ಇದು ಪಂಚ ಗ್ಯಾರಂಟಿಗಳ ಪ್ರಭಾವ ಎನ್ನುವುದು ಖಾತರಿಯಾಗಿದ್ದು, ಹೀಗಾಗಿ ಈ ಗೆಲುವನ್ನು ಮುಂದುವರಿಸಲು ಕಾಂಗ್ರೆಸ್‌ ಮುಂದಾಗಿದೆ. ಈ ಗೆಲುವಿನಿಂದ ಮತದಾರರ ಒಲವು ಇನ್ನೂ ಕಾಂಗ್ರೆಸ್‌ ಕಡೆಗಿದೆ. ಗ್ಯಾರಂಟಿಗಳು ಇರುವ ತನಕ ಚುನಾವಣೆಗಳನ್ನು ಗೆಲ್ಲುತ್ತಾ ಹೋಗಬಹುದು ಎನ್ನುವ ಮರ್ಮವನ್ನು ಕಾಂಗ್ರೆಸ್‌ ನಾಯಕರು ಅರಿತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಜಿ.ಪಂ., ತಾ.ಪಂ. ಚುನಾವಣೆಗೆ ಕೈಹಾಕಲು ನಿರ್ಧರಿಸಿದೆ.































 
 

ವಾಸ್ತವವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಲಪ್ರದರ್ಶನಕ್ಕೆ ಅವರ ನಿಷ್ಠರು ಏರ್ಪಡಿಸಿದ್ದ ಹಾಸನದ ಸಮಾವೇಶವನ್ನು ಪಕ್ಷದ ಅಧಿಕೃತ ಕಾರ್ಯಕ್ರಮವಾಗಿ ಬದಲಾಯಿಸುವ ತಂತ್ರಗಾರಿಕೆಯಲ್ಲಿ ಶಿವಕುಮಾರ್‌ ಯಶಸ್ವಿಯಾಗಿದ್ದಾರೆ. ಈ ಸಮಾವೇಶದ ಮೂಲಕ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಿ, ಸಿದ್ಧಗೊಳಿಸಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ 2019-20ರಿಂದ ಜಿ.ಪಂ., ತಾ.ಪಂ.ಗಳಿಗೆ ಚುನಾವಣೆ ನಡೆದಿಲ್ಲ. ಈ ಚುನಾವಣೆ ವಿಚಾರ ಹೈಕೋರ್ಟ್‌ ತನಕ ಹೋಗಿದ್ದು, ನ್ಯಾಯಾಲಯ ಪದೇ ಪದೆ ಆದೇಶ ನೀಡಿದ ಹೊರತಾಗಿಯೂ ಸರಕಾರ ಚುನಾವಣೆ ನಡೆಸಲು ಮುಂದಾಗಿರಲಿಲ್ಲ. ಚುನಾವಣೆಯನ್ನು ನಿಗದಿತ ಸಮಯದಲ್ಲಿ ನಡೆಸಲು ಅವಕಾಶ ಮಾಡಿಕೊಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಈ ಮಧ್ಯೆ ರಾಜ್ಯ ಚುನಾವಣ ಆಯೋಗ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿ, ಮೀಸಲಾತಿ ಕರಡು ಪ್ರಕಟಿಸಿತ್ತು. ನಂತರ ಕೋವಿಡ್‌ ಕಾರಣದಿಂದಾಗಿ ಚುನಾವಣೆ ಸಾಧ್ಯವಾಗಿರಲಿಲ್ಲ. ಈ ನಡುವೆ ವಿಧಾನಸಭೆ, ಲೋಕಸಭೆ ಚುನಾವಣೆ ಬಂದುಹೋದರೂ ಜಿಪಂ ಮತ್ತು ತಾಪಂ ಚುನಾವಣೆ ಮಾತ್ರ ನನೆಗುದಿಗೆ ಬಿದ್ದಿತ್ತು.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸರಕಾರ ಜಿಪಂ, ತಾಪಂ ಕ್ಷೇತ್ರ ಪುನರ್‌ವಿಂಗಡಣೆಯನ್ನು ಅಂತಿಮಗೊಳಿಸಿದೆ. ಇದನ್ನು 12 ವಾರಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು 2023ರ ಡಿ. 19ರಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಭರವಸೆ ನೀಡಿತ್ತು. ಆದರೆ ಈ ಭರವಸೆಯಂತೆ ಮೀಸಲಾತಿ ಪ್ರಕಟಿಸಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. 2024ರ ನ.27ರಂದು ಈ ಅರ್ಜಿ ವಿಚಾರಣೆಗೆ ಬಂದಾಗ ಸರಕಾರ ಮತ್ತೆ ಕಾಲಾವಕಾಶ ಕೇಳಿದ್ದು, ಡಿ. 12ರಂದು ವಿಚಾರಣೆ ನಡೆಯಲಿದೆ. ಅಂದು ಈ ಅರ್ಜಿ ಮೇಲಿನ ತೀರ್ಪು ಬಂದರೆ ಚುನಾವಣೆ ಪ್ರಕ್ರಿಯೆ ಚುರುಕಾಗಬಹುದು ಎನ್ನಲಾಗಿದೆ.

ಬಿಜೆಪಿ ಒಳ ಜಗಳದಲ್ಲೇ ಮಗ್ನ

ಅತ್ತ ಕಾಂಗ್ರೆಸ್‌ ಗೆಲುವಿನಿಂದ ಬೀಗಿ ಇನ್ನೊಂದು ಚುನಾವಣೆ ಎದುರಿಸಲು ದೊಡ್ಡ ತಯಾರಿ ಆರಂಭಿಸಿದ್ದರೂ ಇತ್ತ ವಿಪಕ್ಷವಾದ ಬಿಜೆಪಿ ಮಾತ್ರ ಒಳಗಜಳದಲ್ಲೇ ಮಗ್ನವಾಗಿದೆ. ಬಿಜೆಪಿಯ ಒಳ ಜಗಳ ತಾರಕ್ಕೇರಿದ್ದು, ಅಲ್ಲಿ ಎರಡು ಬಣಗಳಿರುವುದು ಜಗಜ್ಜಾಹೀರಾಗಿದೆ. ರಾಜ್ಯದಲ್ಲಿ ಸೋಲಿನ ಮೇಲೆ ಸೋಲು ಅನುಭವಿಸುತ್ತಿರುವ ಬಿಜೆಪಿಯ ನಾಯಕತ್ವದ ಮೇಲೆ ವಿಶ್ವಾಸವೇ ಹೋಗಿದೆ. ವಕ್ಫ್‌ ವಿವಾದ, ಅನೇಕ ಭ್ರಷ್ಟಾಚಾರ ಪ್ರಕಣಗಳು ಬರೀ ಒಂದೂವರೆ ವರ್ಷದ ಕಾಂಗ್ರೆಸ್‌ ಆಡಳಿತದಲ್ಲಿ ನಡೆದಿದ್ದರೂ ಅದರ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಲು ಸಾಧ್ಯವಾಗದ ಬಿಜೆಪಿ ನಾಯಕರ ಮೇಲೆ ಪಕ್ಷದ ಸಾಮಾನ್ಯ ಕಾರ್ಯಕರ್ತರು ಕೂಡ ವಿಶ್ವಾಸ ಕಳೆದುಕೊಂಡಿದ್ದಾರೆ.
ಬಸನಗೌಡಪಾಟೀಲ್‌ ಯತ್ನಾಳ್‌ ನೇತೃತ್ವದ ಬಣ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಅವರ ತಂದೆ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧವೇ ಜಗಳಕ್ಕೆ ನಿಂತಿರುವುದರಿಂದ ಪಕ್ಷ ಸಾಕಷ್ಟು ದುರ್ಬಲವಾಗಿರುವಂತೆ ಕಾಣಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಇನ್ನೊಂದು ಚುನಾವಣೆ ಎದುರಿಸುವುದು ಹೇಗೆ ಎಂಬ ಚಿಂತೆ ಕಾರ್ಯಕರ್ತರನ್ನು ಕಾಡುತ್ತಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top